ದೇಶದಾದ್ಯಂತ ಬಾಬ್ರಿ ಮಸೀದಿಯ ಬಿಸಿ ಚರ್ಚೆ ನಡೆಯುತ್ತಿರುವಾಗ, ಕೃಷ್ಣನ ಶಂಖನಾದವೇ ನಮ್ಮ ಸಪ್ತಸ್ವರಗಳಿಗೆ ಪ್ರೇರಣೆ ಎಂದು ಸಾಮರಸ್ಯದ ಹೇಳಿಕೆ ನೀಡಿದ ಝಾಕಿರ್ ಹುಸೇನ್!!

0
453

ಕೃಷ್ಣ ಮಠದಲ್ಲಿ ಝಾಕಿರ್ ಹುಸೇನ್ ರಸದೌತಣ

ಶ್ರೀಕೃಷ್ಣ ಮಠದೊಳಗೆ ಆಗಮಿಸಿ ಶ್ರೀಕೃಷ್ಣ ದೇವರ ದರ್ಶನ ಮಾಡಿದ ತಬಲ ಮಾಂತ್ರಿಕ ಝಾಕೀರ್ ಹುಸೇನ್ ಕನಕ ನವಗ್ರಹ ಕಿಂಡಿಯ ಮುಂದೆ ನಿಂತು ಶ್ರೀಕೃಷ್ಣನ ದರ್ಶನ ಪಡೆದರು. ದೇವರ ಮುಂದೆ ನಿಂತು ಕೈಮುಗಿದು ಕೆಲ ನಿಮಿಷಗಳ ಕಾಲ ಧ್ಯಾನ ಮಾಡಿ ಶಿರಭಾಗಿ ಭಗವಂತನಿಗೆ ವಂದಿಸಿದರು.

ನಂತರ ಕೃಷ್ಣಮಠದ ರಾಜಾಂಗಣದಲ್ಲಿ ಎರಡೂವರೆ ಗಂಟೆಗಳ ಕಾಲ ಕಾರ್ಯಕ್ರಮ ನಡೆಸಿಕೊಟ್ಟ ಉಸ್ತಾದ್ ಝಾಕಿರ್ ಹುಸೇನ್ ತಮ್ಮ ಮಾಂತ್ರಿಕ ಕೈಗಳಿಂದ ತಬಲ ನುಡಿಸಿ ರಸದೌತಣ ಬಡಿಸಿದರು. ಬೆರಳಿನ ವೇಗಕ್ಕೆ ಸಾವಿರಾರು ಮಂದಿ ಅಭಿಮಾನಿಗಳು ತಮ್ಮನ್ನೇ ತಾವು ಮರೆತರು. ವಿದ್ವಾನ್ ಕುಮಾರೇಶ್ ವಯೋಲಿನ್, ವಿದೂಷಿ ಜಯಂತಿ ಕುಮಾರೇಶ್ ವೀಣೆ ನಾದ ತಬಲ ಮಾಂತ್ರಿಕ ಝಾಕಿರ್ ಹುಸೇನ್ ಗೆ ಸಾಥ್ ನೀಡಿದರು.

ಝಾಕಿರ್ ಹುಸೇನ್ ರಿಂದ ಗಣಪತಿ ಸ್ತುತಿ- ಶಿವನಾಮ ಜಪ: ಕಾರ್ಯಕ್ರಮದ ನಡುವೆ ಝಾಕಿರ್ ಹುಸೇನ್ ಗಣಪತಿ, ಶ್ರೀಕೃಷ್ಣ ಮತ್ತು ಶಿವನನ್ನು ನೆನಪಿಸಿಕೊಂಡರು. ಗಣಪತಿಯ ಅನುಗ್ರಹ, ಕೃಷ್ಣನ ಶಂಖನಾದ, ಶಿವನ ಅನುಗ್ರಹ ನನ್ನ ಮೇಲೆ ಇರುವುದರಿಂದ ಈ ಹಂತಕ್ಕೆ ಬಂದು ನಿಂತಿದ್ದೇನೆ ಎಂದರು. ತಬಲದಲ್ಲಿ ಢಮರುಗ ನುಡಿಸಿ ಝಾಕಿರ್ ಚಪ್ಪಾಳೆ ಶಿಳ್ಳೆ ಗಿಟ್ಟಿಸಿದರು.

ಕಾರ್ಯಕ್ರಮದ ಕೊನೆಗೆ ಪೇಜಾವರ ಹಿರಿಯ, ಕಿರಿಯ ಶ್ರೀ, ಸೋದೆ ವಿಶ್ವವಲ್ಲಭ ಸ್ವಾಮೀಜಿಯ ಪಾದ ಮುಟ್ಟಿ ಝಾಕಿರ್ ನಮಸ್ಕರಿಸಿದರು. ಸ್ವಾಮೀಜಿಗಳು ಆತ್ಮೀಯವಾಗಿ ಕಲಾವಿದ ಝಾಕಿರ್ ಹುಸೇನ್ ರನ್ನು ಸ್ಪರ್ಶಿಸಿ, ಅನುಗ್ರಹ ಮಂತ್ರಾಕ್ಷತೆ ನೀಡಿದರು.