ಭಾರತದ ‘ಉರಿ’ ದಾಳಿ: ಹಾಕಿಯಲ್ಲೂ ಪಾಕ್ ಕಂಗಾಲು

0
735

ಭಾರತೀಯ ಸೇನಾಪಡೆ ಗಡಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಅದರಿಂದ ಸ್ಫೂರ್ತಿ ಪಡೆದವರಂತೆ ಪಾಕಿಸ್ತಾನ ತಂಡದ ಪಾಳಯಕ್ಕೆ ನುಗ್ಗಿದ ಭಾರತ ತಂಡದ ಆಟಗಾರರು ಜಯದ ಅಟ್ಟಹಾಸದೊಂದಿಗೆ ೧೮ ವರ್ಷದೊಳಗಿನವರ ಏಷ್ಯಾಕಪ್ ಹಾಕಿ ಪಂದ್ಯಾವಳಿಯಲ್ಲಿ ಫೈನಲ್ ಗೆ ಲಗ್ಗೆ ಹಾಕಿದ್ದಾರೆ.
ಗುರುವಾರ ನಡೆದ ಟೂರ್ನಿಯ ಸೆಮಿಫೈನಲ್ ನಲ್ಲಿ ೩-೧ ಗೋಲುಗಳಿಂದ ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗುಬಡಿಯಿತು.

ಭಾರತದ ಪರ ಶಿವಂ ಆನಂದ್ (೭ನೇ ನಿಮಿಷ), ದಿಲ್ ಪ್ರೀತ್ ಸಿಂಗ್ (೩೨ನೇ ನಿಮಿಷ), ನೀಲಂ ಸಂಜೀಪ್ ಕ್ಸೇಸ್(೪೬ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು. ಪಾಕ್ ಪರ ಅಮ್ಜಾದ್ ಅಲಿ ಖಾನ್ (೬೩ನೇ ನಿಮಿಷ) ಏಕೈಕ ಗೋಲು ಬಾರಿಸಿ ಸೋಲಿನ ಅಂತರ ತಗ್ಗಿಸಿದ ಸಮಾಧಾನ ಪಡೆದರು.
ಪಂದ್ಯದುದ್ದಕ್ಕೂ ಭಾರತೀಯ ಆಟಗಾರರು ಪೂರ್ಣ ಹಿಡಿತ ಸಾಧಿಸಿ ಏಕಪಕ್ಷೀಯ ಜಯ ಸಾಧಿಸಿದರು.

ಮೊದಲಾವಧಿಯಿಂದ ಭರ್ಜರಿ ಸಂಘಟಿತ ಆಟದ ಪ್ರದರ್ಶನವನ್ನು ನೀಡಿದ ಭಾರತ ಆರಂಭದ ೭ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸಂಭ್ರಮಿಸಿತು.
ಎರಡನೇ ಅವಧಿಯಲ್ಲೂ ಭಾರತ ಎದುರಾಳಿ ತಂಡಕ್ಕೆ ಗೋಲುಗಳನ್ನು ಬಿಟ್ಟು ಕೊಡಲಿಲ್ಲ. ಮೂರನೇ ಅವಧಿಯ ಎರಡನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ಸಹ ಆಟಗಾರ ನೀಡಿದ ಉತ್ತಮ ಪಾಸ್‌ನ ಲಾಭ ಪಡೆದು ಗೋಲು ಬಾರಿಸಿದರು. ಭಾರತ ೨-೦ ಗೋಲುಗಳಿಂದ ಮುನ್ನಡೆ ಸಾಧಿಸಿತ್ತು.

ಕೊನೆಯ ಅವಧಿಯಲ್ಲಿ ನೀಲಮ್ ಸಂಜೀಪ್ ಅವರು ೪೬ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರವನ್ನು ಹೆಚ್ಚಿಸಿದರು.
ಕೊನೆಯ ಕ್ಷಣದಲ್ಲಿ ಗೋಲಿನ ನಗೆ ಬೀರಿದ ಪಾಕಿಸ್ತಾನ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು.