ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಚಿವ ಜಾರ್ಜ್ ತಲೆದಂಡ

0
1714

ಬೆಂಗಳೂರು:  ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೊನೆಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ತಲೆದಂಡವಾಗಿದೆ. ಜಾರ್ಜ್ ಅವರನ್ನು ಸಮರ್ಥಿಸಿಕೊಂಡೇ ಬಂದಿದ್ದ ಸರ್ಕಾರಕ್ಕೆ ನ್ಯಾಯಾಲಯದಿಂದ ತೀವ್ರ ಮುಖಭಂಗವಾಗಿದ್ದು, ಅಂತಿಮವಾಗಿ ಇಂದು ಜಾರ್ಜ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಪ್ರತಿಪಕ್ಷಗಳು ಅಹೋರಾತ್ರಿ ಧರಣಿ ನಡೆಸಿದರೂ ಜಗ್ಗದ ರಾಜ್ಯ ಸರ್ಕಾರ ಇಂದು ಸಚಿವ ಜಾರ್ಜ್ ರಾಜೀನಾಮೆ ಪಡೆದುಕೊಂಡಿದೆ. ಎಫ್.ಐ.ಆರ್.ದಾಖಲು ಮಾಡುವಂತೆ ಮಡಿಕೇರಿ ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿದ ಹಿನ್ನಲೆಯಲ್ಲಿ ಇಕ್ಕಟ್ಟಿಗೆ ಸಿಲುಕಿದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಡೆದುಕೊಳ್ಳುವ ನಿರ್ಧಾರ ಕೈಗೊಂಡರು ಎನ್ನಲಾಗಿದೆ.

ಆದರೆ ಜಾರ್ಜ್ ಪ್ರಕರಣದಲ್ಲಿ ಮೊಂಡಾಟ ನಡೆಸಿದ್ದ ಸರ್ಕಾರ ಸದನಕ್ಕೆ ನೀಡಿದ್ದ ಹೇಳಿಕೆಗಳು ಕೂಡ ತಮಗೆ ಉರುಳಾಗಲಿವೆ, ಸದನಕ್ಕೆ ತಪ್ಪು ಮಾಹಿತಿ ನೀಡಿದ ಆರೋಪಕ್ಕೆ ಗುರಿಯಾಗಬೇಕಾಗಲಿದೆ ಎನ್ನುವುದನ್ನು ಅರಿತ ಸರ್ಕಾರ ಜಾರ್ಜ್ ರಾಜೀನಾಮೆ ಪಡೆಯುವ ನಿರ್ಧಾರ ಕೈಗೊಂಡಿದ್ದರೂ ಪ್ರತಿಪಕ್ಷಗಳ ಟೀಕೆಯಿಂದ ತಪ್ಪಿಸಿಕೊಳ್ಳಲು ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ವಿವಾದ ತಾರ್ತಿಕ ಅಂತ್ಯಕ್ಕೆ ಬಂದಿದ್ದರೂ 12 ದಿನ ಮೊದಲೇ ಸದನವನ್ನು ಮುಕ್ತಾಯ ಮಾಡಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಸಿಎಂ ಮಾಡಿದ್ದಾರೆ.

ಅಧಿವೇಶನವನ್ನು ಮುಂದೂಡುತ್ತಿದ್ದಂತೆ ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಹಿರಿಯ ಶಾಸಕರ ಅಭಿಪ್ರಾಯ ಸಂಗ್ರಹಿಸಿದರು. ಬಹುತೇಕ ಸಚಿವರು ಈ ಕ್ಷಣಕ್ಕೆ ರಾಜೀನಾಮೆ ಕೊಡುವುದೇ ಒಳ್ಳೆಯದು, ನಂತರ ಸಂಪುಟಕ್ಕೆ ತೆಗೆದುಕೊಳ್ಳಬಹುದು ಎನ್ನುವ ಸಲಹೆ ನೀಡಿದರು ಎಂದು ತಿಳಿದು ಬಂದಿದೆ.

ವಿಚಾರಣೆ ಬಳಿಕ ಕಳಂಕಮುಕ್ತರಾದ ಬಳಿಕ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವುದಾಗಿ ಸಚಿವ ಜಾರ್ಜ್ ಗೆ ಅಭಯ ನೀಡಿದ ಸಿಎಂ ಸಿದ್ದರಾಮಯ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜಾರ್ಜ್ ಗೆ ಸೂಚನೆ ನೀಡಿದರು. ಸಿಎಂ ಸೂಚನೆ ಮೇರೆಗೆ ಸಚಿವ ಜಾರ್ಜ್ ತಮ್ಮ ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದರು ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಹೈಕಮಾಂಡ್ ನಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಸಿಎಂ ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ. ಮಡಿಕೇರಿ ಕೋರ್ಟ್ ಆದೇಶ, ಸಂಪುಟದ ಹಿರಿಯ ಸಚಿವ ಸಲಹೆಗಳು ಸೇರಿದಂತೆ ಘಟನಾವಳಿಯನ್ನು ಹೈಕಮಾಂಡ್ ಗಮನಕ್ಕೆ ತಂದು ನಂತರ ಹೈಕಮಾಂಡ್ ಒಪ್ಪಿಗೆ ಮೇರೆಗೆ ಸಚಿವ ಜಾರ್ಜ್ ರಾಜೀನಾಮೆಯನ್ನು ಸಿಎಂ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿಕೊಡಲಿದ್ದಾರೆ ಎಂದು ತಿಳಿದು ಬಂದಿದೆ.

ಜಾರ್ಜ್ ರಾಜೀನಾಮೆ ಪಡೆಯುವುದು ಸೂಕ್ತ. ಅನಗತ್ಯವಾಗಿ ಪ್ರತಿಪಕ್ಷಗಳ ಆರೋಪಕ್ಕೆ ಗುರಿಯಾಗಿ, ಜನರ ಮನಸ್ಸಿಂದ ದೂರಾಗುವುದು ಬೇಡ. ಇಷ್ಟಾದ ನಂತರವೂ ಜಾರ್ಜ್ ಬಗ್ಗೆ ಸಮರ್ಥನೆ ಮಾಡಿಕೊಂಡರೆ, ಸಾರ್ವಜನಿಕ ವಲಯದಲ್ಲಿ ಅವಹೇಳನಕ್ಕೆ ಒಳಗಾಗಬೇಕಾಗುತ್ತದೆ ಎಂಬ ಸಲಹೆಯನ್ನು ಸಿಎಂಗೆ ಹಿರಿಯ ಸಚಿವ ಹಾಗೂ ಮಾಜಿ ಸ್ಪೀಕರ್ ಕೂಡ ಆಗಿರುವ ರಮೇಶ್‌ಕುಮಾರ್ ನೀಡಿದ್ದಾರೆ ಎನ್ನಲಾಗಿದೆ.

ದೇವರಾಜ್ ಅರಸು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಇದೇ ಮಾದರಿಯ ಸಮಸ್ಯೆ ಎದುರಾಗಿತ್ತು. ಅಂದಿನ ಸಚಿವ ಆರ್.ಡಿ. ಕಿತ್ತೂರ್ ವಿರುದ್ಧ ಮಹಿಳೆ ಒಬ್ಬರು ಆರೋಪ ಮಾಡಿದ ತಕ್ಷಣ ಅರಸು ಅವರು ರಾಜೀನಾಮೆಪಡೆದಿದ್ದರು. ಇದೇ ರೀತಿ ಇನ್ನೂ ಅನೇಕ ಉದಾಹರಣೆಯನ್ನು ರಮೇಶ್ ಕುಮಾರ್ ಅವರು ಸಿಎಂಗೆ ನೀಡಿದರು ಎಂದು ತಿಳಿದುಬಂದಿದೆ. ಇದರಿಂದ ಜಾರ್ಜ್ ರಾಜೀನಾಮೆ ಪಡೆಯಲು ಸಿಎಂ ಸೂಚಿಸಿದ್ದರು ಎನ್ನಲಾಗಿದೆ.