ಪುನರ್ವಸತಿ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ

0
1043

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಆಶ್ರಯ ಹಾಗೂ ಇತರೆ ಮೂಲಭೂತ ಸೌಲಭ್ಯಗಳು ಒದಗಿಸಲಾಗಿಲ್ಲ ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಟಿ. ನರಸಿಂಹ ಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ರಾಜ್ಯ ಮಾನವ ಹಕ್ಕುಗಳ ಆಯೋಗ ಆಗಸ್ಟ್ 9 ರಂದು, ‘ನಗರ ವ್ಯಾಪ್ತಿಯಲ್ಲಿ ಕೈಗೊಂಡಿರುವ ತೆರವು ಕಾರ್ಯಾಚರಣೆಯ ಸಂತ್ರಸ್ತರಿಗೆ ತಾತ್ಕಾಲಿಕ ಪುನರ್ವಸತಿ, ಆಶ್ರಯ, ಆಹಾರ, ನೀರು ಮತ್ತು ಶೌಚಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶಿಸಿದೆ. ಇದನ್ನು ಪಾಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಸರ್ಕಾರದ ಪರ ವಕೀಲ ವೆಂಕಟೇಶ್‌ ದೊಡ್ಡೇರಿ, ‘ಮಾನವ ಹಕ್ಕುಗಳ ಆಯೋಗದ ಆದೇಶವನ್ನು ಸೂಕ್ತ ರೀತಿಯಲ್ಲಿ ಪಾಲಿಸಲಾಗುತ್ತಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದ ಪೀಠ, ‘ಅರ್ಜಿದಾರರು ವೈಯಕ್ತಿಕವಾಗಿ ಸಂತ್ರಸ್ತರಲ್ಲ. ಆದ ಕಾರಣ ಈ ಅರ್ಜಿ ವಜಾ ಮಾಡಲಾಗುತ್ತಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾ ಮಾಡಿತು.

ಅರ್ಜಿ ಇತ್ಯರ್ಥ:

ಇದೇ ವೇಳೆ ರಾಜಕಾಲುವೆ ವಿಸ್ತೀರ್ಣ ಮತ್ತು ಗಡಿ ಗುರುತಿಸುವ ವ್ಯವಸ್ಥೆ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಬಿಬಿಎಂಪಿಯ ಬೃಹತ್ ಮಳೆ ನೀರು ಕಾಲುವೆಯ ಮುಖ್ಯ ಇಂಜಿನಿಯರ್ ಸಿದ್ದೇಗೌಡ ಹಾಗೂ ಮಹದೇವಪುರ ವಲಯದ ಜಂಟಿ ಆಯುಕ್ತ ಮುನಿವೀರಪ್ಪ ಶುಕ್ರವಾರ ಖುದ್ದು ಹಾಜರಾಗಿ ವಿವರಣೆ ನೀಡಿದ್ದರಿಂದ ತೆರವುಗೊಳಿಸುವ ಮೊದಲು ಸರ್ವೇ ನೆಡಸಬೇಕು ಎಂದು ಕೋರಿ ಸಾವಿತ್ರಮ್ಮ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಾಧೀಶ ನಾರಾಯಣಸ್ವಾಮಿ ಇತ್ಯರ್ಥಪಡಿಸಿದರು.

ಮೂಲ: dailyhunt