ಬಹು ಅಂಗ ವೈಫಲ್ಯದಿಂದ ಮುಖ್ಯಮಂತ್ರಿಗಳ ಪುತ್ರ ರಾಕೇಶ್ ನಿಧನ

0
1847

ಬೆಲ್ಜಿಯಂ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಅವರು ಬಹು ಅಂಗಾಂಗ ವೈಫಲ್ಯದಿಂದ  ನಿಧನರಾಗಿದ್ದಾರೆ. 39 ವರ್ಷದ ರಾಕೇಶ್ ಅವರು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಕರಳುಬೇನೆ ಕಾಯಿಲೆಗೆ ತುತ್ತಾಗಿ ಚೇತರಿಕೆ ಕಾಣದೆ ಬೆಲ್ಜಿಯಂನ ಯೂನಿವರ್ಸಿಟಿ ಆಸ್ಪತ್ರೆಯ ಐಸಿಯುನಲ್ಲಿ ಒಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾರೆ.

ಸಿದ್ದರಾಮಯ್ಯ ಅವರ ಕಿರಿಯ ಪುತ್ರ ಡಾ. ಯತೀಂದ್ರ, ಕುಟುಂಬದ ಡಾಕ್ಟರ್ ರವಿಕುಮಾರ್ ಹಾಗೂ ಮತ್ತೊಬ್ಬ ತಜ್ಞ ವೈದ್ಯರು ಬೆಲ್ಜಿಯಂನಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಗುರುವಾರದಂದು ಬ್ಸುಸೆಲ್ ತಲುಪಿದ್ದರು. ರಾಕೇಶ್ ಅವರ ತಾಯಿ ಪಾರ್ವತಿ, ಪತ್ನಿ ಸ್ಮಿತಾ ಹಾಗೂ ರಾಕೇಶ್ ಅವರ ಗೆಳೆಯರು ಆಸ್ಪತ್ರೆಯಲ್ಲಿದ್ದಾರೆ.

ವಿಶೇಷ ವಿಮಾನದ ಮೂಲಕ ನಾಳೆ ಸಂಜೆ ರಾಕೇಶ್ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಎರಡು ದಿನಗಳ ಹಿಂದಷ್ಟೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಪುತ್ರನ ಆರೋಗ್ಯ ವಿಚಾರಿಸಲು ಬೆಲ್ಜಿಯಂಗೆ ತೆರಳಿದ್ದರು.

ರಾಕೇಶ್ ಅವರ ಅಂತ್ಯಕ್ರಿಯೆ ಸೋಮವಾರ ಮೈಸೂರು ಸಮೀಪದ ಟಿ.ಕಾಟೂರು ಫಾರಂನಲ್ಲಿ ನಡೆಯಲಿದೆ ಎಂದು ಸಚಿವ ಮಹದೇವ ಪ್ರಸಾದ್ ಅವರು ತಿಳಿಸಿದ್ದಾರೆ.

ಗಣ್ಯರಿಂದ  ಸಂತಾಪ: ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಸಿಎಂ ಪುತ್ರನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಅಗತ್ಯ ನೆರವನ್ನು ಒದಗಿಸುವಂತೆ ಭಾರತದ ರಾಯಭಾರಿ ಮಂಜಿತ್ ಪುರಿ ಅವರಿಗೆ ಪ್ರಧಾನಿ ಅವರು ಸೂಚನೆ ನೀಡಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಇನ್ನು ಸಿಎಂ ಪುತ್ರನ ಅಕಾಲಿಕ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದು, ರಾಕೇಶ್ ಸಾವು ತೀವ್ರ ಆಘಾತದ ವಿಚಾರ ಎಂದು ಹೇಳಿದ್ದಾರೆ.