ಭಾರತದಲ್ಲಿ ವೇಶ್ಯಾವಾಟಿಕೆಗೆ ಲಕ್ಷಾಂತರ ಮಹಿಳೆಯರು, ಮಕ್ಕಳು ಬಲಿ

0
985

ವಾಶಿಂಗ್ಟನ್:  ಭಾರತದಲ್ಲಿ ವೇಶ್ಯಾವಾಟಿಕೆಗಾಗಿ ಲಕ್ಷಾಂತರ ಮಂದಿ ಮಹಿಳೆಯರು ಮತ್ತು ಮಕ್ಕಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಗುರುವಾರ ಬಿಡುಗಡೆಗೊಂಡ ಅಮೆರಿಕದ ವರದಿಯೊಂದು ತಿಳಿಸಿದೆ. ಅದೇ ವೇಳೆ, ಬಲವಂತದ ಕೂಲಿ ಕೆಲಸ ಮತ್ತು ವೇಶ್ಯಾವಾಟಿಕೆ ದಂಧೆಗಾಗಿ ಭಾರತದಿಂದ ಹೊರಗೆ ಜನರನ್ನು ಸಾಗಿಸಲಾಗುತ್ತಿದೆ, ಹೊರಗಿನಿಂದ ಭಾರತಕ್ಕೆ ಜನರನ್ನು ಕರೆತರಲಾಗುತ್ತಿದೆ ಹಾಗೂ ಹೊರ ದೇಶಗಳ ಜನರನ್ನು ಭಾರತದ ಮೂಲಕ ಸಾಗಿಸಲಾಗುತ್ತಿದೆ ಎಂದು ವರದಿ ಹೇಳಿದೆ. ಅಮೆರಿಕದ ವಿದೇಶಾಂಗ ಇಲಾಖೆಯು ತನ್ನ ವಾರ್ಷಿಕ ”ಟ್ರಾಫಿಕಿಂಗ್ ಇನ್ ಪರ್ಸನ್ಸ್ ರಿಪೋರ್ಟ್ 2016′ ವರದಿಯಲ್ಲಿ ಭಾರತವನ್ನು ಎರಡನೆ ಮಟ್ಟ (ಟಯರ್ 2)ದಲ್ಲಿ ಇರಿಸಿದೆ. ಅತ್ಯುತ್ತಮ ದಾಖಲೆ ಹೊಂದಿರುವ ದೇಶಗಳನ್ನು ಟಯರ್ 1ರಲ್ಲಿ ಇಟ್ಟರೆ, ಅತ್ಯಂತ ಕಳಪೆ ದಾಖಲೆ ಹೊಂದಿರುವ ದೇಶಗಳನ್ನು ಟಯರ್ 3ರಲ್ಲಿ ಇಡಲಾಗುತ್ತದೆ. ಭಾರತದ ಮಟ್ಟದಲ್ಲೇ ಇರುವ ದಕ್ಷಿಣ ಏಶ್ಯ ದೇಶದ ಇತರ ದೇಶಗಳೆಂದರೆ ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶ. ಚೀನಾ, ಪಾಕಿಸ್ತಾನ, ಮಾಲ್ದೀವ್ಸ್, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಮುಂತಾದ ಭಾರತದ ಇತರ ನೆರೆ ದೇಶಗಳನ್ನು ”ಟಯರ್ 2 ವಾಚ್ ಲಿಸ್ಟ್”ನಲ್ಲಿ ಇಡಲಾಗಿದೆ. ಒಂದು ದೇಶವು ‘ಟಯರ್ 2 ವಾಚ್ ಲಿಸ್ಟ್’ನಲ್ಲಿ ಎರಡು ವರ್ಷಗಳ ಕಾಲ ಇದ್ದರೆ, ಅದು ತನ್ನಷ್ಟಕ್ಕೆ ಟಯರ್ 3ಕ್ಕೆ ಕುಸಿಯುವುದು. ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮನಸ್ಸು ಮಾಡಿದರೆ, ಗರಿಷ್ಠ ಎರಡು ವರ್ಷಗಳವರೆಗೆ ಅದೇ ‘ಟಯರ್ 2 ವಾಚ್ ಲಿಸ್ಟ್’ನಲ್ಲಿ ದೇಶವೊಂದು ಇರಬಹುದಾಗಿದೆ. ಅಕ್ರಮ ಮಾನವ ಸಾಗಣೆಯ ಪಿಡುಗನ್ನು ತೊಡೆದುಹಾಕುವುದಕ್ಕಾಗಿ ನಿಗದಿಪಡಿಸಲಾಗಿರುವ ಕನಿಷ್ಠ ಮಾನದಂಡಗಳನ್ನು ಭಾರತದ ಸರಕಾರ ಸಂಪೂರ್ಣವಾಗಿ ಪೂರೈಸಿಲ್ಲ ಎಂದು ವರದಿ ಹೇಳಿದೆಯಾದರೂ, ಈ ನಿಟ್ಟಿನಲ್ಲಿ ಅದು ಸಾಕಷ್ಟು ಪ್ರಯತ್ನಗಳನ್ನು ನಡೆಸಿದೆ ಎಂದಿದೆ