ಮಹಿಳೆಯರೇ ಎಚ್ಚರ! ಒಂಟಿಯಾಗಿ ಓಲಾ ಕ್ಯಾಬ್ ಬುಕ್ ಮಾಡುವಮುನ್ನ…

0
1913

ಹೊಸದಿಲ್ಲಿ : ನೀವು ಒಂಟಿ ಮಹಿಳೆಯಾಗಿದ್ದು ನಿಮ್ಮ ತುರ್ತು ಹಾಗೂ ಅನುಕೂಲಕ್ಕೆಂದು ನೀವು ಕ್ಯಾಬ್ ಬುಕ್ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಆದರೆ ಕ್ಯಾಬ್ ಚಾಲಕ ತನ್ನ ಫೋನ್ ಕ್ಯಾಮೆರಾ ಮೂಲಕ ನಿಮಗೆ ಗೊತ್ತಾಗದಂತೆಯೇ ಕಾರಿನೊಳಗೆ ನಿಮ್ಮ ಎಲ್ಲ ಚಲನವಲನ, ಮಾತುಕತೆ, ಹಾವಭಾವ, ಮೈಮಾಟ ಇತ್ಯಾದಿ ಎಲ್ಲವನ್ನೂ ವಿಡಿಯೋದಲ್ಲಿ ಸೆರೆ ಹಿಡಿದರೆ ನಿಮಗೆ ಹೇಗಾದೀತು ?

ನಿಮ್ಮ ಖಾಸಗೀತನವನ್ನು ಆತ ಸಂಪೂರ್ಣವಾಗಿ ದೋಚಿಕೊಂಡು ಇತರರೊಡನೆ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡರೆ ಆಗ ನಿಮ್ಮ ಪರಿಸ್ಥಿತಿ ಹೇಗಿದ್ದೀತು ? ಯೋಚಿಸಿ ನೋಡಿ. ಇನ್ನು ಮುಂದೆ ನೀವು ಒಂಟಿ ಮಹಿಳೆಯಾಗಿ ಕ್ಯಾಬ್ ಗೊತ್ತು ಮಾಡಿಕೊಂಡು ಪ್ರಯಾಣಿಸುವಾಗ ಇಂತಹ ಒಂದು ಕೆಟ್ಟ ಅನುಭವ ನಿಮ್ಮ ಪಾಲಿಗೆ ಆಗದಂತೆ ಎಚ್ಚರ ವಹಿಸಿ. ಇಲ್ಲದಿದ್ದರೆ ನಿಮ್ಮ ಖಾಸಗೀತನ ಸಂಪೂರ್ಣವಾಗಿ ಸೂರೆಗೊಂಡು ಹರಾಜಾಗಿ ಹೋದೀತು – ಜಾಗ್ರತೆ !

ಓಲಾ ಕ್ಯಾಬ್ ಬುಕ್ ಮಾಡಿಕೊಂಡು ಪ್ರಯಾಣಿಸಿದ ದಿಲ್ಲಿಯ ಪ್ರಿಯಾಂಕಾ ಎಂಬ ಹುಡುಗಿ ತನಗಾದ ಈ ಕಹಿ ಅನುಭವವನ್ನು ಫೇಸ್ ಬುಕ್ನಲ್ಲಿ ಹೇಳಿಕೊಂಡಿದ್ದು ಅದೀಗ ವೈರಲ್ ಆಗಿದೆ. ಎಲ್ಲೆಡೆಯ ಫೇಸ್ ಬುಕ್ ಬಳಕೆದಾರರು ಈ ಘಟನೆಯ ಬಗ್ಗೆ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕಾ ಳ ಈ ಫೇಸ್ ಬುಕ್ ಪೋಸ್ಟ್ ಕಂಡ ಬಳಿಕ ಓಲಾ ಸಂಸ್ಥೆ ಆ ಕಾಮುಕ ಕ್ಯಾಬ್ ಚಾಲಕನನ್ನು ತನ್ನ ಸೇವೆಯಿಂದ ಕಿತ್ತು ಹಾಕಿದೆ.

ವೋಲಾ ಕ್ಯಾಬ್ ಚಾಲಕನ ಈ ಕೃತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದ ಪ್ರಿಯಾಂಕಾ ಅವರಿಗೆ, “ಮ್ಯಾಮ್, ಈ ದೂರಿನಿಂದ ಏನೂ ಪ್ರಯೋಜನವಾಗುವುದಿಲ್ಲ; ಏಕೆಂದರೆ ಇದು ಬೇಲೇಬಲ್ ಆಫೆನ್ಸ್. ಆತನನ್ನು ಬಿಟ್ಟು ಬಿಡ್ತಾರೆ’ ಎಂಬ ಉತ್ತರ ಸಿಕ್ಕಿದೆ.

ಪ್ರಿಯಾಂಕಾ ಅವರ ಈ ಓಲಾ ಕ್ಯಾಬ್ ಕಹಿ ಅನುಭವ ನಡು ರಾತ್ರಿ ಆದದ್ದೇನೂ ಅಲ್ಲ; ನಡು ಮಧ್ಯಾಹ್ನವೇ ಆಗಿರುವಂತಹದ್ದು. ದಿಲ್ಲಿಯ ಚಾಣಕ್ಯಪುರಿಗೆ ಹೋಗಲು ಆಕೆ ಓಲಾ ಕ್ಯಾಬ್ ಗೊತ್ತುಪಡಿಸಿಕೊಂಡಿದ್ದಳು. ಕಾರು ಹತ್ತಿದ ಬಳಿಕ ಪ್ರಿಯಾಂಕಾ ತನ್ನ ಇಮೇಲ್ ಚೆಕ್ ಮಾಡುವುದು, ಫೋನ್ ಕಾಲ್ಗಳಿಗೆ ಉತ್ತರಿಸುವುದು ಇತ್ಯಾದಿಗಳನ್ನು ಮಾಡಿದ್ದಾರೆ. ಆದರೆ ಹಾಗೆ ಮಾಡುತ್ತಲೇ ತನ್ನನ್ನು ಕ್ಯಾಬ್ ಚಾಲಕನು ರಿಯರ್ ಮಿರರ್ನಲ್ಲಿ ತೀವ್ರವಾಗಿ ಗಮನಿಸುತ್ತಿರುವುದನ್ನು ಆಕೆ ನೋಡಿದ್ದಾಳೆ.

ಗುಮಾನಿ ಪಟ್ಟ ಆಕೆಗೆ ತನ್ನೆದುರಿಗೆ ನೇರವಾಗಿ ಚಾಲಕನು ತನ್ನ ಫೋನ್ ಕ್ಯಾಮೆರಾ ಸೆಟ್ ಮಾಡಿರುವುದು ಹಾಗೂ ಅದರಲ್ಲಿ ತನ್ನ ಎಲ್ಲ ಚಟುವಟಿಕೆಗಳು ವಿಡಿಯೋ ದಾಖಲಾಗುತ್ತಿರುವದು ಕಂಡು ಬಂದಿದೆ.

ಒಡನೆಯೇ ಆಕೆ ಕ್ಯಾಬ್ ಚಾಲಕನಿಗೆ ವಾಹನವನ್ನು ನಿಲ್ಲಿಸಲು ಆದೇಶಿಸಿದ್ದಾಳೆ. ಕಾರು ನಿಲ್ಲಿಸಿದಾಕ್ಷಣ ಆಕೆ ಚಾಲಕನ ಕ್ಯಾಮೆರಾ ಫೋನ್ ಕಸಿದುಕೊಂಡು ಅಲ್ಲೇ ಸಮೀಪದಲ್ಲಿದ್ದ ಪೊಲೀಸ್ ಸಿಬಂದಿಗೆ ಕೊಟ್ಟು ಚಾಲಕನ ದುಷ್ಕೃತ್ಯವನ್ನು ವಿವರಿಸಿದ್ದಾಳೆ.

ಆ ಬಳಿಕ ತನ್ನ ಈ ಇಡಿಯ ವೃತ್ತಾಂತವನ್ನು ಪ್ರಿಯಾಂಕಾ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿದ್ದಾಳೆ.

ಆಕೆಯ ಕೊಟ್ಟಿರುವ ಎಚ್ಚರಿಕೆ ಹೀಗಿದೆ : ಮಹಿಳೆಯರೇ ಜಾಗ್ರತೆ, ನೀವು ಒಂಟಿಯಾಗಿದ್ದು ಕ್ಯಾಬ್ ಬುಕ್ ಮಾಡಿಕೊಂಡು ಪ್ರಯಾಣಿಸುವಾಗ ಚಾಲಕನು ನಿಮ್ಮ ಖಾಸಗೀತನವನ್ನು ವಿಡಿಯೋದಲ್ಲಿ ಸೂರೆ ಹೊಡೆಯುತ್ತಿದ್ದಾನೆಯೇ ಎಂಬುದರ ಮೇಲೆ ನಿಗಾ ಇಡಿ !

ಕೃಪೆ:ಉದಯವಾಣಿ