ಬ್ಯಾಂಕ್ ದಾಖಲೆ ಕೊಡಿ ಮೋದಿ ಸೂಚನೆ: ಬಿಜೆಪಿ ನಾಯಕರಿಗೆ ಶುರುವಾಯ್ತು ನಡುಕ

0
798

ಭ್ರಷ್ಟಚಾರ ಮತ್ತು ತೆರಿಗೆ ವಂಚಕರ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ನವೆಂಬರ್ ೮ರಂದು ಹಳೆ ನೋಟು ನಿಷೇಧ ಘೋಷಿಸಿದ ನಂತರದ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡುವಂತೆ ಬಿಜೆಪಿಯ ಎಲ್ಲಾ ಜನಪ್ರತಿನಿಧಿಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ನೋಟು ನಿಷೇಧ ಸಮರ್ಥಿಸಿಕೊಳ್ಳುತ್ತಿದ್ದ ಪಕ್ಷದ ಮುಖಂಡರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ನರೇಂದ್ರ ಮೋದಿ ನ.೮ರಂದು ರಾತ್ರಿ ಹಳೆಯ ೫೦೦ ಮತ್ತು ೧೦೦೦ ನೋಟುಗಳನ್ನ ರದ್ದುಪಡಿಸಿದ್ದರು. ಹಣ ಬದಲಾವಣೆ ಹಾಗೂ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲು ಡಿಸೆಂಬರ್ ೩೧ ಗಡುವು ನೀಡಿದ್ದರು.

ಇದೀಗ ಆಯ್ಕೆಯಾಗಿರುವ ಪಕ್ಷದ ಎಲ್ಲಾ ಸಂಸದರು ಹಾಗೂ ಬಿಜೆಪಿ ಆಡಳಿತ ಇರುವ ರಾಜ್ಯಗಳ ಸಚಿವರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಈ ಅವಧಿಯಲ್ಲಿ ತಮ್ಮ ಬ್ಯಾಂಕ್ ಖಾತೆಗಳ ವ್ಯವಹಾರದ ಪೂರ್ಣ ವಿವರಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನೀಡುವಂತೆ ಮೋದಿ ಆದೇಶಿಸಿದ್ದಾರೆ.

ಆದರೆ ಮೋದಿ ಅವರ ಆದೇಶದಿಂದ ಪ್ರತಿಪಕ್ಷ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಮೋದಿ ಅವರೇ ಬಿಜೆಪಿ ಜನಪ್ರತಿನಿಧಿಗಳಿಗೆ ಮಾತ್ರವಲ್ಲ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಎಲ್ಲರೂ ಏಪ್ರಿಲ್ ೧ರಿಂದ ನ.೮ರವರೆಗಿನ ಬ್ಯಾಂಕ್ ಖಾತೆಗಳ ವಿವರವನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದೆ. ಜನರ ಕಣ್ಣೊರೆಸುವ ತಂತ್ರ ಮಾಡಬೇಡಿ ಎಂದು ಪಕ್ಷದ ಮುಖಂಡ ರಣದೀಪ್ ಸಿಂಗ್ ಸುರ್ಜಿವಾಲಾ ಟ್ವೀಟರ್‌ನಲ್ಲಿ ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರ ಸೋಮವಾರ ತೆರಿಗೆ ಸಂಬಂಧಿಸಿ ಹೊಸ ಕಾಯ್ದೆಗೆ ಅನುಮೋದನೆ ಪಡೆದ ಬೆನ್ನಲ್ಲೇ ಈ ಆದೇಶ ಹೊರಡಿಸಿದೆ. ಲೆಕ್ಕ ಇಲ್ಲದ ಹಣದ ವಿವರ ಒದಗಿಸಿದರೆ ಶೇ.೫೦ರಷ್ಟು ದಂಡ ಹಾಗೂ ಶೇ.೨೫ರಷ್ಟು ತೆರಿಗೆ ವಿಧಿಸುವ ಅವಕಾಶ ಹೊಸ ಕಾಯ್ದೆಯಲ್ಲಿದೆ.