ರಾಜ್ಯದ ಜನತೆಯ ಕ್ಷಮೆಯಾಚಿಸಿದ ಅಂಬರೀಶ್

0
907

ಕಾವೇರಿ ವಿವಾದ ತೀವ್ರಗೊಂಡ ಸಂದರ್ಭದಲ್ಲಿ ಮಂಡ್ಯದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಅಂಬರೀಶ್ ಅವರು ವಿದೇಶದಲ್ಲಿ ಕಾಲ ಕಳೆದ ಬಗ್ಗೆ ವ್ಯಾಪಕವಾಗಿ ಟೀಕೆ, ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬುಧವಾರ ಅಂಬರೀಶ್ ದಿಢೀರ್ ಆಗಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ನಾನೇನು ಮೋಜು ಮಾಡಲು ಹೋಗಿರಲಿಲ್ಲ. ಅಕ್ಕ ಸಮ್ಮೇಳನದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಮಾತನಾಡಿದ್ದೆ. ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸದಿರುವುದಕ್ಕೆ ಕರ್ನಾಟಕದ ಜನತೆಯ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.

ಜನರ ಬಗ್ಗೆ ನನಗೆ ಕಾಳಜಿ ಇದೆ. ನಾನು ಈ ಮಟ್ಟಕ್ಕೆ ಏರಲು ಮಂಡ್ಯ ಜಿಲ್ಲೆಯ ಜನರ ಪ್ರೀತಿಯೇ ಕಾರಣ. ಸೆ.30ರ ತೀರ್ಪು ನೋಡಿಕೊಂಡು ಮಂಡ್ಯಕ್ಕೆ ಭೇಟಿ ನೀಡುತ್ತೇನೆ ಎಂದರು.

ನಾನು ಯಾವುದೇ ಮೋಜು, ಮಸ್ತಿ ಮಾಡಲಿಕ್ಕೆ ಹೋಗಿಲ್ಲ. ಮೋಜು, ಮಸ್ತಿ ಮಾಡುವ ವಯಸ್ಸು ಕಳೆದುಹೋಗಿದೆ. ಆದರೆ ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿರಲಿಲ್ಲ ಎಂಬ ಬಗ್ಗೆ ಮನಸ್ಸಿನಲ್ಲೇ ನೋವಿದೆ. ಕಾವೇರಿ ನೀರಿಗಾಗಿ ಮುಖ್ಯಮಂತ್ರಿಗಳು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಅದನ್ನು ನಾನು ಅಭಿನಂದಿಸುತ್ತೇನೆ ಎಂದರು.

ಅಧಿಕಾರ, ಹಣಕ್ಕಾಗಿ ನಾನು ಆಸೆ ಪಟ್ಟವನಲ್ಲ. ನಾವು ಸಂಪಾದನೆ ಮಾಡಬೇಕಾಗಿರುವುದು ಜನಗಳನ್ನು. ಈಗಾಗಲೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆವತ್ತಿನಿಂದ ನಾನು ಶಾಸಕನಾಗಿ ಸಂಬಳ ಪಡೆದಿಲ್ಲ. ಕಾವೇರಿ ವಿಷಯದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಅಧಿಕಾರ ಬಿಟ್ಟು ಬಂದಾಗಲೂ ಜನ ನನ್ನ ಸೋಲಿಸಿದರು. ಅಧಿಕಾರ ಇರುತ್ತೆ, ಹೋಗುತ್ತೆ. ಆದರೆ ನಾವು ಜನರಿಗಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.