ಗರ್ಭಗುಡಿಗೆ ಸ್ತ್ರೀ ಪ್ರವೇಶಕ್ಕೆ ಅಸ್ತು

0
778

ಹಾಜಿ ಅಲಿ ದರ್ಗಾ ಮಜಾರ್‍ನಲ್ಲಿ ಲಿಂಗ ತಾರತಮ್ಯ ಸಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ವಾಣಿಜ್ಯ ನಗರಿಯ ಸುಪ್ರಸಿದ್ಧ ಹಾಜಿ ಅಲಿ ದರ್ಗಾದ ಪವಿತ್ರ ಗರ್ಭಗುಡಿ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಿ ಬಾಂಬೆ ಹೈಕೋಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ದರ್ಗಾದ ಪವಿತ್ರ ಒಳಪ್ರದೇಶ, ಗರ್ಭಗುಡಿಯನ್ನು ಹೋಲುವ ಮಜಾರ್ ಎಲ್ಲರಿಗೂ ಮುಕ್ತ. ಇದರಲ್ಲಿ ಲಿಂಗ ತಾರತಮ್ಯ ಸಲ್ಲದು ಎಂದು ಐತಿಹಾಸಿಕ ತೀರ್ಪಿನಲ್ಲಿ ತಿಳಿಸಿದೆ. ಪ್ರವೇಶಕ್ಕೆ ಅವಕಾಶ ಕೋರಿ ಹೋರಾಟ ನಡೆಸುತ್ತಿದ್ದ ಮಹಿಳೆಯರು, ತೀರ್ಪು ತಮ್ಮ ಪಾಲಿನ ವಿಜಯ ಎಂದು ಸಂಭ್ರಮಿಸಿದ್ದಾರೆ.

ಮಹಾರಾಷ್ಟ್ರದ ಶನಿ ಶಿಂಗಣಾಪುರದ ಗರ್ಭಗುಡಿಯ ಬಳಿ ಸ್ತ್ರೀಯರ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಭೂಮಾತಾ ಬ್ರಿಗೇಡ್ ಹೋರಾಡಿ ಜಯ ಗಳಿಸಿದ ಕೆಲವೇ ತಿಂಗಳ ಬಳಿಕ ಮತ್ತೊಂದು ಹೋರಾಟಕ್ಕೆ ಗೆಲುವು ದೊರಕಿದೆ.

ಆರು ವಾರಗಳ ಬಳಿಕ ದರ್ಗಾಕ್ಕೆ ಭೇಟಿ ನೀಡುವುದಾಗಿ ಮಹಿಳಾ ಸಂಘಟನೆಗಳು ತಿಳಿಸಿದ್ದು, ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶ ಮುಂದಿನ ಗುರಿ ಎಂದಿವೆ.

ಹಾಜಿ ಅಲಿ ದರ್ಗಾದ ಪವಿತ್ರ ಒಳ ಪ್ರದೇಶ ಪ್ರವೇಶಿಸುವುದಕ್ಕೆ ಮಹಿಳೆಯರಿಗೆ ಇರುವ ನಿಷೇಧ ಪ್ರಶ್ನಿಸಿ ಕಳೆದ ಜೂನ್ 28ರಂದು ಮಹಿಳಾ ಸಮೂಹವೊಂದು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ದರ್ಗಾ ಪ್ರವೇಶ ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಮುಕ್ತ ಎಂದು ಸ್ಪಷ್ಟ ಆದೇಶ ನೀಡಿದೆ ಹಾಗೂ ಪವಿತ್ರ ಒಳ ಪ್ರದೇಶ ಪ್ರವೇಶಿಸವ ಅವಕಾಶ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಅವಶ್ಯಕ ರಕ್ಷಣೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.

ಕೆಲ ತಿಂಗಳ ಹಿಂದೆ ತಮ್ಮ ಆದೇಶ ಕಾಯ್ದಿರಿಸಿದ್ದ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂತಿಗಳಾದ ವಿದ್ಯಾಸಾಗರ್ ಕಾನಡೆ ಮತ್ತು ರೇವತಿ ಮೋಹಿತೆ ಶುಕ್ರವಾರ ತಮ್ಮ ತೀರ್ಪು ಪ್ರಕಟಿಸಿದರು. ದರ್ಗಾ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ತೆರವಿಗೆ ಜಾಕಿಯಾ ಸೊಮನ್ ಮತ್ತು ನೂರ್‍ಜಹಾನ್ ನಿಯಾಜ್ ಎಂಬ ಮಹಿಳೆಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಹಾಜಿ ದರ್ಗಾ ಟ್ರಸ್ಟ್ ಮಾರ್ಚ್-ಜೂನ್ 2012ರ ನಡುವೆ ಮಹಿಳೆಯರಿಗೆ ದರ್ಗಾದ ಪ್ರಾರ್ಥನಾ ಕೋಣೆಗೆ ಪ್ರವೇಶ ನಿಷೇಧಿಸಿತ್ತು. ಈ ನಿಷೇಧ ಭಾರತೀಯ ಸಂವಿಧಾನದ ಪರಿಚ್ಛೇದ 14(ಜೀವಿಸುವ ಹಕ್ಕು), 15(ಅಸಮಾನತೆಗೆ ತಡೆ) ಮತ್ತು 21(ಸಮಾನತೆಯ ಹಕ್ಕು)ಕ್ಕೆ ವಿರೋಧ. ಮಹಿಳೆಯರಿಗೆ ರಕ್ಷಣೆ ನೀಡುವ ಹೊಣೆಯನ್ನು ರಾಜ್ಯ ಮತ್ತು ದರ್ಗಾ ವಹಿಸಿಕೊಳ್ಳಬೇಕು ಎಂದು ಹೇಳಿದೆ. ಇದೇ ವೇಳೆ ಮುಸ್ಲಿಂ ಮಹಿಳೆಯರು ಪ್ರಮುಖ ಪ್ರಾರ್ಥನಾ ಸ್ಥಳ ಮಜಾರ್ ಪ್ರವೇಶಿಸಬಾರದು ಎಂದು ಇಸ್ಲಾಂ ಮಂಡಳಿ ಮಂಡಿಸಿದ ವಾದವನ್ನು ಕೋರ್ಟ್ ತಿರಸ್ಕರಿದೆ.

ಸೌದಿ ಅರೆಬಿಯಾದಲ್ಲೂ ಮಸೀದಿ ಒಳ ಭಾಗಕ್ಕೆ ಸ್ತ್ರೀಯರಿಗೆ ಅವಕಾಶವಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ಪ್ರತ್ಯೇಕ ಪ್ರಾರ್ಥನಾ ಸ್ಥಳ ಕಲ್ಪಿಸಲಾಗಿದೆ ಎಂದು ಹಾಜಿ ದರ್ಗಾ ಟ್ರಸ್ಟ್ ಪರ ವಕೀಲರು ವಾದ ಮಂಡಿಸಿದರು.

ಆದೇಶಕ್ಕೆ 6 ವಾರ ತಡೆ

ಹಾಜಿ ಅಲಿ ದರ್ಗಾ ಟ್ರಸ್ಟ್ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಮಹಿಳೆಯರ ದರ್ಗಾ ಪ್ರವೇಶ ಆದೇಶವನ್ನು ಬಾಂಬೆ ಹೈಕೋರ್ಟ್ 6 ವಾರಗಳ ಕಾಲ ತಡೆಹಿಡಿದೆ. ಏತನ್ಮಧ್ಯೆ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಟ್ರಸ್ಟ್ ತಿಳಿಸಿದೆ.