ನೆಹರೂ ಹೊಗಳಿದ ವರುಣ್!

0
762

ಲಖನೌ: ಬಿಜೆಪಿಯ ಸಂಸದ ವರುಣ್ ಗಾಂಧಿ ಅವರು ದೇಶದ ಮೊದಲ ಪ್ರಧಾನಿ ಜವಾಹರ್‍ಲಾಲ್ ನೆಹರೂ ಅವರನ್ನು ಹೊಗಳಿದ್ದಾರೆ. ಕಾಂಗ್ರೆಸ್ ಸದಸ್ಯರೊಬ್ಬರ ತ್ಯಾಗ ಜೀವನವನ್ನು ಅರ್ಥೈಸಿಕೊಳ್ಳುವುದು ಎಲ್ಲಾ ಯುವಕರ ಜವಾಬ್ದಾರಿ ಎಂದಿದ್ದಾರೆ ವರುಣ್.

ನೆಹರೂ ದೇಶದ ಮೊದಲ ಪ್ರಧಾನಿಯಾಗಿರುವ ಕಾರಣ ಅವರು ಮಹಾರಾಜರಂತೆ ಐಷಾರಾಮಿ ಜೀವನ ನಡೆಸಿದ್ದರೆಂದು ಜನ ಭಾವಿಸಿದ್ದಾರೆ. ಇಂತಹವರಿಗೆ ನೆಹರೂ ಅಷ್ಟು ಎತ್ತರಕ್ಕೇರಲು ಹದಿನೈದೂವರೆ ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆದಿದ್ದು ಗೊತ್ತಿಲ್ಲ ಎಂದು ಸುಲ್ತಾನ್‍ಪುರ ಸಂಸದ ವರುಣ್ ಇಲ್ಲಿ ಜರುಗಿದ ಯುವಕರ ಸಮಾವೇಶದಲ್ಲಿ ಹೇಳಿದರು.

ಇಂದು ಯಾರಾದರೂ ನನ್ನನ್ನು ಜೈಲಿನಲ್ಲಿಟ್ಟರೆ ನಿಮ್ಮನ್ನೂ 15 ವರ್ಷಗಳ ನಂತರ ಪ್ರಧಾನಿಯಾಗಿ ಮಾಡುತ್ತೇನೆ ಎಂದು ನನ್ನಲ್ಲಿ ಹೇಳಿದರೆ, ಕ್ಷಮಿಸಿ, ಇದು ತುಂಬಾ ಅತಿಯಾಯಿತು ಎಂಬುದಾಗಿ ಹೇಳುತ್ತೇನೆ ಎಂದು ವರುಣ್ ಹೇಳಿದ್ದಾರೆ. ಭಾರತವನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಲು ನೆಹರೂ ತಮ್ಮ ಜೀವನ, ಕುಟುಂಬ ಹಾಗೂ ದೇಹಕ್ಕಾದ ಗಾಯಗಳ ಮೂಲಕ ಮಾಡಿರುವ ತ್ಯಾಗವನ್ನು ನೆನೆಯುವುದು ಯುವಕರ ಜವಾಬ್ದಾರಿ ಎಂದವರು ವಿವರಿಸಿದರು. ಮುಕ್ತ ಭಾಷಣ ಮಾಡುವುದಕ್ಕೂ ಬಂದಿರುವ ಬೆದರಿಕೆಯನ್ನೂ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. “ದೇಶದ ಅತಿದೊಡ್ಡ ಪತ್ರಿಕೆಗೆ ನಿರ್ದಿಷ್ಟ ರಾಜ್ಯಸರ್ಕಾರ ಕಳೆದೊಂದು ವರ್ಷದಿಂದ ಜಾಹೀರಾತು ನೀಡದ ಕಾರಣ ಜಾಹೀರಾತುಗಳಿಲ್ಲದೆಯೇ ಪ್ರಕಟಣೆಗೊಳ್ಳುತ್ತಿದೆ. ನೆನಪಿರಲಿ ಇದೊಂದು ರಾಜ್ಯದ ಅತಿದೊಡ್ಡ ಪತ್ರಿಕೆ ”ಎಂದರು. ತಮ್ಮ ಉಪನಾಮ ಗಾಂಧಿ ಇರುವ ಕಾರಣ ರಾಜಕೀಯದಲ್ಲಿ ಏಳಿಗೆ ಕಾಣಲು ಸಾಧ್ಯವಾಯಿತು. “ನನ್ನ ಹೆಸರು ಫಿರೋಜ್ ವರುಣ್ ಗಾಂಧಿ ಅಥವಾ ಫಿರೋಜ್ ವರುಣ್ ಅಹ್ಮದ್ ಇಲ್ಲವೇ ತಿವಾರಿ, ಸಿಂಗ್ ಹಾಗೂ ಪ್ರಸಾದ್ ಎಂದಾಗಿದ್ದರೆ ನಿಮ್ಮಂತೆ ನಾನು ಕೂಡಾ ಪ್ರೇಕ್ಷಕರ ಸಾಲಿನಲ್ಲಿರುತ್ತಿದ್ದೆ” ಎಂದರು.