ಮಲ್ಯ ಸೇರಿ 100 ಮಂದಿಯ ಸಾಲ ಮನ್ನಾ ಮಾಡಿದ ಎಸ್‍ ಬಿ ಐ

0
777

ದೇಶದ ಅತೀ ದೊಡ್ಡ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್  ಆಫ್ ಇಂಡಿಯಾ (ಎಸ್‍ಬಿಐ) ಉದ್ಯಮಿ ವಿಜಯ್ ಮಲ್ಯ ಸೇರಿದಂತೆ ಉದ್ದೇಶಪೂರ್ವಕ ಸುಸ್ತಿದಾರ ಸಾಲ ಮನ್ನಾ ಮಾಡಲು ನಿರ್ದೆಧರಿಸಿದೆ. ಸುಮಾರು 100 ಖಾತೆದಾರರ  7016 ಕೋಟಿ ಮೌಲ್ಯದ ಸಾಲ ಎಸ್‍ಬಿಐ ಮನ್ನಾ ಮಾಡಲು ನಿರ್ಧರಿಸಿದೆ.

ಸಾಲ ಮನ್ನಾ ಮಾಡಿದವರ ಪಟ್ಟಿಯಲ್ಲಿ 63 ಖಾತೆದಾರರ ಸಾಲವನ್ನು ಪೂರ್ಣವಾಗಿ ಮನ್ನಾ ಮಾಡಿದ್ದು, 31 ಖಾತೆದಾರರ ಸಾಲವನ್ನು ಭಾಗಶಃವಾಗಿ ಮನ್ನಾ ಮಾಡಲಾಗಿದೆ. ಅದೇ ವೇಳೆ 6 ಖಾತೆಗಳನ್ನು ದುಡಿಯದ ಬಂಡವಾಳ (ಎನ್‍ಪಿಎ) ಎಂದು ಘೋಷಿಸಲಾಗಿದೆ.

ಜೂನ್ 30, 2016ರಂದು ಎಸ್‌ಬಿಐ 48,000 ಕೋಟಿ ರೂ. ಸಾಲಮನ್ನಾ ಮಾಡಿತ್ತು. ಆದರೆ ಉದ್ದೇಶಪೂರ್ವಕ ಸುಸ್ತಿದಾರ ಸಾಲವನ್ನು ಮನ್ನಾ ಮಾಡಿದ್ದು ಯಾವಾಗ ಎಂಬುದು ಎಸ್‍ಬಿಐ ದಾಖಲೆಗಳಲ್ಲಿ ಉಲ್ಲೇಖವಾಗಿಲ್ಲ.

ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಏರ್‍‍ಲೈನ್ಸ್ ಈ ಸಾಲಮನ್ನಾ ಪಟ್ಟಿಯಲ್ಲಿದ್ದು, ಸಾಲದ ಮೊತ್ತ 1,201 ಕೋಟಿಯಷ್ಟಿದೆ. ಪತ್ರಿಕೆಗೆ ಸಿಕ್ಕಿದ ಬ್ಯಾಂಕ್ ಬ್ಯಾಲೆನ್ಸ್ ಶೀಟ್ ನಲ್ಲಿ ಮಲ್ಯ ಅವರ ಸಾಲದ ಬಗ್ಗೆ ಮಾತ್ರ ಮಾಹಿತಿ ಇದ್ದು, ಇನ್ನಿತರ 62 ಮಂದಿ ಸಾಲಗಾರರ ಮಾಹಿತಿ ಇಲ್ಲ.

ಸಾಲ ಮನ್ನಾ ಪಟ್ಟಿಯಲ್ಲಿ ಕಿಂಗ್ ಫಿಶರ್ ಏರ್‍ ಲೈನ್ಸ್  ಜತೆಗೆ  ಕೆಎಸ್ ಆಯಿಲ್ ( 596 ಕೋಟಿ), ಸೂರ್ಯ  ಫಾರ್ಮಸುಟಿಕಲ್ಸ್ (526 ಕೋಟಿ) , ಜಿಇಟಿ ಪವರ್  (400 ಕೋಟಿ) ಮತ್ತು ಸಾಯ್ ಇನ್ಫೋ ಸಿಸ್ಟಂ (376 ಕೋಟಿ) ಹೆಸರಿದೆ. ಈ  ರೀತಿ ಸಾಲ ಮನ್ನಾ ಮಾಡಿದ ಖಾತೆಗಳಲ್ಲಿ ಹೆಚ್ಚಿನ ಖಾತೆದಾರರು ಉದ್ದೇಶಪೂರ್ವಕ ಸಾಲ ಪಾವತಿ ಮಾಡದೇ ಇದ್ದವರಾಗಿದ್ದಾರೆ.

ಈ ವಿಷಯ ರಾಜ್ಯಸಭೆಯಲ್ಲಿ ಚರ್ಚೆಯಾಗಿ ವಿರೋಧ ಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿದವು. ಈ ಬಗ್ಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಎಸ್ ಬಿಐ ಯಾರ ಸಾಲವನ್ನೂ ಮನ್ನಾ ಮಾಡಿಲ್ಲ. 63 ಖಾತೆದಾರರನ್ನು ದುರಿಯದ ಬಂಡವಾಳ ಎಂದು ಪ್ರತ್ಯೇಕವಾಗಿ ಬರೆದಿಡಲಾಗಿದೆ. ಸಾಲ ವಸೂಲು ಮಾಡುವ ಹಕ್ಕು ಬ್ಯಾಂಕ್ ಗಳಿಗೆ ಇದ್ದೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.