ತಲಕಾವೇರಿಯ ಪವಿತ್ರ ತೀರ್ಥೋದ್ಭದ ಮಹತ್ವ

0
2443

ನಾಡಿನ ಜನತೆಯ ದಾಹ, ಹಸಿವು ನೀಗಿಸುವ ಕಾವೇರಿ ಮಾತೆಯು ವರ್ಷಕ್ಕೊಮ್ಮೆ ನಡೆಯುವ ತೀಥೋ ದ್ಭವದ ದರ್ಶನಕ್ಕಾಗಿ ಭಕ್ತಾದಿಗಳ ಪ್ರವಾಹವೇ ತಲಕಾವೇರಿ ಯ ಕಡೆಗೆ ಹರಿದು ಬರುತ್ತಾರೆ. ನಿತ್ಯ ನದಿಯಾಗಿ ಹರಿಯುವ ಕಾವೇರಿ ಮಾತೆಯನ್ನು ನೋಡುವುದಕ್ಕಿಂತ ಈ ಕುಂಡದ ನೀರಿನ ಉದ್ಭದ ವೀಕ್ಷಣೆ ಮಾಡುವುದು ಸಾವಿರ ಪಟ್ಟು ಪವಿತ್ರ ಎಂಬುದು ಜನರ ನಂಬಿಕೆ. ಆ ನಂಬಿಕೆಯಂತೆ ಈ ಬಾರಿ ನಾಡಿನ ಜನತೆಗೆ ಅ. 17ರಂದು ನಸುಕಿನ 6.29ಕ್ಕೆ ತೀರ್ಥರೂಪಿಣಿಯಾಗಿ ಕಾವೇರಿ ತಾಯಿ ದರ್ಶನ ನೀಡಲಿದ್ದಾಳೆ. ಸೂರ್ಯ ತುಲಾರಾಶಿಗೆ ಪ್ರವೇಶಿಸುವ ಶುಭ ಸಂದರ್ಭದಲ್ಲಿ ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆ(ಬ್ರಹ್ಮ ಕುಂಡಿಕೆ)ಯಲ್ಲಿ ಕಾವೇರಿ ಮಾತೆಯು ತೀರ್ಥರೂಪಿಣಿಯಾಗಿ ಭಕ್ತಾದಿಗಳಿಗೆ ಕಾಣಿಸುಕೊಳ್ಳುತ್ತಾಳೆ.

ಈ ಒಂದು ಸಂಭ್ರವನ್ನು ಕಣ್ತುಂಬಿಸಿಕೊಳ್ಳಲು ದೇಶದ ನಾನಾ ಭಾಗಗಳಿಂದ ಭಕ್ತ ಸಾಗರ ಹರಿದು ಬರಲಿದೆ. ಅಂದು ಸೂರ್ಯ ತುಲಾರಾಶಿಗೆ ಪ್ರವೇಶಿಸುವ ಶುಭ ಘಳಿಗೆಯಲ್ಲಿ (ತುಲಾ ಸಂಕ್ರಮಣ ಕಾಲ) ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವಾಗುತ್ತದೆ. ಸರಿಯಾಗಿ ಸೂರ್ಯನು ತುಲಾ ರಾಶಿ ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣವೆಂದು ಕರೆಯುತ್ತಾರೆ. ಈ ಶುಭ ದಿನ ಸಾಮಾನ್ಯವಾಗಿ ಅ.17 ಆಗಿರುತ್ತದೆ. ಈ ಪುಣ್ಯ ದಿನದಂದು ಗಂಗೆ ಸೇರಿ ಮೊದಲಾದ ಆರು ಪವಿತ್ರ ನದಿಗಳು ಕಾವೇರಿಯಲ್ಲಿ ಬಂದು ಸೇರುತ್ತವೆಂಬ ನಂಬಿಕೆಯಿದೆ.

ಇದಕ್ಕೆ ಸಾಕ್ಷಿಯೆಂಬಂತೆ ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನ ನಿರ್ಧರಿತ ಲಗ್ನ ಹಾಗೂ ಮುಹೂರ್ತದಲ್ಲಿ ತಲಕಾವೇರಿಯ ಜ್ಯೋತಿ ಮಂಟಪದ ಮುಂದಿರುವ ಕುಂಡಕದಲ್ಲಿ ನೀರಿನ ಬುಗ್ಗೆ ಮೂರು ಬಾರಿ ಬರುತ್ತದೆ. ಇದನ್ನೇ ತೀರ್ಥೊದ್ಭವವೆಂದು ಕರೆಯಲಾಗುತ್ತದೆ. ಈ ಬುಗ್ಗೆಯಲ್ಲಿ ಮಿಕ್ಕ ಆರು ಪುಣ್ಯ ನದಿಗಳಾದ ಗಂಗೆ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ ಮತ್ತು ಸಿಂಧು ಅಂತರ್ವಾಹಿನಿಯಾಗಿ ಬಂದು ಕಾವೇರಿಯನ್ನು ಸೇರುತ್ತದೆ ಎಂಬುದು ಪೌರಣಿಕ ಹಿನ್ನೆಲೆ.

ಈ ಆರು ನದಿಗಳು ಸೇರಿದ ಸಂದರ್ಭದಲ್ಲಿ ನೀರಿನಲ್ಲಿ ಮಿಂದರೆ, ಪುಣ್ಯ ಪ್ರಾಪ್ತಿಯಾಗಿ, ಕರ್ಮಗಳನ್ನು ಕಳೆದು ಹೋಗುತ್ತದೆ. ಹಾಗಾಗಿ ಬುಗ್ಗೆಯಾಗಿ ಹೊರಹೊಮ್ಮುವ ಕಾವೇರಿ ನೀರು ದೇವರ ತೀರ್ಥಕ್ಕೆ ಸಮಾನವಾದುದೆಂದು ಭಕ್ತಾದಿಗಳು ತೀರ್ಥೋದ್ಭವ ದಿನ ನೀರಿನಲ್ಲಿ ಮಿಂದೇಳಲು ಸಾಗರದಷ್ಟು ಜನ ಹರಿದು ಬರುತ್ತದೆ. ಕೊಡವರಿಗೆ ಕಾವೇರಿಯೇ ಕುಲದೈವ. ಹಾಗಾಗಿ ಅವರಿಗೆ ತೀರ್ಥೊದ್ಭವ ಸಂಭ್ರಮ ಸಡಗರದಿಂದ ಆಚರಿಸುವ ಪ್ರಮುಖ ಹಬ್ಬ ಹಾಗೂ ಧಾರ್ಮಿಕ ಆಚರಣೆ. ತೀರ್ಥೊ ದ್ಭವದ ದಿನ ತಲಕಾವೇರಿಯಲ್ಲಿ ಮೀಯುವುದ ರಿಂದ ಸಕಲ ಪಾಪಗಳೂ ಪರಿಹಾರವಾಗುತ್ತವೆ.

ಈ ನೀರನ್ನು ಶೇಖರಿಸಿ ಕೊಂಡು ತಮ್ಮ ಬಂಧು ಮಿತ್ರರಲ್ಲಿ ಅವರಿಗೂ ವಿತರಿಸಿದರೆ ಪುಣ್ಯ ಪ್ರಾಪ್ತವಾಗುತ್ತದೆ ಎಂಬುದು ವಾಡಿಕೆ. ಮೃತ್ಯು ಶಯ್ಯೆಯಲ್ಲಿರುವ ವ್ಯಕ್ತಿಗಳಿಗೆ ಈ ನೀರಿನ ಹನಿಗಳನ್ನು ಕುಡಿಸಿದಲ್ಲಿ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆಯೆಂದೂ ಆಸ್ತಿಕರು ನಂಬುತ್ತಾರೆ. ಒಂದೊಂದು ಪೌರಣಿಕ ಕಥೆ: ಈ ಎಲ್ಲ ನಂಬಿಕೆಗಳೇನೂ ಸುಖಾಸುಮ್ಮನೆ ಹುಟ್ಟಿಲ್ಲ. ಇವೆಲ್ಲಕ್ಕೂ ಅನಾದಿ ಕಾಲದಿಂದಲೂ ಪುರಾವೆಗಳು ಕಂಡುಬಂದಿವೆ. ಹಾಗಾಗಿ, ತಲಕಾವೇರಿಯಲ್ಲಿಯೇ ಉಗಮವಾಗುವ ಕಾವೇರಿ ನದಿಯ ಬಗ್ಗೆ ಪೌರಣಿಕವಾಗಿ ಹತ್ತಾರು ಕಥೆಗಳೂ ಇವೆ.

ಅದರಲ್ಲಿ ತೀರ್ಥೋದ್ಭವ ಸಂದರ್ಭದಲ್ಲಿ ಅಗಸ್ತ್ಯೀಶ್ವರನ ಪೂಜಿಸಿ ಆರಾಧಿಸುವುದೂ ಒಂದು. ಈ ಸಂಪ್ರದಾಯಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಆಗಸ್ತ್ಯಮುನಿಗಳು ಕಾವೇರಿಯನ್ನು ತಮ್ಮ ಕಮಂಡಲದೊಳಗಿ ಹಾಕಿಕೊಂಡು ತಪಗೈಯುತ್ತಿದ್ದರು. ಈ ಕಮಂಡಲದಲ್ಲಿರುವ ಕಾವೇರಿ ಯನ್ನು ಯಾವುದರರೂ ಪುಣ್ಯಕ್ಷೇತ್ರದಲ್ಲಿ ಸ್ಥಾಪನೆ ಮಾಡಿ, ಅಲ್ಲಿಯೇ ಕಾವೇರಿ ನದಿ ಹರಿಯವಂತೆ ಮಾಡಲು ನಿರ್ಧಾರಿಸಿ, ತಪಸ್ಸು ಮಾಡುತ್ತಿರುತ್ತಾರೆ. ಆದರೆ ಗಣೇಶನು ತಲಕಾವೇರಿಯಲ್ಲಿ ಕಾವೇರಿ ನೆಲೆಸಬೇಕೆಂದು, ಕಾಗೆಯ ರೂಪ ತಾಳಿ ಆ ಕಮಂಡಲದ ಮೇಲೆ ಕುಳಿತು ಅಲುಗಾಡಿಸಿ, ಹೊರಳಾಡಿಸಿ ಕಮಂಡಲ ಬೀಳುವಂತೆ ಮಾಡಿದ.

ಹಾಗೇ ನೆಲಕ್ಕೆ ಬಿದ್ದ ಕಾವೇರಿ ಭೂಮಿಗೆ ಬಂದು ನದಿಯಾಗಿ ಹರಿಯಲಾರಂಭಿಸಿದಳು. ನನ್ನ ತಪೋಭಂಗವಾಯಿತೆಂದು ಅಗಸ್ತ್ಯಮುನಿಗಳು ಕೋಪಗೊಂಡು, ಕಾಗೆ ಕಡೆ ನೋಡಿದಾಗ, ಕಾಗೆಯ ರೂಪ ತಾಳಿ ಬಂದದ್ದು ವಿಘ್ನೇಶ್ವರ ಎಂಬುದನ್ನು ತಿಳಿದು ಸಂತಸಗೊಂಡರಂತೆ. ಗಣೇಶ ಇಚ್ಛೆಯಂತೆಯೇ ತಲಕಾವೇರಿಯಲ್ಲಿ ಕಾವೇರಿಯಮ್ಮನಾಗಿ ನೆಲೆಸಲು ಅಪ್ಪಣೆ ನೀಡಿ, ಅಲ್ಲಿಯೇ ಅಗಸ್ತ್ಯಮುನಿಯೂ `ಅಗಸ್ತ್ಯೀಶ್ವ’ರಾಗಿ ನೆಲೆಸುತ್ತಾರೆ. ಸಾಹಿತ್ಯಿಕ ಉಲ್ಲೇಖ:ಅಲ್ಲದೇ ಸಾಹಿತ್ಯಿಕ ಉಲ್ಲೇಖಗಳಲ್ಲೂ ಕಾವೇರಿ ಬಗ್ಗೆ ಹಲವು ಮಾಹಿತಿಗಳಿವೆ.

ಹಿರಿಯ ಸಾಹಿತಿ ಎದುರ್ಕಳ ಶಂಕರ ನಾರಾಯಣ ಭಟ್ ತಮ್ಮ “ಶ್ರೀ ಕಾವೇರಿ ಮಹತ್ಮೆ” ಕೃತಿಯಲ್ಲಿ ಕಾವೇರಿ ಹುಟ್ಟಿನ ಬಗ್ಗೆ ಈ ರೀತಿ ವಿವರಿಸಿದ್ದಾರೆ. ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ವಾಸಿಸುತ್ತಿದ್ದ ಕವೇರನೆಂಬ ಬ್ರಾಹ್ಮಣೋತ್ತಮ ತನಗೆ ಸಂತತಿಯಾಗಬೇಕೆಂದು ಬಯಸಿ ತಪಸ್ಸು ಮಾಡಿದ. ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವ ಪ್ರತ್ಯಕ್ಷನಾಗಿ `ನೀನು ಪೂರ್ವಕಾಲದಲ್ಲಿ ಪುತ್ರ ಸಂತಾನ ಪ್ರಾಪ್ತಿಯಾಗಲು ಬೇಕಾದ ಧರ್ಮ ಮಾಡಿಲ್ಲ. ಹಾಗಾಗಿ ಲೋಪಾಮುದ್ರೆಯೆಂಬ ನಾಮಾಂಕಿತಳಾಗಿರುವ ತನ್ನ ಮಾನಸಪುತ್ರಿಯನ್ನು ಮಗಳಾಗಿ ನೀಡುತ್ತೇನೆ’ ಎಂದು ಬ್ರಹ್ಮದೇವ ವರ ನೀಡಿದ. ಲೋಪಾಮುದ್ರೆಯು ದೇವದಾನವರು ಕ್ಷೀರ ಸಮುದ್ರ ಮಥನ ಮಾಡಿದಾಗ ಉತ್ಪತ್ತಿಯಾದ ಅಮೃತವನ್ನು ಅಸುರರು ಅಪಹರಿಸಿದರು.

ಅದನ್ನು ದೇವದಾನರಿಗೆ ನೀಡಲು, ಅಮೃತವನ್ನು ತನ್ನ ಕೈವಶ ಮಾಡಿಕೊಳ್ಳಲು ಲಕ್ಷ್ಮೀದೇವಿ ಅಂಶದಿಂದ ಹುಟ್ಟಿದವಳೇ ಲೋಪಾಮುದ್ರೆ. ಅವಳನ್ನೇ ಶ್ರೀಹರಿಯು ಬ್ರಹ್ಮದೇವನಿಗೆ ಆಶೀರ್ವಾದ ಮಾಡಿ ಮಾನಸಪುತ್ರಿಯಾಗಿ ನೀಡಿದನು. `ತಂದೆಯೇ, ತಾನು ಲೋಕಕಲ್ಯಾಣಕ್ಕಾಗಿ ಜಲರೂಪಿಣಿಯಾಗಿ ಹರಿದು ಸಾಗರ ಸೇರುತ್ತೇನೆ. ಜನರು ತನ್ನನ್ನು ಬ್ರಹ್ಮಪುತ್ರಿ, ಮಾಯೆ, ಕಾವೇರಿ ಎಂದೂ ಕರೆಯುವರು. ಜನರ ಪಾಪನಾಶ ಮಾಡುವವಳೆಂದು ಲೋಕ ಪ್ರಸಿದ್ಧಳಾಗುವೆನು’ ಎಂದು ತನ್ನ ತಂದೆಗೆ ಹೇಳಿ ಕವೇರನನ್ನು ಸೇರುತ್ತಾಳೆ ಎಂಬುದು ಸಾಹಿತ್ಯಿಕ ಉಲ್ಲೇಖ.

ಕವೇರ ಮುನಿಯ ಮಗಳಾದ್ದರಿಂದ ಲೋಪಾಮುದ್ರೆಗೆ ಕಾವೇರಿ ಎಂಬ ಹೆಸರು ಬಂದಿದೆ. ಅಲ್ಲದೇ ಮಹಾಭಾರತದ ಆದಿಪರ್ವದಲ್ಲಿ ಅರ್ಜುನನು ತೀರ್ಥಯಾತ್ರೆಗೆ ಹೋಗಿದ್ದಾಗ ಕಾವೇರಿ ನದಿಯಲ್ಲಿ ಸ್ನಾನ ಮಾಡಿದ್ದನೆಂಬ ಉಲ್ಲೇಖವಿದೆ. ರಾಜಸೂಯಯಾಗದ ಸಮಯದಲ್ಲಿ ನಕುಲನು ಇಲ್ಲಿಗೆ ಬಂದಿದ್ದ ಪ್ರಸ್ತಾಪ ಕೂಡ ಸಭಾಪರ್ವದಲ್ಲಿ ಕಾಣಬಹುದು. ಇಂತಹ ಹಲವಾರು ಪೌರಾಣಿಕ ಉಲ್ಲೇಖ ಮತ್ತು ನಂಬಿಕೆಗಳಿಂದಾಗಿಯೇ ಕಾವೇರಿ ನದಿ ನಾಡಿನ ಜನ್ನೆಕ್ಕೆಲ್ಲ ಪವಿತ್ರ ಮಾತೆಯಾಗಿದ್ದಾಳೆ. ಕೊಡವ ನಾಡಿನಲ್ಲಂತೂ ಜನತೆಗೆ ಕಾವೇರಿಯೆಡೆಗೆ ಭಾವಾನಾತ್ಮಕ ಸಂಬಂಧವಿದೆ.

ಹುಟ್ಟಿನಿಂದ ಸಾವಿನವರೆಗೆ ಎಲ್ಲಾ ಶುಭ-ಅಶುಭ ಸಂದರ್ಭದಲ್ಲಿ ತಲಕಾವೇರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ತುಲಾ ಮಾಸದಲ್ಲಿ ಉತ್ತರ ಭಾರತದ ಗಂಗೆ ದಕ್ಷಿಣದ ಕಾವೇರಿಯಲ್ಲಿ ಐಕ್ಯಳಾಗುತ್ತಾಳೆ ಎಂಬುದು ಪ್ರತೀತಿ. ಇದರಿಂದಾಗಿಯೇ ಕಾವೇರಿಯನ್ನು ದಕ್ಷಿಣದ ಗಂಗೆ ಎಂದು ಕರೆಯಲಾಗುತ್ತದೆ. ಕಾವೇರಿ ಕನ್ನಡಿಗರ ಪಾಲಿಗೆ ಜೀವನದಿ. ತಮಿಳರ ಪಾಲಿಗೆ ಭಾಗ್ಯಲಕ್ಷ್ಮಿ. ಕೊಡವರ ಪಾಲಿಗೆ ಕುಲದೇವತೆ. ಕೇವಲ ಕರ್ನಾಟಕ, ತಮಿಳುನಾಡು ಮಾತ್ರವಲ್ಲ ಕೇರಳ, ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯ ಜನತೆ ಕೂಡ ಕಾವೇರಿ ನೀರಿನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಕಾವೇರಿಯು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ ಒಟ್ಟು 765 ಕಿ.ಮೀ. ಹರಿದು 27,700 ಚದರ ಕಿ.ಮೀ. ಪ್ರದೇಶಗಳಷ್ಟು ಭೂಮಿಗೆ ನೀರುಣಿಸಿ ಬಂಗಾಳಕೊಲ್ಲಿಯಲ್ಲಿ ಲೀನವಾಗುತ್ತಾಳೆ. ಇಷ್ಟೇಲ್ಲ ರಾಜ್ಯಗಳಿಗೆ ಉಪಯೋಗವಾಗ ಕಾವೇರಿ ನದಿಯು, ತೀರ್ಥೋದ್ಭವ ದಿನ ದೇವತೆ ರೂಪವಾಗಿ ಭಾಕ್ತದಿಗಳಲ್ಲಿ ಕಾಣಿಸುತ್ತಾಳೆ. ನೀವು ತೀರ್ಥೋದ್ಭವದಲ್ಲಿ ಮುಳಿಗಿ ಪುಣ್ಯ ಪ್ರಾಪ್ತಿಯಾಗಬೇಕೆಂದರೇ, ಅ.17ರಂದು ನಡೆಯುವ ತೀರ್ಥಕುಂಡಕದಲ್ಲಿ ಪಾಲ್ಗೊಳ್ಳಿ.