ಕಣಿವೆಯಲ್ಲಿ ನೀರೆಲ್ಲಿದೆ?

0
845

ಸದ್ಯದ ಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎನ್ನುವುದು ರಾಜ್ಯಸರ್ಕಾರದ ಸ್ಪಷ್ಟೋಕ್ತಿ. ಈ ಹೇಳಿಕೆ ನಡುವೆಯೇ ಕೆಆರ್‍ಎಸ್‍ನಿಂದ ನೀರಿನ ಹೊರಹರಿವು ನಿರಂತರವಾಗಿರುವುದು ಅಷ್ಟೇ ಸುಸ್ಪಷ್ಟ. ಹಾಗಾದರೆ ಸರ್ಕಾರ ತನ್ನ ಹೇಳಿಕೆಗೆ ಬದ್ಧವಾಗಿಲ್ಲವೇ? ಖಚಿತವಾಗಿ ಇಲ್ಲ ಎನ್ನದೆ ವಿಧಿಯಿಲ್ಲ. ನದಿಗೆ ನೀರು ಹರಿಸುವ ನೆಪದಲ್ಲಿ ಸಂಕಷ್ಟಸೂತ್ರ ಪಾಲಿಸುವ ಅನಿವಾರ್ಯತೆಗೆ ಸಿಲುಕಿದೆ. ಇನ್ನೆಷ್ಟು ದಿನ ಈ ಕಳ್ಳಾಟ. 39.8 ಟಿಎಂಸಿ ಮಾತ್ರ ಬಳಕೆ ಕಾವೇರಿ ಜಲಾನಯನ ಪ್ರದೇಶದ ಎಲ್ಲ ನಾಲ್ಕೂ ಜಲಾಶಯಗಳಲ್ಲಿರುವ ಇವತ್ತಿನ ಒಟ್ಟು ನೀರಿನ ಸಂಗ್ರಹ ಪ್ರಮಾಣ 63.11 ಟಿಎಂಸಿ ಮಾತ್ರ.

ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ

ಈ ಭಾಗದಲ್ಲಿ ಅಗಸ್ಟ್ 25ರವರೆಗೆ ಆಗಬೇಕಿದ್ದ ವಾಡಿಕೆ ಮಳೆ 172 ಮಿಲಿಮೀಟರ್. ಆದರೆ ಕೇವಲ 102 ಮಿಮಿ ಮಾತ್ರ ಮಳೆಯಾಗಿದೆ. ಆಂದರೆ 70 ಮಿಮಿಯಷ್ಟು ಮಳೆಯ ಕೊರತೆ ಎದುರಾಗಿದೆ. ಇರುವ 63.11 ಟಿಎಂಸಿ ನೀರಿನಲ್ಲಿ ಬಳಕೆಗೆ ಸಿಗುವುದು ಕೇವಲ 39.8 ಟಿಎಂಸಿ ಮಾತ್ರ. ಉಳಿದದ್ದ ಅಣೆಕಟ್ಟೆಯ ತಳಮಟ್ಟದ ನೀರು. ನಾಲ್ಕೂ ಜಲಾಶಯಗಳಿಗೆ ಒಟ್ಟಾರೆ ಇಂದಿನ ಒಳಹರಿವಿನ ಪ್ರಮಾಣ ಕೇವಲ 11,235 ಕ್ಯೂಸೆಕ್ಸ್ (0.97 ಟಿಎಂಸಿ) ಮಾತ್ರ. ಈ ಪರಿಸ್ಥಿತಿ ಮಧ್ಯೆ ಕೆಆರ್‍ಎಸ್‍ನಿಂದ ನಿರಂತರವಾಗಿ ನೀರು ಹರಿಯುತ್ತಿದೆ. ಕೊರತೆ ನಡುವೆಯೂ ಹರಿದ ನೀರು 2007ರ ಕಾವೇರಿ ನ್ಯಾಯಮಂಡಳಿ ತೀರ್ಪಿನಂತೆ ರಾಜ್ಯದ ಕಾವೇರಿ ಅಚ್ಚುಕಟ್ಟಿನ ಜಲಾಶಯಗಳಲ್ಲಿ ನೀರಾವರಿಗೆ 740 ಟಿಎಂಸಿ ನೀರು ಲಭ್ಯವಿದ್ದಾಗ ಕರ್ನಾಟಕದ ಪಾಲು 270 ಟಿಎಂಸಿ ಸಿಗಲಿದೆ. ಇಂತಹ ಸ್ಥಿತಿಯಲ್ಲಿ ಮಾತ್ರ ಜೂನ್‍ನಿಂದ ಆಗಸ್ಟ್‍ವರೆಗೆ ತಮಿಳುನಾಡಿಗೆ ಬಿಡಬೇಕಿರುವ ನೀರು 192 ಟಿಎಂಸಿ. ಈ ವರ್ಷದಲ್ಲಿ ಆ.24ರವರೆಗೆ ರಾಜ್ಯದಿಂದ ತಮಿಳುನಾಡಿಗೆ ಹರಿಸಿರುವ ನೀರಿನ ಪ್ರಮಾಣ 28.39 ಟಿಎಂಸಿ ಮಾತ್ರ. ಜೂನ್‍ನಲ್ಲಿ 2.39 ಟಿಎಂಸಿ, ಜುಲೈನಲ್ಲಿ 15.5 ಟಿಎಂಸಿ, ಆಗಸ್ಟ್ ತಿಂಗಳಲ್ಲಿ ಈವರೆಗೆ 9.9 ಟಿಎಂಸಿಗಳಷ್ಟು ಮಾತ್ರ ಕಾವೇರಿ ನೀರು ತಮಿಳುನಾಡಿನ ಬಿಳಿಗುಂಡ್ಲು ಜಲಾಶಯ ತಲುಪಿದೆ. ವಾಸ್ತವವಾಗಿ ಟ್ರಿಬ್ಯುನಲ್ ಪ್ರಕಾರ 94 ಟಿಎಂಸಿ ಹರಿಸಬೇಕಿತ್ತು. ಆದರೆ ರಾಜ್ಯದ ವಾಸ್ತವಸ್ಥಿತಿಯೇ ಬೇರೆಯಿದ್ದು ಇದನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಘೋಷಣೆಗೆ ಸರ್ಕಾರ ಬದ್ಧವಾಗಿರಲಿ ವಾಡಿಕೆಯಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ 18.85 ಲಕ್ಷ ಎಕರೆ ನೀರಾವರಿ ಆಧಾರಿತ ಕೃಷಿಬೆಳೆ ಇರುತ್ತದೆ. ಇದಕ್ಕೆ 250.62 ಟಿಎಂಸಿ ನೀರಿನ ಅಗತ್ಯವಿದೆ. ಅದರಲ್ಲಿ 30 ಟಿಎಂಸಿ ಕುಡಿಯುವ ಉದ್ದೇಶಕ್ಕೆ ಬಳಕೆಯಾಗುತ್ತದೆ. ಪ್ರಸ್ತುತ ಕೆಆರ್‍ಎಸ್‍ನಲ್ಲಿ 18.97, ಹೇಮಾವತಿಯಲ್ಲಿ 21.06, ಕಬಿನಿಯಲ್ಲಿ 15.21 ಹಾಗೂ ಹಾರಂಗಿ ಜಲಾಶಯದಲ್ಲಿ 7.84 ಟಿಎಂಸಿಯಷ್ಟು ಮಾತ್ರ ನೀರಿದೆ. ಇದು ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಕನಿಷ್ಠ ಪ್ರಮಾಣದಲ್ಲಿ ಈ ಭಾಗದ ನಾಲ್ಕೂ ಜಲಾಶಯಗಳಲ್ಲಿ ನೀರಿನ ಸಂಗ್ರಹವಿದೆ. ಈ ಅಣೆಕಟ್ಟುಗಳ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುತ್ತೇವೆಂದು ಈಗಾಗಲೇ ಸರ್ಕಾರ ಪ್ರಕಟಿಸಿರುವ ನಿಷ್ಠುರ ನಿಲುವಿಗೆ ಬದ್ಧವಾಗುವ ಅನಿವಾರತೆ ಇದೆ. ಇಂದು ಸರ್ವಪಕ್ಷ ಮುಖಂಡರ ಸಭೆ ಕಾವೇರಿ ವ್ಯಾಪ್ತಿಯಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಜಲಾಶಯಗಳಲ್ಲಿನ ನೀರಿನ ವಾಸ್ತವಸ್ಥಿತಿ ಹಿನ್ನೆಲೆಯಲ್ಲಿ ಸರ್ಕಾರ ಭವಿಷ್ಯದಲ್ಲಿ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲೆಂದೇ ಶನಿವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಈ ಭಾಗದ ಜನಪ್ರತಿನಿಧಿಗಳನ್ನೊಳಗೊಂಡ ಸರ್ವಪಕ್ಷ ಸಭೆ ವಿಧಾನಸೌಧದಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ನಡೆಯುವ ಸಭೆ, ಮಹದಾಯಿ ಕುರಿತು ನಡೆದಂತೆ ಕೇವಲ ಚರ್ಚೆ ನಡೆಸಿ ರಾಜ್ಯಪರ ವಾದಿಸುವ ಹಿರಿಯ ವಕೀಲ ನಾರಿಮನ್ ಸಲಹೆ ಮೇರೆಗೆ ಮುನ್ನಡೆಯುವ ತೀರ್ಮಾನಕ್ಕೆ ಬರುವ ಬದಲಾಗಿ ವಸ್ತುಸ್ಥಿತಿ ಅರಿತು ರಾಜ್ಯದ ಹಿತದೃಷ್ಟಿಯಿಂದ ನಿಷ್ಠುರವಾದ ಒಂದು ಗಟ್ಟಿ ತೀರ್ಮಾನಕ್ಕೆ ಬರಬೇಕಿದೆ. ಎಂತಹದ್ದೇ ಕಠಿಣ ಸ್ಥಿತಿಯಲ್ಲೂ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎನ್ನುವ ಒಮ್ಮತದ ನಿರ್ಧಾರ ಕೈಗೊಂಡು ಇದನ್ನು ಸುಪ್ರೀಂಕೋರ್ಟ್‍ಗೆ ಮನವರಿಕೆ ಮಾಡಿಕೊಡಲು ನಮ್ಮ ವಕೀಲರಿಗೆ ಒತ್ತಡ ತರುವುದೊಂದೇ ಸದ್ಯಕ್ಕಿರುವ  ಏಕೈಕ ಮಾರ್ಗ. ನಮಗೇಕೆ ಇದು ಅನ್ವಯಿಸಲ್ಲ 2001ರ ರಾಷ್ಟ್ರೀಯ ಜಲನೀತಿ ಅನ್ವಯ ಕುಡಿಯುವ ನೀರಿಗೆ ಮೊದಲ ಆದ್ಯತೆ ಎನ್ನುವ ಖಾಯಂ ನಿರ್ದೇಶನವಿದೆ. ಅಷ್ಟೇ ಅಲ್ಲ 1996ರಲ್ಲಿ ಸುಪ್ರೀಂಕೋರ್ಟ್ ಪ್ರಕರಣವೊಂದರ ಸಂಬಂಧ ನೀಡಿರುವ ತೀರ್ಪಿನಲ್ಲಿ ಸಂವಿಧಾನದ ಸೆಕ್ಷನ್ 141ರಂತೆ ಕುಡಿಯುವ ನೀರನ ಅಗತ್ಯತೆ ಪ್ರತಿಯೊಬ್ಬ ಪ್ರಜೆಗೂ ಅನ್ವಯ ಎಂದು ಪುನರುಚ್ಛರಿಸಿದೆ. ಹಾಗಾದಲ್ಲಿ ನಮ್ಮಲ್ಲಿರುವ ನೀರು ಕುಡಿಯುವ ಉದ್ದೇಶಕ್ಕೂ ಸಾಲದು. ಆದರೆ ತಮಿಳುನಾಡು ಇರಿಸಿರುವ 50 ಟಿಎಂಸಿ ನೀರಿನ ಬೇಡಿಕೆ ಸದ್ಯ ಅಲ್ಲಿನ ಸಾಂಬಾ ಕೃಷಿ ಬೆಳೆಗೆ. ಇದನ್ನು ಸುಪ್ರೀಂನಲ್ಲಿ ಸಮರ್ಥವಾಗಿ ಪ್ರತಿಪಾದಿಸುವ ಮತ್ತು ರಾಜ್ಯದಲ್ಲಿನ ಮಳೆ ಕೊರತೆ ಹಾಗೂ ಅಣೆಕಟ್ಟೆಗಳ ನೀರಿನ ಸಂಗ್ರಹ ಮಾಹಿತಿಯನ್ನು ಬಿಚ್ಚಿಡುವ ಅನಿವಾರ್ಯತೆ ಇದೆ. ಇದನ್ನು ರಾಜ್ಯದ ಪರ ವಕೀಲರು ಸೂಕ್ತ ದಾಖಲೆಗಳೊಂದಿಗೆ ವಾದಿಸಿದಲ್ಲಿ ರಾಜ್ಯಕ್ಕೆ ನಿರಾಳದ ತೀರ್ಪು ಬರಬಹುದು. ………….ಬಾಕ್ಸ್………….. ಸುಪ್ರೀಂನಲ್ಲಿ ಕಾಲಾವಕಾಶ ಕೋರಿದ ಕರ್ನಾಟಕ ತಕ್ಷಣವೇ 50 ಟಿಎಂಸಿ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿ ಸೆ.9ಕ್ಕೆ ಮತ್ತೆ ವಿಚಾರಣೆಗೆ ಬರಲಿದೆ. ನ್ಯಾ. ಗೋಪಾಲಗೌಡ ನೇತೃತ್ವದ ನ್ಯಾಯಪೀಠ ಶುಕ್ರವಾರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದೆ. ಆದರೆ ಕರ್ನಾಟಕದ ಪರ ವಕೀಲರು ಕಾವೇರಿ ಜಲಾನಯನ ಪ್ರದೇಶದ ವಸ್ತುಸ್ಥಿತಿ ಹಾಗೂ ಪ್ರಕರಣದ ಸಂಬಂಧ ಕೆಲವು ಮಹತ್ವದ ದಾಖಲೆಗಳನ್ನು ಹಾಜರುಪಡಿಸಬೇಕಿರುವ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ. ನ್ಯಾಯಪೀಠ ಇದಕ್ಕೆ ಸಮ್ಮತಿಸಿ ಮುಂದಿನ ವಿಚಾರಣೆಯನ್ನು ಸೆ.9ಕ್ಕೆ ನಿಗದಿಗೊಳಿಸಿರುವುದಾಗಿ ಪ್ರಕಟಿಸಿದೆ.