ಮಹಾಭಾರತ – ರಾಜಕೀಯ ಲೆಕ್ಕಾಚಾರ

0
800

ಹಿಂದೆಲ್ಲ ದೊಂಬರಾಟ ಆಡುವವರು ಊರೂರು ಸುತ್ತುತ್ತಾ ಮನೆ ಮುಂದೆ ಬಂದಾಗ ಅವರಾಡುವ ಆಟದಿಂದ ಸ್ವಲ್ಪ ಮನೋರಂಜನೆ ಸಿಗುತ್ತಿತ್ತು. ಆದರೆ ಈಗ ದೊಂಬರಾಟ ಅಡುವವರಿಗಾಗಿ ಕಾಯುವುದು ಬೇಡ ! ದಿನಾ ಟಿ.ವಿ. ಹಾಕಿದರೆ ಸಾಕು ! ಅರೆ ಇದೇನಿದು? ಟಿ.ವಿ.ನಲ್ಲಿ ದೊಂಬರಾಟ ತೋರಿಸ್ತಾರಾ ಎಂದು ಯೋಚಿಸುತ್ತಿದ್ದೀರಾ? ಇಲ್ವೆ ಮತ್ತೆ ! ನಮ್ಮ ರಾಜಕಾರಣಿಗಳು ಆಡೋ ದೊಂಬರಾಟಕ್ಕಿಂತ ಬೇರೆ ಆಟ ಬೇಕೆನ್ರೀ, ಮಂಗನೂ ಹಾರಲ್ಲ ಹಂಗೆ ಚಂಗ್ ಅಂತಾ ರಾಜಕೀಯ ಪಕ್ಷಾನ ಬದಲಾಯಿಸುತ್ತಾರೆ. ಕುಲಾಂತರಿ ತಳಿಗಳನ್ನು ಕೇಳಿದ್ದಿರಲ್ಲ ಹಾಗೆ ಇವರೊಂತಾರ ಪಕ್ಷಾಂತರಿ ತಳಿಗಳು! ತಮ್ಮ ಬೇಳೆ ಬೇಯಿಸಿಕೊಳ್ಳಲು ಏನು ಬೇಕಾದರೂ ಸೈ! ರಾಜಕೀಯ ದೊಂಬರಾಟದ ನಡುವೆ ನಮ್ಮ ಸಾಮಾನ್ಯ ಜನರ್ರ ಗೋಳನ್ನು ಕೇಳುವವರ್ಯಾರು? ಕುಂತ್ರೆ ನಿಂತ್ರೆ ತಮ್ಮ ರಾಜಕೀಯದ ಬಗ್ಗೆನೇ ಯೋಚಿಸುತ್ತಾರೆ. ಹಾಗಾಗಿ ತಮ್ಮ ವ್ಯಯಕ್ತಿಕ ಜೀವನ್ದಲ್ಲಿ ಕೂಡ ರಾಜಕೀಯ ರೀತಿಯಲ್ಲೆ ಮಾತನಾಡುತ್ತಾರೆ. ಒಮ್ಮೆ ಹೀಗೆ ರಾಜಕಾರಣಿಯವರೊಬ್ಬರಿಗೆ ಅವರ ಆಪ್ತ ಕಾರ್ಯದರ್ಶಿ ಬಂದು ಮೀಟಿಂಗ್ ಮದ್ಯೆ ನಿಮಗೆ ಗಂಡು ಮಗು ಆಯ್ತ ಸಾರ್ ! ಎಂದ್ರೆ ಹಾಂ ಹೌದಾ ಖಂಡಿತಾ ಇದರಲ್ಲಿ ವಿರೋಧ ಪಕ್ಷದವರ ಕೈವಾಡ ಇದೆ ಅನ್ನೋದೆ ಮಹಾರಾಯ !

ಅದ್ರಲ್ಲೂ ನಮ್ಮ ಕರ್ನಾಟಕದಲ್ಲಿ ರಾಜಕೀಯ ಪಕ್ಷದವರು ಆಡ್ತಿರೋ ದೊಂಬರಟವನ್ನು ನೋಡಿ ಉತ್ತರಭಾರತದವರು ಹೇಳ್ತಾರಂತೆ ರಾಜ್ಯದ ಹೆಸರು ಸರಿಯಾಗಿಯೇ ಇದೆ. ‘ಕರ್‍ನಾಟಕ’ ಎಂದು. ಕರ್‍ನಾಟಕ ಎಂದ್ರೆ ಹಿಂದಿಯಲ್ಲಿ ನಾಟಕ ಮಾಡು ಅಂತಾ! ನಾವೆಲ್ಲ ಅಸಹಾಯಕ ಮೂಕಪ್ರೇಕ್ಷಕರಾಗಿದ್ದೇವೆ? ಅಲ್ಲವೇ! ಇನ್ನೂ ಜನಸಾಮಾನ್ಯರೇನಾದರೂ ಸರ್ಕಾರದ ಸಹಾಯಕ್ಕೆ ಅರ್ಜಿ ಗಿರ್ಜಿ ಗುಜರಾಯಿಸಿದರೆ ಕೈಬೆಚ್ಚಗೆ ಮಾಡದೆ ಕೆಲಸವಾಗುವುದೇ ಇಲ್ಲ! ಅಷ್ಟೇ ಅಲ್ಲ ಅಎಲ್ಲ ವಿಷಯಗಳನ್ನು ರಾಜಕೀಯ ಲೆಕ್ಕಾಚಾರದಿಂದಲೇ ನೋಡುವುದು ಇವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಒಮ್ಮೆ ಹೀಗೆ “ಮಹಾಭಾರತ: ಚಲನಚಿತ್ರ ಮಾಡುತ್ತಿರುವುದಾಗಿಯೂ ಅದಕ್ಕೆ ಧನಸಹಾಯ ಮಾಡಬೇಕೆಂದು ಚಿತ್ರನಿರ್ಮಾಪಕ ನಿರ್ದೆಶಕ ಸಂಗೀತ ನಿರ್ದೇಶಕ ಸರ್ಕಾರಕ್ಕೆ ಪತ್ರ ಬರೆದರು. ನಮ್ಮ ಅಧಿಕಾರಶಾಹಿಗಳಿಂದ ಬಂದ ಉತ್ತರ ನೋಡಿ.!

ನೀವು ಕಳಿಸಿದ ಅರ್ಜಿ ಹಾಗೂ ಚಲನಚಿತ್ರದ ಕಥೆಯನ್ನು ಓದಿದ್ದೇವೆ. ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಿದ್ದುಮಾನವಹಕ್ಕು ಆಯೋಗ ರಾಷ್ಟ್ರೀಯ ಮಹಿಳಾ ಆಯೋಗ, ಕಾರ್ಮಿಕ ಅಯೋಗ, ಕಲ್ಯಾಣ ಇಲಾಖೆ, ಪರಿಸರ ಇಲಾಖೆ ಹಾಗೂ ವಿವಿಧ ಇಲಾಖೆಗಳಿಗೆ ಸೇರಿದ ಮಂತ್ರಿಗಳು ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳು ನೀವು ಕಳಿಸಿದ ಕಥೆಯಲ್ಲಿ ಅದರಲ್ಲಿ ಬರುವ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಕೂಲಂಕುಶವಾಗಿ ಪರಾಮರ್ಶಿಸಿ, ಚಿತ್ರದ ಬಗ್ಗೆ ಕೆಳಗಿನ ಸಲಹೆಗಳನ್ನು ಕೊಟ್ಟಿದ್ದಾರೆ. ಈ ಕೆಳಗಿನ ಸಲಹೆ ಸೂಚನೆಗಳನ್ನು ನಿಮ್ಮ ಚಲನಚಿತ್ರ ‘ಮಹಾಭಾರತ’ದಲ್ಲಿ ಅಳವಡಿಸಿಕೊಳ್ಳಲು ಒಪ್ಪಿದ್ದಲ್ಲಿ ಚಿತ್ರಕ್ಕೆ ಧನಸಹಾಯವನ್ನು ಮಾಡಲಾಗುವುದು. ನೀವು ಮಾಡಾಬೇಕಾದ ಮಾರ್ಪಾಡುಗಳೆನೆಂದರೆ—–

ನೀವು ಕಳುಹಿಸಿದ ಮಹಾಭಾರತದ ಕಥೆಯಲ್ಲಿ ಇಬ್ಬರು ದಾಯಾದಿಗಳಿದ್ದು ಅವರಲ್ಲಿ 100 ಮಂದಿ ಕೌರವರು ಹಾಗೂ 5 ಮಂದಿ ಪಾಂಡವರನ್ನು ತೋರಿಸಿದ್ದೀರಿ! ಇದನ್ನು ನೋಡಿದ ಕುಟುಂಬ ಕಲ್ಯಾಣ ಇಲಾಖೆ ಈ ಸಂಖ್ಯೆಗಳು ತುಂಬಾ ಜಾಸ್ತಿಯಾಗಿದ್ದು ಒಂದ್ಕಡೆ ಕುಟುಂಬ ಯೋಜನೆಗೆ ಸರ್ಕರ ಅಧಿಕ ಹಣ ಖರ್ಚು ಮಾಡುತ್ತಿದ್ದು ಚಿತ್ರದಲ್ಲಿ 100 ಹಾಗೂ 5 ಮಕ್ಕಳಿರುವಂತೆ ತೋರಿಸಿರುವುದು ಇಂದಿನ ಯುಗದಲ್ಲಿ ವಿಕ್ಷಕರಿಗೆ ತಪ್ಪು ಮಾಹಿತಿ ರವಾನಿಸಿದಂತಾಗುತ್ತದೆ. ಆದ್ದರಿಂದ ಕುಟುಂಬ ಕಲ್ಯಾಣ ಇಲಾಖೆ ಈ ಚಿತ್ರದಲ್ಲಿ ಕೌರವರ ಕಡೆ 3 ಜನರನ್ನು ಹಾಗೂ ಪಾಂಡವರ ಕಡೆ ಒಬ್ಬರನ್ನು ಮಾತ್ರ ತೋರಿಸಬೇಕೆಂದು ತಾಕೀತು ಮಾಡಿದೆ.

ಪ್ರಜಾಪ್ರಭುತ್ವದ ಇಂದಿನ ಯುಗದಲ್ಲಿ ರಾಜಮಹಾರಾಜರನ್ನು ತೋರಿಸುವುದು ಸರಿಯಲ್ಲ ಎಂದು ಕಥೆಯನ್ನು ಓದಿದ ಸಂಸದೀಯ ವ್ಯವಹಾರಗಳ ಸಚಿವಾಲಯ ಅಭಿಪ್ರಾಯಪಟ್ಟಿದೆ. ಹಾಗಾಗಿ ಕೌರವರನ್ನು ಸಂಸತ್ತಿನ ಗೌರವಾನ್ವಿತ ಲೋಕಸಭಾ ಸದಸ್ಯರನ್ನಾಗಿಯೂ ಹಾಗೂ ಪಾಂಡವರನ್ನು ಸಂಸತ್ತಿನ ಗೌರವಾನ್ವಿತ ರಾಜ್ಯಸಭಾ ಸದಸ್ಯರನ್ನಾಗಿಯೂ ಬಿಂಬಿಸಬೇಕು. ಹಾಗೂ ಚಿತ್ರದ ಕೊನೆಯಲ್ಲಿ ಪಾಂಡವರನ್ನು ಕೌರವರ ವಿರುದ್ಧ ವಿಜಯಗಳಾಗುವುದನ್ನು ತೋರಿಸಿದ್ದೀರಿ. ಹಾಗಾಗಿ ಸಂಸತ್ತಿನ ಯಾವ ಸದಸ್ಯರು ಒಬ್ಬರಿಗಿಂತ ಇನ್ನೊಬ್ಬರು ಕೀಳು ಎಂಬ ಭಾವನೆ ಬರದಂತೆ ಚಿತ್ರದ ಅಂತ್ಯವನ್ನು ಸೂಕ್ತವಾಗಿ ಮಾರ್ಪಾಡು ಮಾಡಬೇಕೆಂದು ಸಚಿವಾಲಯ ಹೇಳಿದೆ.

ಚಿತ್ರದಲ್ಲಿ ಕೌರವರ ಜನನ ಜೈವಿಕ ತಂತ್ರಜ್ಞಾನ ವಿಧದಿಂದ ಆಗಿದ್ದು ಈ ತಂತ್ರಜ್ಞಾನಕ್ಕೆ ಭಾರತದಲ್ಲಿ ವಿರೋಧವಿರುವುದರಿಂದ ಚಿತ್ರದಲ್ಲಿ ಕೌರವರ ಜನನವನ್ನು ಸಾಮಾನ್ಯ ಮಾನವ ಜನ್ಮ ತಾಳುವ ರೀತಿಯಲ್ಲಿ ತೋರಿಸಬೇಕೆಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಸೂಚಿಸುತ್ತದೆ.

ಚಿತ್ರದಲ್ಲಿ ಪಾಂಡವರ ತಂದೆಯಾದ ಪಾಂಡುರಾಜುವಿಗೆ ಇಬ್ಬರು ಹೆಂಡತಿಯರಿದ್ದು ಹಾಗೆಯೇ ಐದು ಜನ ಪಾಂಡವರರಿಗೆ ಒಬ್ಬಳೆ ಹೆಂಡತಿ ಇರುತ್ತಾಳೆ. ದ್ವಿಪತ್ನಿವೃತಸ್ಥರಾಗಿರುವುದು ಭಾರತದಲ್ಲಿ ಕಾನೂನಿಗೆ ವಿರುದ್ಧವಾಗಿರುತ್ತದೆ. ಹಾಗೆಯೇ 5 ಜನ ಗಂಡಂದಿರಿಗೆ ಒಬ್ಬಳೇ ಪತ್ನಿ ಸಮಾಜ ಒಪ್ಪುವಂಥಹದಲ್ಲ ! ಎಂದು ಮಹಿಳಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಹಾಗಾಗಿ ಪಾಂಡು ರಾಜನಿಗೆ ಒಬ್ಬಳೆ ಹೆಂಡತಿ ಇರುವಂತೆ ತೋರಿಸಬೇಕು. ಹಾಗೂ ಮೇಲೆ ಪಾಂಡವರ ಕಡೆ ಒಬ್ಬರನ್ನು ತೋರಿಸಬೇಕೆಂದು ಈಗಾಗಲೇ ಆದೇಶಿಸಿರುವುದರಿಂದ ಒಬ್ಬ ಪಾಂಡವನಿಗೆ ಒಬ್ಬ ಹೆಂಡತಿ ಇರುವುದು ಸಮಾಜಕ್ಕೆ ತಪ್ಪು ಮಾಹಿತಿ ರವಾನಿಸುವುದಿಲ್ಲ.

ಚಿತ್ರದಲ್ಲಿ ದೃತರಾಷ್ಟ್ರನನ್ನು ಕುರುಡನಂತೆ ಬಿಂಬಿಸಿರುವುದು ವಿಕಲಚೇತನರಿಗೆ ಅಗೌರವ ತೋರಿಸಿದಂತೆ ಆಗುವುದು ಆದ್ದರಿಂದ ಆ ಪಾತ್ರಕ್ಕೆ ಕಣ್ಣಿರುವಂತೆ ತೋರಿಸಬೇಕೆಂದು ರಾಷ್ಟ್ರೀಯ ವಿಕಲಚೇತನ ಆಯೋಗ ಅಭಿಪ್ರಾಯ ಪಟ್ಟಿದ್ದು, ಸೂಕ್ತ ಮಾರ್ಪಾಡನ್ನು ಮಾಡಬೇಕೆಂದು ಈ ಮೂಲಕ ನಿಮಗೆ ತಿಳಿಸಲಾಗುತ್ತದೆ.
ಚಿತ್ರದಲ್ಲಿ ಎಲ್ಲರೆದುರು ದ್ರೌಪದಿಯ ವಸ್ತ್ರಾಪಹರಣ ಮಾಡುವುದು ಮಹಿಳೆಗೆ ಅಗೌರವ ತೋರಿದಂತೆ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಗೃಹಸಚಿವಾಲಯ ಈ ರೀತಿಯ ದೃಶ್ಯವನ್ನು ಚಿತ್ರದಲ್ಲಿ ತೋರಿಸುವುದರಿಂದ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಬಹುದು. ಅಷ್ಟೇ ಅಲ್ಲದೆ, ದೇಶಾದ್ಯಂತ ಇರುವ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಬಹುದು. ಹಾಗಾಗಿ ಈ ದೃಶ್ಯಕ್ಕೆ ಚಿತ್ರದಲ್ಲಿ ಕತ್ತರಿ ಹಾಕಬೇಕೆಂದು ಈ ಮೂಲಕ ಆದೇಶಿಸುತ್ತದೆ.

ಚಿತ್ರದಲ್ಲಿ ಕೌರವರು ಮತ್ತು ಪಾಂಡವರು ಜೂಜಾಡುವ ದೃಶ್ಯವಿದ್ದು ಇದು ದೇಶದಲ್ಲಿ ಮುಕ್ತ ಜೂಜಾಟವನ್ನು ಪ್ರಚೋದಿಸಿದಂತೆ ಆಗುತ್ತದೆ. ಆದ್ದರಿಂದ ಚಿತ್ರದಲ್ಲಿ ಕೌರವ ಮತ್ತು ಪಾಂಡವರು ಜೂಜಾಟದ ಬದಲು ಕುದುರೆ ರೇಸ್ ಆಡುವಂತೆ ತೋರಿಸಬೇಕು. [ಸುಪ್ರಿಮ್ ಕೋರ್ಟ್ ಕುದುರೆ ರೇಸ್‍ನ್ನು ಜೂಜಾಟವೆಂದು ಪರಿಗಣಿಸಿಲ್ಲ !] ಹಾಗಾಗಿ ಜೂಜಾಟದ ದೃಶ್ಯವನ್ನು ಚಿತ್ರದಲ್ಲಿ ತೋರಿಸಬಾರದೆಂದು ಈ ಮೂಲಕ ಆದೇಶಿಸಲಾಗಿದೆ.
ಚಿತ್ರದಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ವಿರಾಟರಾಜನ ಅರಮನೆಯಲ್ಲಿ ಯಾವುದೇ ರೀತಿಯ ಸಂಬಳವಿಲ್ಲದೆ ಕೆಲಸ ಮಾಡುವಂತೆ ತೋರಿಸಲಿದ್ದೀರಿ. ಇದು ಮಾನವ ಹಕ್ಕುಗಳ ಕಾಯ್ದೆಗೆ ವಿರುದ್ಧವಾಗಿದ್ದು, ಚಿತ್ರದಲ್ಲಿ ಇವರಿಗೆಲ್ಲಾ ಸಂಬಳ ಕೊಡುವಂತೆ ಚಿತ್ರಿಸಬೇಕೆಂದು ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.
ಯುದ್ಧದ ಸಮಯದಲ್ಲಿ ಅಭಿಮನ್ಯು ಎಂಬ ಹುಡುಗ ಯುದ್ಧ ಮಾಡುವ ಚಿತ್ರವಿದೆ. ಈ ಕಥೆಯನ್ನು ಓದಿದ ಬಾಲ ಕಾರ್ಮಿಕ ಆಯೋಗ ಯುದ್ಧ ಒಂದು ಅಪಾಯಕಾರಿಯಾದ ಕೈಗಾರಿಕೆಯಾಗಿದ್ದು ಹಾಗೂ ಆ ಹುಡುಗನ ವಯಸ್ಸು ಕೇವಲ 16 ವರ್ಷವಾಗಿರುವುದರಿಂದ ಇದು ಬಾಲಕರ್ಮಿಕ ಕಾಯ್ದೆಯÉ ಉಲ್ಲಂಘನೆಯಾಗುತ್ತದೆ. ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡು ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲ ಮಾಡಲು ಹಲವಾರು ಯೋಜನೆಗಳಿಗೆ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡುತ್ತಿದೆ. ಅಷ್ಟೇ ಅಲ್ಲ ಕಥೆಯಲ್ಲಿ ಆತ ಸತ್ತ ನಂತರ ಆತನ ಕುಟುಂಬಕ್ಕೆ ಏನಾದರೂ ಪರಿಹಾರ ಕೊಡಲಾಯಿತು ಎಂಬ ಬಗ್ಗೆ ತಿಳಿಸಿಲ್ಲ; ಇದು ಬಾಲಕಾರ್ಮಿಕ ಕಾಯ್ದೆ (1986 ಹಾಗೂ ಬಾಲಕಾರ್ಮಿಕರಿಗೆ ಕೊಡುವ ಕನಿಷ್ಠ ವೇತನ ಕಾಯ್ದೆ 1948ರ ಉಲ್ಲಂಘನೆಯಾಗುತ್ತದೆ ಆದ್ದರಿಂದ ಬಾಲಕಾರ್ಮಿಕ ಪದ್ಧತಿಯನ್ನು ಪ್ರಚೋದಿಸಿದಂತಾಗುತ್ತದೆ. ಆದ್ದರಿಂದ ಚಿತ್ರದಲ್ಲಿ ಈ ದೃಶ್ಯಕ್ಕೆ ಕತ್ರಿ ಹಾಕಬೇಕು.
ಈ ಕಥೆಯಲ್ಲಿ ಬರುವ ಇನ್ನೊಂದು ಪಾತ್ರವಾದ ಶ್ರೀ ಕೃಷ್ಣ ಚಿತ್ರದುದ್ದಕ್ಕೂ ತನ್ನ ತಲೆಯಲ್ಲಿ ನವಿಲುಗರಿಯನ್ನು ಸಿಕ್ಕಿಸಿಕೊಂಡಿರುತ್ತಾರೆ ನವಿಲು ನಮ್ಮ ರಾಷ್ಟ್ರೀಯ ಪಕ್ಷಿಯಾಗಿದ್ದು ಪ್ರಾಣಿಗಳ ಚರ್ಮ ಹಾಗೂ ಪಕ್ಷಿಗಳ ಗರಿಗಳಿಂದ ತಯಾರಿಸಿದ ವಸ್ತುಗಳನ್ನು ಧರಿಸುವುದು ವನ್ಯಜೀವನ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಅಪರಾಧವಾಗಿರುತ್ತದೆ ಹಾಗಾಗಿ ಕೃಷ್ಣನ ತಲೆಯ ಮೇಲಿದ್ದ ನವಿಲುಗರಿಯನ್ನು ತೆಗೆದುಹಾಕಬೇಕೆಂದು ಈ ಮೂಲಕ ಸೂಚಿಸಲಾಗಿದೆ.
ಚಿತ್ರಕಥೆಯಲ್ಲಿ ಕೊನೆಯ ಯುದ್ಧ ದೃಶ್ಯದಲ್ಲಿ ಅನೇಕ ಕುದುರೆ ಆನೆಗಳನ್ನು ಚಿತ್ರಿಸಲಾಗಿದೆ. ಇದರಿಂದ ಈ ಪ್ರಾಣಿಗಳಿಗೆ ಹಿಂಸೆಯಾಗುವುದಲ್ಲದೆ ಪೆಟ್ಟಾಗುವ ಸಾಧ್ಯತೆಯೂ ಇದೆ. ಪ್ರಾಣಿಗಳನ್ನು ಈ ರೀತಿ ಚಿತ್ರದಲ್ಲಿ ನಡೆಸಿಕೊಳ್ಳುವುದು ಪ್ರಾಣಿ ದೌರ್ಜನ್ಯ ತಡೆ ಕಾಯ್ದೆ 1968ರ ಉಲ್ಲಂಘನೆಯಾಗುತ್ತದೆ ಎಂದು ಪರಿಸರವಾದಿ ಪ್ರಾಣಿಪ್ರಿಯ ಮೇನಕಾಗಾಂಧಿಯವರು ಆಕ್ಷೇಪವ್ಯಕ್ತ ಪಡಿಸಿದ್ದಾರೆ. ಹಾಗಾಗಿ ಚಿತ್ರದಲ್ಲಿ ಪ್ರಾಣಿಗಳ ಬದಲು ಬೇಕಾದರೆ ವಾಹನಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.
ಮೇಲೆ ತಿಳಿಸಿದ ಎಲ್ಲಾ ಮಾರ್ಪಾಡುಗಳನ್ನು ನಿರ್ಮಾಪಕನ ಚಿತ್ರದಲ್ಲಿ ಅಳವಡಿಸಲಿ ನಿಮಗೆ ಒಪ್ಪಿಗೆ ಇದ್ದಲ್ಲಿ ಹಣಕಾಸು ಸಚಿವಾಲಯ ನಿಮ್ಮ ಚಿತ್ರಕ್ಕೆ ಹಣಕಾಸಿನ ನೆರವು ನೀಡಲಿದೆ. ಇದಷ್ಟೇ ಅಲ್ಲದೆ ಯುದ್ಧಭೂಮಿಯಲ್ಲಿ ಎರಡೂ ಕಡೆ ಕೇವಲ 10 ಸೈನಿಕರನ್ನು ಮಾತ್ರ ತೋರಿಸಬೇಕು. ಹಾಗೂ ಆ ಸೈನಿಕರು ಹಿಡಿದ ಶಸ್ತ್ರಾಸ್ತ್ರಕ್ಕೆ ಶಸ್ತ್ರಾಸ್ತ್ರ ಕಾಯ್ದೆ 1959ರ ಪ್ರಕಾರ ವ್ಯಾಲಿಡ್ ಪರವಾನಿಗೆಯನ್ನು ಪಡೆದಿರಬೇಕು. ಮೇಲೆ ಹೇಳಿದ ಎಲ್ಲಾ ಮಾರ್ಪಾಡುಗಳು ನಿಮಗೆ ಒಪ್ಪಿಗೆಯಾದಲ್ಲಿ ಪರಿಷ್ಕೃತ ಕಥೆಯನ್ನು ನಮಗೆ ಕಳುಹಿಸಿರಿ. ಕಥೆಯನ್ನು ಸಮಿತಿ ಮತ್ತೊಮ್ಮೆ ಓದಿ ಹಣಕಾಸಿನ ಸಹಾಯಕ್ಕೆ ಅನುಮೋದನೆ ನೀಡಲಾಗುವುದು ಎಂದು ಸರ್ಕಾರದಿಂದ ಬಂದ ಪತ್ರವನ್ನು ಓದಿದ ನಿರ್ದೇಶಕ ನಿರ್ಮಾಪಕ ಮುಂತಾದವರು ಅಲ್ಲೆ ಮೂರ್ಛೆ ಹೋದರು! ಎಂದು ಬೇರೇ ಹೇಳಬೇಕಿಲ್ಲ!
ಮೇಲೆ ಹೇಳಿದ ಎಲ್ಲಾ ಮಾರ್ಪಾಡುಗಳನ್ನು ಮಾಡಿ 3 ಕೌರವರು, ಒಬ್ಬ ಪಾಂಡವ ರಾಜ್ಯ ಸಭಾ, ಲೋಕಸಭಾ ಸದಸ್ಯರಂತೆ ಬಿಂಬಿಸಿದ ಕೌರವ, ಪಾಂಡವರು, ಅಭಿಮನ್ಯ ಇಲ್ಲದ, ನವಿಲುಗರಿಯಿಲ್ಲದ ಕೃಷ್ಣ, ಕುದುರೆ ಆನೆಗಳಿಲ್ಲದ ಮಹಾಭಾರತ ಚಿತ್ರ ತೆಗೆದರೆ ಹೇಗಿರಬಹುದೆಂದು ಊಹಿಸಿಕೊಳ್ಳಿ! ಹೇಗಿದೆ ನೋಡಿ ನಮ್ಮ ಅಧಿಕಾರ ಶಾಹಿ ಆಡಳಿತ!!
ಪ್ರಕಾಶ್ ಕೆ ನಾಡಿಗ್
ಶಿವಮೊಗ್ಗ
ಪ್ರಕಾಶ್.ಕೆ.ನಾಡಿಗ್
ಒಚಿಟಿಚಿgeಡಿ-ಕಿuಚಿಟiಣಥಿ ಂssuಡಿಚಿಟಿಛಿe
ಓo-18, Wexಜಿoಡಿಜ ಐಚಿboಡಿಚಿಣoಡಿies Pvಣ ಐಣಜ
I ಠಿhಚಿse, ಏIಂಆಃ Iಟಿಜusಣಡಿiಚಿಟ ಂಡಿeಚಿ
ಂಟಿಣhಡಿಚಿsಚಿಟಿಚಿhಚಿಟಟi,
ಖಿumಞuಡಿ-572106
ಒobiಟe-9845529789