ಕಾವೇರಿ ನೀರು: ಕುಡಿಯಲೇ ಇಲ್ಲ, ಬೆಳೆಗೆ ಬೇಕೆ?

0
873

ಮೂಲ ಕರ್ತೃ : ರಾಜಶೇಖರಯ್ಯ ಮೈಸೂರು.

ಭಾರತದ ಒಕ್ಕೂಟದಲ್ಲಿ ಇರುವ ರಾಜ್ಯಗಳೆಲ್ಲ ಭಾರತದ ಸಂವಿಧಾನವನ್ನು ಗೌರವಿಸಬೇಕು ನಿಜ. ಆದರೆ ಕರ್ನಾಟಕದವರಿಗೆ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿನ ಭತ್ತಕ್ಕೆ ನೀರು ಕೊಡುವುದು ಎಷ್ಟು ಸರಿ? ಕರ್ನಾಟಕದ ಜನರಿಗೆ ಕುಡಿಯಲು ನೀರಿಲ್ಲದಿದ್ದರೆ. ಸರ್ವೋಚ್ಚ ನ್ಯಾಯಾಲಯ ತಮಿಳುನಾಡಿನಿಂದ ಕುಡಿಯುವ ನೀರು ತರಿಸಿಕೊಡಲು ಸಾಧ್ಯವೇ?

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬ್ರಿಟಿಷರು ಹಿಂದಿನ ಮದರಾಸನ್ನು ಆಡಳಿತ ಕೇಂದ್ರವನ್ನಾಗಿಟ್ಟುಕೊಂಡಿದ್ದರ ಪರಿಣಾಮವಾಗಿ ಅಂದಿನ ಮದರಾಸು ಪ್ರಾಂತ್ಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾವೇರಿ ನೀರನ್ನು ಹಂಚಿಕೆ ಮಾಡಿಕೊಂಡಿದ್ದರು. ಸ್ವಾತಂತ್ರ್ಯದ ನಂತರ ಕಾವೇರಿ ನೀರಿನ ಹಂಚಿಕೆ ಅನೇಕ ತಿರುವುಗಳನ್ನು ಪಡೆದು ೨೦೦೭ರಲ್ಲಿ ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಪ್ರಕಟವಾಯಿತು. ತೀರ್ಪಿನಂತೆ ತಮಿಳುನಾಡಿಗೆ ೪೧೯ಟಿಎಂಸಿ, ಕರ್ನಾಟಕಕ್ಕೆ ೨೭೦ ಟಿಎಂಸಿ ಕೇರಳಕ್ಕೆ ೩೦ ಟಿಎಂಸಿ, ಪುದುಚೇರಿಗೆ ೭ ಟಿಎಂಸಿ ನೀರು ದೊರಕಬೇಕೆಂದು ಆದೇಶ ಹೊರಡಿಸಲಾಯಿತು.

ಕೊಡಗಿನ ಅತ್ಯಮೂಲ್ಯವಾದ ಮಳೆ ಕಾಡುಗಳು, ಪಶ್ಚಿಮಟ್ಟದ ವೈವಿಧ್ಯಮಯವಾದ ಸಸ್ಯ ಸಂಪತ್ತು ಮತ್ತು ಇನ್ನಿತರ ನೈಸರ್ಗಿಕ ಸಂಪತ್ತನ್ನು ರಾಜಕಾರಣಿಗಳು, ಉನ್ನತಾಧಿಕಾರಿಗಳು, ನೆಲಗಳ್ಳರು, ಮರದ ಕಳ್ಳ ವ್ಯಾಪಾರಿಗಳು ಕೊಳ್ಳೆ ಹೊಡೆದು ಆ ವನಸಿರಿಯನ್ನು ಬೆತ್ತಲೆ ಮಾಡಿದ್ದಾರೆ. ಹಿಂದಿನಂತೆಯೇ ಮಳೆ ಬರಲಿ ಎಂದರೆ ಹೇಗೆ ಬರುತ್ತದೆ? ಹಿಂದಿನ ನಾಲ್ಕೈದು ದಶಕಗಳ ಮಾನವನ ದುರಾಸೆಗೆ ಇಂದಿನ ಪೀಳಿಗೆ ಬಲಿಪಶುವಾಗುತ್ತಿದೆ. ಬರುತ್ತಿರುವ ಮಳೆಯ ನೀರನ್ನೇ ಸಂಗ್ರಹಿಸಿ ಮಾನವನ ಖಾಸಗಿ ಬಳಕೆಗೆ ಹಾಗೂ ವ್ಯವಸಾಯಕ್ಕೆ ಬಳಸಲೂ ಕೂಡ ತಮಿಳುನಾಡು ಸಹೋದರರು ಹಾಗೂ ಸರ್ವೋಚ್ಚ ನ್ಯಾಯಾಲಯ ಅಡ್ಡಿಪಡಿಸುತ್ತಿವೆ.

ಕಾವೇರಿ ನ್ಯಾಯಾಧೀಕರಣ ಹೇಗೆ ನೀರನ್ನು ಹಂಚಿಕೆ ಮಾಡಿತು ಎಂಬುದು ನನಗೆ ಅರಿವಿಲ್ಲ. ಆದರೂ ಅದು ಅವೈಜ್ಞಾನಿಕ ಹಂಚಿಕೆಯಾಗಿದೆ ಎಂದು ಹೇಳಲು ಸಾಕಷ್ಟು ಕಾರಣಗಳಿವೆ.

೧. ಕರ್ನಾಟಕದ ಬೆಂಗಳೂರು, ಮೈಸೂರು ಹಾಗೂ ನದಿ ದಂಡೆಯಲ್ಲಿ ರುವ ಗ್ರಾಮಗಳು, ಪಟ್ಟಣಗಳ ಸುಮಾರು ೨ ಕೋಟಿ ಜನರಿಗೆ ವರ್ಷಪೂರ್ತಿ ಕುಡಿಯುವ ಹಾಗೂ ಇನ್ನಿತರ ಖಾಸಗಿ ಬಳಕೆಗೆ ಕಾವೇರಿ ನೀರು ಬೇಕೇ ಬೇಕು.
೨. ಕಾವೇರಿ ನೀರಿನಿಂದ ಕರ್ನಾಟಕದಲ್ಲಿ ಸುಮಾರು ೨ ಲಕ್ಷ ಹೆಕ್ಟೇರ್ ಭೂಪ್ರದೇಶ ನೀರಾವರಿಯಾದರೆ, ತಮಿಳುನಾಡಿನಲ್ಲಿ ಕಾವೇರಿ ನೀರಿನಿಂದ ಸುಮಾರು ೨೮ ಲಕ್ಷ ಹೆಕ್ಟೇರ್ ನೀರಾವರಿಯಾಗಿರುತ್ತದೆ.
೩. ಕರ್ನಾಟಕದಲ್ಲಿ ಅಂತರ್ಜಲಮಟ್ಟ ೫೦೦/೬೦೦ ಅಡಿಗಳ ಆಳದಲ್ಲಿದ್ದರೆ, ತಮಿಳುನಾಡಿನಲ್ಲಿ ೧೫/೨೦ ಅಡಿಗಳಲ್ಲೆ ಅಂತರ್ಜಲ ಲಭ್ಯವಾಗುತ್ತದೆ. ಅಲ್ಲದೆ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಲು ತಮಿಳುನಾಡಿಗೆ ಅವಕಾಶವಿದೆ. ಅಲ್ಲದೇ ಹೆಚ್ಚಿನ ಸಂಖ್ಯೆಯ ನೀರಾವರಿ ಬಾವಿಗಳು ಬಳಕೆಯಲ್ಲಿರುತ್ತವೆ.
೪. ತಮಿಳುನಾಡು ಆಕವಾಗಿ, ಶೈಕ್ಷಣಿಕವಾಗಿ, ಕೈಗಾರಿಕೆಗಳಲ್ಲಿ, ಸಾಮಾಜಿಕ ಜನಜೀವನ ಮಟ್ಟದಲ್ಲಿ ಕರ್ನಾಟಕಕ್ಕಿಂತ ಉನ್ನತ ಮಟ್ಟದಲ್ಲಿದೆ.
೫.ದಿನಾಂಕ ೭.೯.೨೦೧೬ರಂದು ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೆಗೌಡರು ಕಾವೇರಿ ಜಲಾನಯನ ಭಾಗದಲ್ಲಿ ಎರಡು ಬೆಳೆ ಬೆಳೆಯಲು ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನು ಕೊಡಲು ಕೂಡ ಕಾವೇರಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಅವಕಾಶ ನೀಡಿಲ್ಲವೆಂದು ತಿಳಿಸಿದ್ದಾರೆ.
೬. ರಾಷ್ಟ್ರ ಹಾಗೂ ರಾಜ್ಯಮಟ್ಟಗಳಲ್ಲಿ ಸರ್ವರ ಆಕ, ಶೈಕ್ಷಣಿಕ, ಸಾಮಾಜಿಕ ಸಮಾನತೆ ಇರಬೇಕೆಂದು ಸರ್ಕಾರಗಳು ಪ್ರಯತ್ನಿಸುತ್ತಿವೆ. ಕರ್ನಾಟಕ ಅಭಿವೃದ್ಧಿ ಹೊಂದಬೇಡವೆ, ಆಕ ಪ್ರಗತಿ ಸಾಧಿಸಬೇಡವೇ, ಮತ್ತೇಕೆ ನೀರಿನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ? ಕರ್ನಾಟಕದ ೨ ಕೋಟಿ ಜನರಿಗೆ ಕುಡಿಯುವ ನೀರು ಇಲ್ಲದ ಹಾಗೆ ಮಾಡಲು ಏಕೆ ಕ್ರಮ ಕೈಗೊಳ್ಳುತ್ತಿದೆ? ವಿಶ್ವಸಂಸ್ಥೆಯೇ ಮೊದಲು ಕುಡಿಯುವ ನೀರು ನಂತರ ವ್ಯವಸಾಯವೆಂದು ೋಷಿಸಿದ್ದರೂ ಕೂಡ, ತಮಿಳುನಾಡಿಗೆ ೩ ಬೆಳೆಗೆ ನೀರು ಕೊಡುವುದು ಎಷ್ಟು ಸರಿ? ಅಂತಾರಾಷ್ಟ್ರೀಯ ಕಾನೂನನ್ನು ಸರ್ವೋಚ್ಚ ನ್ಯಾಯಾಲಯವೇಕೆ ಗೌರವಿಸುತ್ತಿಲ್ಲ?
೭. ೧೯೯೧ರಲ್ಲಿ ಕಾವೇರಿ ನೀರಿನ ವಿಷಯವಾಗಿ ಬಹುದೊಡ್ಡ ಹಿಂಸಾಚಾರ ನಡೆದಿದೆ. ೧೨.೯.೨೦೧೬ರಂದು ಕೂಡ ಹಿಂಸಾಚಾರ ನಡೆದಿದೆ. ಇದಕ್ಕೆಲ್ಲ ಅವೈಜ್ಞಾನಿಕ ನಿರ್ಧಾರಗಳೇ ಕಾರಣ. ಪ್ರಾಣ, ಆಸ್ತಿ ಹಾನಿಗೆ ಯಾರು ಹೊಣೆ. ಅಂತಿಮವಾಗಿ ಸಾಮಾನ್ಯ ನಾಗರಿಕನ ತಲೆಯ ಮೇಲೆ ಹಾಕಲಾಗುತ್ತದೆ. ಅವನು ಮಾಡದ ತಪ್ಪಿಗೆ ಅವನಿಗೇಕೆ ಶಿಕ್ಷೆ?
೮. ಈಗಾಗಲೇ ಆಹಾರ ಧಾನ್ಯಗಳ ಬೆಲೆ ಹೆಚ್ಚಿದೆ.

ಸಾಮಾನ್ಯ ಜನ ಆಹಾರ ಧಾನ್ಯಗಳನ್ನು ಕೊಂಡು ತಿನ್ನುವುದು ಹೇಗೆ? ಕುಡಿಯಲು ಹಾಗೂ ಭತ್ತ ಬೆಳೆಯಲು ನೀರು ಲಭ್ಯವಾಗುತ್ತಿಲ್ಲ. ಜನರ ಪರಿಸ್ಥಿತಿಯನ್ನು ಸರ್ಕಾರಗಳು, ಜನಪ್ರತಿನಿಧಿಗಳು ಅರ್ಥ ಮಾಡಿಕೊಂಡು ಸಮಸ್ಯೆಗಳನ್ನು ವಿವಿಧ ಹಂತಗಳಲ್ಲಿ ಚರ್ಚಿಸಿ, ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಜಲನೀತಿಯನ್ನು ರೂಪಿಸಿ, ಯಾರಿಗೂ ತೊಂದರೆಯಾಗದಂತೆ ಅನುಷ್ಠಾನಗೊಳಿಸಬೇಕು. ಇದು ಸಾಮಾನ್ಯ ಜನರ ಆಶಯ.

ನ್ಯಾಯಾಲಯಗಳು ದಾಖಲೆಗಳ ಆಧಾರದ ಮೇಲೆ ನ್ಯಾಯ ತೀರ್ಮಾನ ನೀಡುತ್ತವೆ. ದಾಖಲೆಗಳನ್ನು ಸಿದ್ಧಪಡಿಸುವವರು ಮನುಷ್ಯರೆ. ಅವರುಗಳು ಸಿದ್ಧಪಡಿಸಿರುವ ದಾಖಲೆಗಳಲ್ಲಿ ಲೋಪವಿರಬಹುದು, ಕರ್ನಾಟಕ ಸರ್ಕಾರ ಹಲವು ಬಾರಿ ಮೇಲ್ಮನವಿ ಮಾಡಿಕೊಂಡರೂ ನ್ಯಾಯಾಲಯ ಕುಡಿಯುವ ನೀರಿನ ಬಗ್ಗೆ ಯೋಚಿಸದೆ ತಮಿಳುನಾಡಿನ ಸಾಂಬಾ ಮೂರನೆಯ ಬೆಳೆಗೆ ನೀರು ಬಿಡಲು ಆದೇಶಿಸಿರುವುದು ದೊಡ್ಡ ದುರಂತ. ನ್ಯಾಯಾಧೀಶರು ಸ್ವತಂತ್ರರಿದ್ದು ಪ್ರತಿಭಟನೆಯನ್ನು ಗಮನಿಸಿ ತಜ್ಞರನ್ನು ಜಲಾನಯನ ಪ್ರದೇಶಗಳಿಗೆ ಕಳುಹಿಸಿ, ಅವರಿಂದ ಸಮಗ್ರ, ಪರಿಪೂರ್ಣ, ಪಕ್ಷಪಾತರಹಿತ ವರದಿಯನ್ನು ಪಡೆದು ತೀರ್ಪು ನೀಡಿದ್ದರೆ, ಈ ಹಿಂಸಾಚಾರಗಳು ನಡೆಯುತ್ತಿರಲಿಲ್ಲ.

ಭಾರತದ ಒಕ್ಕೂಟದಲ್ಲಿರುವ ರಾಜ್ಯಗಳು ಪರಸ್ಪರ ಹೊಂದಾಣಿಕೆ ಮಾಡಿ ಕೊಂಡು, ವಿಶ್ವಾಸದಿಂದ ಎಲ್ಲರೂ ಸಮಾನವಾಗಿ ಗೌರವಾನ್ವಿತ ಬದುಕನ್ನು ಸಾಗಿಸಲು ಅವಕಾಶ ಮಾಡಿಕೊಡಬೇಕು. ಯಾವುದೋ ಪೂರ್ವ ಸಿದ್ಧಾಂತಗಳ ನ್ನಿಟ್ಟುಕೊಂಡು ಮಾಡಿರುವ ನ್ಯಾಯಾಧೀಕರಣಗಳ ಆದೇಶಗಳನ್ನು ರದ್ದು ಮಾಡಿ ಈಗಿನ ಅಗತ್ಯ ವಸ್ತುಸ್ಥಿತಿಗೆ ಅನುಗುಣವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಒಬ್ಬ ವ್ಯಕ್ತಿಯ ರಾಜಕೀಯ ಪ್ರಕ್ರಿಯೆಗೆ ಜನತೆ ಬಲಿಯಾಗಲುಬಿಡಬಾರದು. ಸಂಬಂಧಿಸಿದ ರಾಜ್ಯಗಳು ಪರಸ್ಪರ ಕೊಟ್ಟು, ಕೊಳ್ಳುವ ಸಿದ್ಧಾಂತದಂತೆ ನಡೆಯದಿದ್ದರೆ ಒಕ್ಕೂಟ ವ್ಯವಸ್ಥೆಗೆ ಅರ್ಥವಿರು ವುದಿಲ್ಲ. ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಪೂರ್ಣ ಮಟ್ಟದ ಮಾಹಿತಿ ಪಡೆದು ಸಂಬಂಧಿಸಿದ ರಾಜ್ಯಗಳಿಗೆ ಮನವರಿಕೆ ಮಾಡಿಕೊಟ್ಟು, ರಾಷ್ಟ್ರದ ನೈಸರ್ಗಿಕ ಸಂಪತನ್ನು ಹಂಚಿಕೊಂಡು ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡಬೇಕು. ರಾಜಕೀಯ ಪ್ರೇರಿತ ನಿಲುವುಗಳು ರಾಷ್ಟ್ರಕ್ಕೆ ಮಾರಕ ವಾಗುತ್ತವೆ. ಜನರು ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದರೆ ದಂಗೆ ಏಳುತ್ತಾರೆ. ಕಾವೇರಿ ನೀರಿನ ಜೊತೆ ಮನುಷ್ಯನ ರಕ್ತವು ಹರಿಯುತ್ತದೆ? ಇದು ಯಾರಿಗೆ ತಾನೆ ಬೇಕು?

ಸೌಜನ್ಯ : ಆಂದೋಲನ ಮೈಸೂರು ೨೨.೯.೨೦೧೬