ದುಡ್ಡಿದ್ರೆ ಮಗಳು ಸಿಕ್ತಾಳೆ ಮೊಮ್ಮಗ್ಳು ಸಿಗ್ತಾಳೆ…

2
8464

ಯಾವುದರ ಬಗ್ಗೆ ಮಾತಾಡ್ತಾ ಇದ್ದೀವೆ ಅಂತ confusion ನಲ್ಲಿ ಇದ್ದೀರಾ..? ಅದೇ ಓದುಗರೇ ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ 13 ವರ್ಷದ ಬಾಲಕಿ ಪೂಜಿತಾ ರಾಜಾಜಿನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಳು ಹುಬ್ಬಳ್ಳಿ ರೇಲ್ವೆ ನಿಲ್ದಾಣದಲ್ಲಿ ಸಂಬಂಧಿಕರಿಗೆ ಸಿಕ್ಕಿದ್ದು ನಾಪತ್ತೆ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ. ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಉತ್ತರ ಪತ್ರಿಕೆಗೆ ಪೋಷಕರಿಂದ ಸಹಿ ಹಾಕಿಸಿಕೊಂಡು ಬರುವಂತೆ ಶಿಕ್ಷಕರು ಹೇಳಿದ್ದರು. ಇದರಿಂದ ಗಾಬರಿಗೊಂಡ ಪೂಜಿತಾ ಮನೆ ಬಿಟ್ಟು ಹೋಗಿದ್ದಳು.

ಎಂದಿನಂತೆ ಬೆಳಗ್ಗೆ ಶಾಲೆಗೆ ತೆರಳಿದ್ದ ಪೂಜಿತಾ ಸಂಜೆಯಾದರೂ ಮನೆಗೆ ಬಾರದಿದ್ದರಿಂದ ಗಾಬರಿಗೊಂಡು ಪೋಷಕರು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನೋಡಲು ಲಕ್ಷಣವಾಗಿದ್ದ ಹಾಗೂ ಆಟಪಾಠದಲ್ಲಿ ಮುಂದಿದ್ದ ಪೂಜಿತಾ ಇದ್ದಕ್ಕಿದ್ದಂತೆ ಶಾಲೆಯ ಸಮವಸ್ತ್ರದಲ್ಲಿಯೇ ನಾಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು.

ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಳೆ ಎಂಬ ಶಂಕೆ ಮೇರೆಗೆ ಹುಬ್ಬಳ್ಳಿಯಲ್ಲಿದ್ದ ಪೂಜಿತಾ ಸಂಬಂಧಿಕರು ಬೆಳಗ್ಗಿನಿಂದಲೇ ನಗರದ ರೇಲ್ವೆ ನಿಲ್ದಾಣಕ್ಕೆ ಬಂದು ಪೊಲೀಸರ ಸಹಾಯದೊಂದಿಗೆ ಪ್ರತಿಯೊಂದು ರೈಲುಗಳನ್ನು ಪರಿಶೀಲಿಸುತ್ತಿದ್ದಾಗ ರೈಲಿನಲ್ಲಿ ಪೂಜಿತಾ ಪತ್ತೆಯಾಗಿದ್ದಾಳೆ. ಸದ್ಯ ಆಕೆಯನ್ನು ತಮ್ಮ ವಶಕ್ಕೆ ಪಡೆದ ಪೊಲೀಸರು ಕೆಲ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಸಂಬಂಧಿಕರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿಯ ಸಂಬಂಧಿಕರ ಮನೆಯಲ್ಲಿ ಪೂಜಿತಾ ಸುರಕ್ಷಿತವಾಗಿ ಇರುವುದರಿಂದ ಪೂಜಿತಾ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

ಮೊನ್ನೆ ಕೊಪ್ಪಳದ ಮುನಿರಾಬಾದ್ ರೈಲ್ವೇ ಸ್ಟೇಷನ್ ಒಂದರಲ್ಲಿ ಅಚಾನಕ್ಕಾಗಿ ತಂದೆತಾಯಿಗಳು ಮೃತಪಟ್ಟು ಮಗುವನ್ನು ತಬ್ಬಲಿ ಮಾಡಿ ಹೋದಾಗ ನಿಮ್ಮ ಕ್ಯಾಮೆರಾಗಳು ಪಯಣ ಎತ್ತ ಸಾಗಿತ್ತು…? ಪಾಪ ಏನು ಅರಿಯದ ಕಂದಮ್ಮ ತನ್ನ ತಂದೆ ತಾಯಿ ಇನ್ನು ಬದುಕಿದ್ದಾರೆ ಎಂದು ತಿಳಿದು ಅವರೊಂದಿಗೆ ಆಟ ಆಡುವಾಗ ನಿಮ್ಮ ರಿಪೋರ್ಟರ್ ಗಳು ಎಲ್ಲಿ ಹೋಗಿದ್ದರು ಸ್ವಲ್ಪ ಹೇಳುವಿರಾ…? ಭಾರತದಲ್ಲಿ ದಿನವೂ ಅದೆಷ್ಟು ಮಂದಿ ಕಾಣೆಯಾಗುತ್ತಿದ್ದರೋ…? ಅದೆಷ್ಟು ಹೆಣ್ಣುಮಕ್ಕಳು ಕಾಮುಕರ ಕಣ್ಣಿಗೆ ಬಿದ್ದು ಕಾಮಾಟಿ ಪುರ ಸೇರುತ್ತಿದ್ದಾರೋ…? ಸ್ವಲ್ಪ ಯೋಚಿಸಿ….

ಪೂಜಿತಾ ಅನ್ನೋ ವೆಲ್ ಸೆಟಲ್ಡ್ ಫ್ಯಾಮಿಲಿಯ ಮಗಳೊಬ್ಬಳು ಕಳೆದು ಹೋಗಿದ್ದಕ್ಕೆ ಈ ಮೂರು ದಿನಗಳಿಂದ ಹಣದ ದಾಹಕ್ಕಾಗಿ TRP ಗೋಸ್ಕರ ಬೊಬ್ಬೆ ಹೊಡೆದು ವೀಕ್ಷಕರ ಕಿವಿಯಲಿ, ಕಣ್ಣಲ್ಲಿ ರಕ್ತ ಬರುವಷ್ಟು ಪ್ರಸಾರ ಮಾಡಿದ್ದೀರಲ್ಲ ನ್ಯೂಸ್ ಚಾನೆಲ್ ಗಳೇ ದಿನವೂ ಸಾವಿರಾರು ಮಂದಿ ಕಾಣೆಯಾಗುತ್ತಿರುವುದರ ಬಗ್ಗೆ ಯೋಚಿಸಿದ್ದೀರಾ..?  ರಮ್ಯಾ ಪಾಕಿಸ್ತಾನ ಸ್ವರ್ಗ ಅಂದ್ರು ಅಂತ ಅವರನ್ನು ಕಂಡರೆ ಆಗದೆ ಇರುವವರ ಮುಂದೆ ಮೈಕ್ ಹಿಡಿಯೋದು, ಸಿದ್ದರಾಮಯ್ಯಗೆ ಯಾವುದೊ ಹೆಂಗಸು ಮುತ್ತು ಕೊಟ್ಟಳು ಅನ್ನುವುದನ್ನು ದಿನವಿಡೀ ತೋರಿಸುವುದು, ಬರಿ ಇದೆ ಆಯಿತು… social concern ಅಂತ ಸ್ವಲ್ಪ ಏನಾದ್ರು ಇದ್ರೆ ದೇಶದ ಪ್ರಗತಿಯ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿ ಪ್ಲೀಸ್…

ಹಾಗಂತ ಪೂಜಿತ ಬಗ್ಗೆ ನ್ಯೂಸ್ ಪ್ರಸಾರ ಮಾಡಿದ್ದೂ ತಪ್ಪು ಎಂದು ಖಂಡಿತ ಹೇಳುತ್ತಿಲ್ಲ, ಆಕೆಗೆ ಕೊಟ್ಟಷ್ಟೇ ಪ್ರಾಮುಖ್ಯತೆ ಎಲ್ಲ ಕಾಣೆಯಾದವರ ಬಗ್ಗೆಯೂ ಇರಲಿ ಎನ್ನುವುದೇ ನಮ್ಮ ಆಶೆಯ. ಪತ್ರಿಕೋದ್ಯಮ ದೇಶದ ಅವಿಭಾಜ್ಯ ಅಂಗ ಮತ್ತು ಹೆಚ್ಚು ಜವಾಬ್ದಾರಿ ಹೊಂದಿರುವಂತ ಕ್ಷೇತ್ರ ಅನ್ನೋದು ನಮಗೆ ಗೊತ್ತಿರದ ವಿಚಾರ ಏನು ಅಲ್ಲ… ಆದ್ರೆ ಅದನ್ನು ದುಡ್ಡಿನ ಆಸೆಗೆ ಮಾರಿಕೊಳ್ಳುತ್ತಿರುವುದನ್ನು ನೋಡಿದರೆ ನಿಜಕ್ಕೂ ದುಃಖವಾಗುತ್ತದೆ ಸ್ನೇಹಿತರೆ.

ಈ ಆಧುನಿಕ ಜಗತ್ತೇ ಹೀಗೆ:
ಮನುಷ್ಯ + ದುಡ್ಡು = ಬಹು ಮುಖ್ಯ!!
ಮನುಷ್ಯ – ದುಡ್ಡು = ಬೆಲೆಯೇ ಇಲ್ಲ!!

-ಗಿರೀಶ್ ಗೌಡ