ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಏಕ ರೂಪದ ಟಿಕೆಟ್ ದರ ಜಾರಿಗೆ ಬರಲಿದೆ.

0
5479

ತಮಿಳುನಾಡು ರಾಜ್ಯದಲ್ಲಿ ಇರುವಂತೆಯೇ, ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೂ ಏಕರೂಪ ಪ್ರವೇಶ ದರವನ್ನು ಗರಿಷ್ಠ ಮಿತಿ 120 ರೂಪಾಯಿಗಳಿಗೆ ನಿಗದಿಪಡಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ನೇತೃತ್ವದ ಚಲನಚಿತ್ರ ನೀತಿ ನಿರೂಪಣಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಿತಿಯ ವರದಿಯನ್ನು ಸಲ್ಲಿಸಿದ ರಾಷ್ಟ್ರದಲ್ಲೇ ಅತ್ಯಧಿಕ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಪ್ರವೇಶ ದರವೂ ಅತ್ಯಧಿಕವಾಗಿಯೇ ಇದೆ. ತಮಿಳುನಾಡು ಮಲ್ಟಿಪ್ಲೆಕ್ಸ್‍ಗಳಿಗೆ ಹೋಲಿಸಿದರೆ ರಾಜ್ಯದ ಮಲ್ಟಿಪ್ಲೆಕ್ಸ್‍ಗಳಲ್ಲಿ ಕೆಲವೆಡೆ ಮೂರು ಪಟ್ಟು, ಮತ್ತೆ ಕೆಲವೆಡೆ ನಾಲ್ಕುಪಟ್ಟು ಪ್ರವೇಶ ದರ ವಸೂಲು ಮಾಡಲಾಗುತ್ತಿದೆ. ಇದರ ಪರೋಕ್ಷ ಪರಿಣಾಮ ಕನ್ನಡ ಚಿತ್ರಗಳ ವೀಕ್ಷಣೆ ಕ್ಷೀಣಿಸಲು ಕಾರಣವಾಗಿದೆ. ಏಕ ರೂಪ ಪ್ರವೇಶ ದರ ನಿಗದಿಯಾದಲ್ಲಿ ಒಂದು ಚಿತ್ರ ನೋಡುವ ಪ್ರೇಕ್ಷಕ ಪ್ರಭು ನಾಲ್ಕು ಚಿತ್ರಗಳನ್ನು ನೋಡುತ್ತಾನೆ. ಇದರಿಂದ ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಯೂ ಅಗುತ್ತದೆ ಎಂಬುದು ಸಮಿತಿಯ ಅಭಿಪ್ರಾಯವಾಗಿದೆ. ಅಂತೆಯೇ, ಮಲ್ಟಿಪ್ಲೆಕ್ಸ್‍ಗಳಲ್ಲಿ ಎರಡು ಪರದೆಗಳಲ್ಲಿ ಪ್ರಧಾನ ಸಮಯ ( ಪ್ರೈಂ ಟೈಂ ) ದಲ್ಲಿ ಕನ್ನಡ ಚಲನ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.

shiparassu

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ ರಾ ಗೋವಿಂದು, ಹೆಸರಾಂತ ನಟಿ ಭಾರತಿ ವಿಷ್ಣವರ್ಧನ್, ಸುಪ್ರಸಿದ್ಧ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರೂ ಸೇರಿದಂತೆ ಸಮಿತಿಯ ಸದಸ್ಯರು ವರದಿ ಸಲ್ಲಿಕೆಯ ಈ ಸಂದರ್ಭದಲ್ಲಿ ಹಾಜರಿದ್ದರು.

ಚಲನಚಿತ್ರ ನೀತಿ ನಿರೂಪಣಾ ಸಮಿತಿಯ ಶಿಫಾರಸ್ಸುಗಳು ಈ ಕೆಳಗಿನಂತಿವೆ

 • ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವ ಜನತಾ ಚಿತ್ರಮಂದಿರಗಳಿಗೆ ತಲಾ 50 ಲಕ್ಷ ರೂ., ಹಳೆ ಚಿತ್ರಮಂದಿರ ನವೀಕರಣಕ್ಕೆ 25 ಲಕ್ಷ ರೂ ಸಹಾಯಧನ.
 • ಮಲ್ಟಿಪ್ಲೆಕ್ಸ್-ಮಿನಿಪ್ಲೆಕ್ಸ್ ಹಾಗೂ ಜನತಾ ಚಿತ್ರಮಂದಿರ ಹೀಗೆ ಎಲ್ಲಕ್ಕೂ ಒಂದೇ ಮುಂಗಟ್ಟೆಯಲ್ಲಿ ಎಲ್ಲಾ ಪರವಾನಗಿಗಳನ್ನೂ ಒದಗಿಸುವ ಸಕ್ಷಮ ಪ್ರಾಧಿಕಾರವನ್ನು ಸ್ಥಾಪಿಸುವುದು, ನಿಯಮಾವಳಿಗಳನ್ನು ಸರಳೀಕರಿಸುವುದು
 • ಗುಣಾತ್ಮಕ ಚಿತ್ರಗಳಿಗೆ ಪ್ರಸ್ತುತ ನೀಡುತ್ತಿರುವ ಸಹಾಯ ಧನದಲ್ಲಿ ಹೆಚ್ಚಳವಾಗಬೇಕು. ಕೊಡವ, ತುಳು, ಬ್ಯಾರಿ, ಬಂಜಾರ ಮತ್ತು ಕೊಂಕಣಿಯಂತಹ ಪ್ರಾದೇಶಿಕ ಭಾಷಾ ಚಿತ್ರಗಳ ಕಲಾವಿದರು ಹಾಗೂ ತಂತ್ರಜ್ಞರಿಗೂ ಎಲ್ಲಾ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಬಹುದು.
 • ಜೀವಿತಾವಧಿ ಸಾಧನೆ ಮಾಡಿದ ಚಿತ್ರರಂಗದ ವಿವಿಧ ವಲಯಗಳನ್ನು ಪ್ರತಿನಿಧಿಸುವವರಿಗೂ ಎರಡು ಹೊಸ ಪ್ರಶಸ್ತಿಗಳನ್ನು ಸ್ಥಾಪಿಸಬೇಕು.
 • ಕನ್ನಡ ಚಲನಚಿತ್ರಗಳನ್ನು ನಕಲು ಮಾಡುವ ವಿದ್ಯಮಾನ ತಡೆಗೆ ಗೂಂಡಾ ಕಾಯಿದೆಯನ್ನು ಮತ್ತಷ್ಟು ಬಲಯುತಗೊಳಿಸಬೇಕು. ರಾಜ್ಯದ ಎರಡು ಸ್ಥಳಗಳಲ್ಲಿ ಪರೈಸಿ ತಡೆ ಕೇಂದ್ರಗಳನ್ನು ಸ್ಥಾಪಿಸಬೇಕು.
 • ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಆನ್‍ಲೈನ್ ಟಿಕೇಟ್ ವ್ಯವಸ್ಥೆ ಕಡ್ಡಾಯಗೊಳಿಸಬೇಕು.
 • ಮೈಸೂರು ಚಿತ್ರನಗರಿ ಸಮೀಪ ಕನ್ನಡ ಚಲನಚಿತ್ರ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರ ವಸತಿ ಯೋಜನೆಗಾಗಿ 50 ಎಕರೆ ಜಮೀನು ನೀಡಬೇಕು.
 • ಕನ್ನಡ ಚಲನಚಿತ್ರ ಇತಿಹಾಸ ಬಿಂಬಿಸುವ ಫಿಲಂ ಆಕೈವ್ಸ್ ಸ್ಥಾಪಿಸಬೇಕು.
 • ಮಲ್ಟಿಪ್ಲೆಕ್ಸ್‍ಗಳಲ್ಲಿ ಎರಡು ಪರದೆಗಳಲ್ಲಿ ಪ್ರಧಾನ ಸಮಯ(ಪ್ರೈಂ ಟೈಂ)ದಲ್ಲಿ ಕನ್ನಡ ಚಲನ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು
 • ರಾಜ್ಯದ ಹೊರಗೆ ಸರ್ಕಾರದ ಪೂರ್ವಾನುಮತಿ ಪಡೆದು ಶೇಕಡಾ 50 ರಷ್ಟು ಚಿತ್ರೀಕರಣ ನಡೆಸಲೂ ಅನುಮತಿ ನೀಡಬಹುದು. ಚಿತ್ರನಗರಿಯೂ ಸೇರಿದಂತೆ ಹೊರಾಂಗಣದಲ್ಲಿ ಹಾಗೂ ಲಭ್ಯವಿಲ್ಲದ ಸೌಲಭ್ಯಗಳಿಗೆ ಮಾತ್ರ ರಾಜ್ಯದಿಂದ ಹೊರಗೆ ಚಿತ್ರೀಕರಿಸುವಾಗ ಕಡ್ಡಾಯವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪೂರ್ವಾನುಮತಿ ಪಡೆದಿರಬೇಕು.
 • ರಾಜ್ಯದಲ್ಲಿ ಚಲನಚಿತ್ರ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಬೇಕು. ಶಾಲಾ ಪಠ್ಯಗಳಲ್ಲಿ ಸಿನಿಮಾ ಶಿಕ್ಷಣ ಅಳವಡಿಸಬೇಕು. ಪದವಿ ಹಾಗೂ ಸ್ನಾತಕ ಪದವಿಯಲ್ಲೂ ಸಿನಿಮಾ ಶಿಕ್ಷಣ ಜಾರಿಗಳಿಸಬೇಕು.
  ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಳ ಮಾಡಬೇಕು
 • ಪ್ರತಿ ವರ್ಷವೂ ಡಾ ರಾಜ್‍ಕುಮಾರ್ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅಂದರೆ ಏಪ್ರಿಲ್ 24 ರಂದೇ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಬೇಕು.