ಸಚಿನ್ ದತ್ತು ಪಡೆದ ನೆಲ್ಲೂರಿನ ಈ ಗ್ರಾಮ ಹೇಗೆ ಬದಲಾಗಿದೆ ಗೊತ್ತಾ?

0
1534

ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಜನಸೇವೆಯಲ್ಲೂ ಎಲ್ಲರಿಗಿಂತಲೂ ಮುಂದು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಸಚಿನ್ ತೆಂಡುಲ್ಕರ್ ದತ್ತು ಪಡೆದ ಆಂಧ್ರಪ್ರದೇಶದ ನೆಲ್ಲೂರಿನ ಪುಟ್ಟಮರಾಜು ಕಂಡ್ರಿಕ ಕುಗ್ರಾಮ ಈಗ `ಬಯಲು ಶೌಚಾಲಯ ಮುಕ್ತ’ ಗ್ರಾಮ ಎಂಬ ಗೌರವಕ್ಕೆ ಪಾತ್ರವಾಗಿದೆ.

ರಾಜ್ಯಸಭಾ ಸದಸ್ಯರೂ ಆಗಿರುವ ಸಚಿನ್ ತೆಂಡುಲ್ಕರ್ ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದರು. ಭೇಟಿ ವೇಳೆ ತಮ್ಮ ಸ್ಥಳೀಯ ನಗರಾಭಿವೃದ್ಧಿ ನಿಧಿಯಿಂದ ಬಿಡುಗಡೆ ಮಾಡಿದ ೨.೭೯ ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದರ ಉದ್ಘಾಟನೆ ಮಾಡಿ ಸಾರ್ಥಕತೆ ಮೆರೆದರು.

ಇದೇ ವೇಳೆ ತಾವು ದತ್ತು ಪಡೆದ ಗ್ರಾಮ ಬಯಲು ಶೌಚಾಲಯ ಮುಕ್ತ ಗ್ರಾಮ ಎಂದು ಘೋಷಿಸಿದರು. ಇದನ್ನು ಸ್ವತಃ ಟ್ವೀಟರ್‌ನಲ್ಲಿ ಹೇಳಿಕೊಂಡಿರುವ ಸಚಿನ್, ಪುಟ್ಟಮರಾಜು ಕಂಡ್ರಿಗ ಗ್ರಾಮದ ಜನರ ಪ್ರೀತಿ, ವಿಶ್ವಾಸದಿಂದ ಇದು ಸಾಧ್ಯವಾಗಿದೆ. ಇಡೀ ಗ್ರಾಮ ಹೊಸ ರೂಪ ಪಡೆಯುತ್ತಿರುವುದು ನೋಡಿದಾಗ ಅದ್ಭುತ ಆನಂದವಾಯಿತು ಎಂದಿದ್ದಾರೆ.

ಗ್ರಾಮಕ್ಕೆ ಬರೀಗೈಯಲ್ಲಿ ಹೋಗದ ಸಚಿನ್, ಕ್ರಿಕೆಟ್ ಕಿಟ್‌ಗಳನ್ನು ತೆಗೆದುಕೊಂಡು ಹೋಗಿ ಸ್ಥಳೀಯ ಮಕ್ಕಳಿಗೆ ನೀಡಿದ್ದಾರೆ. ಅಲ್ಲದೇ ಅಲ್ಲಿನ ಬಡ ಕುಟುಂಬಗಳ ಜೊತೆ ಸಂವಾದ ನಡೆಸಿದ್ದಾರೆ.

ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸಚಿನ್, ಈ ಪುಟ್ಟ ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಯೋಜನೆ ರೂಪಿಸಿಕೊಡುವಂತೆ ಸೂಚಿಸಿದ್ದಾರೆ. ಆದರೆ ಕ್ರೀಡಾಂಗಣ ಕೇವಲ ಕ್ರಿಕೆಟ್‌ಗೆ ಮಾತ್ರವಲ್ಲದೇ ಎಲ್ಲಾ ಕ್ರೀಡೆಗಳಿಗೂ ಅನುಕೂಲವಾಗುವ ಮೂಲಭೂತ ಸೌಕರ್ಯ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.