ಸ್ವದೇಶಿ ನಿರ್ಮಿತ ಎಚ್​ಟಿಟಿ-40 ತರಬೇತಿ ವಿಮಾನ ಅನಾವರಣ

0
943

ಬೆಂಗಳೂರು: ಸ್ವದೇಶಿ ನಿರ್ಮಿತ ಹಿಂದುಸ್ತಾನ್ ಟರ್ಬೋ ಟ್ರೖೆನರ್-40 (ಎಚ್ಟಿಟಿ-40) ತರಬೇತಿ ವಿಮಾನದ ಮೊದಲ ಹಾರಾಟಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕರ್ ಸಾಕ್ಷಿಯಾದರು. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನ ತನ್ನ ಮೊದಲ ಹಾರಾಟ ನಡೆಸಿತು.

ಎಚ್ಟಿಟಿ-40 ವಿಮಾನವನ್ನು ಎಚ್ಎಎಲ್ ವಿನ್ಯಾಸಗೊಳಿಸಿ ನಿರ್ಮಿಸಿದೆ. ಈ ವಿಮಾನವನ್ನು ಪೈಲೆಟ್ ತರಬೇತಿಯ ಮೊದಲ ಹಂತದಲ್ಲಿ ಬಳಸಲು ಉದ್ದೇಶಿಸಲಾಗಿದೆ. 2013ರಲ್ಲಿ ವಿಮಾನ ವಿನ್ಯಾಯ ಕಾರ್ಯವನ್ನು ಪ್ರಾರಂಭಿಸಿ ಮೇ 2015ರಲ್ಲಿ ವಿನ್ಯಾಸವನ್ನು ಅಂತಿಮಗೊಳಿಸಲಾಯಿತು. 12 ತಿಂಗಳ ನಂತರ ಮೊದಲ ವಿಮಾನದ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು. ಭಾರತೀಯ ವಾಯುಸೇನೆ ಈಗಾಗಲೇ 70 ಎಚ್ಟಿಟಿ-40 ವಿಮಾನಗಳಿಗೆ ಬೇಡಿಕೆ ಸಲ್ಲಿಸಿದೆ ಎಂದು ಎಚ್ಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.

2018ರ ವೇಳೆಗೆ ವಿಮಾನಕ್ಕೆ ಕಾರ್ಯಾಚರಣೆ ನಡೆಸಲು ಅನುಮತಿ ಸಿಗುವ ಸಾಧ್ಯತೆ ಇದೆ. ಈ ವಿಮಾನವನ್ನು ವಾಯುಪಡೆಯ ಪ್ರಸ್ತುತ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಶಸ್ತ್ರಾಸ್ತ್ರಗಳನ್ನು ಅಳವಡಿಸಲೂ ಸಹ ವ್ಯವಸ್ಥೆ ಮಾಡಲಾಗಿದೆ. 2800 ಕೆ.ಜಿ. ತೂಕ ಹೊಂದಿರುವ ಈ ವಿಮಾನಕ್ಕೆ 950 ಎಸ್ಎಚ್ಪಿ ಕ್ಲಾಸ್ನ ಟರ್ಬೆ ಪ್ರೊಪೆಲ್ಲರ್ ಇಂಜಿನ್ ಅಳವಡಿಸಲಾಗಿದೆ. ಈ ವಿಮಾನವನ್ನು ಸಂಪೂರ್ಣವಾಗಿ ದೇಶದಲ್ಲೇ ನಿರ್ಮಿಸಲಾಗಿದೆ. ಇದರ ಬಹುತೇಕ ಬಿಡಿಭಾಗಗಳನ್ನು ದೇಶದಲ್ಲೇ ಉತ್ಪಾದಿಸಲಾಗಿದೆ ಎಂದು ಎಚ್ಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.