ಕುಣಿಯಲು ಬರದಿದ್ದರೆ ಅಂಗಳು ಡೊಂಕೆ?

0
758

ರಾಜ್ಯ ಸರಕಾರದ ಮುಂದೆ ಬಹಳಷ್ಟು ಗಂಭೀರ ಸಮಸ್ಯೆಗಳಿವೆ. ಅದರಲ್ಲಿ ಪ್ರಮುಖವಾಗಿ ಮಹದಾಯಿ ಮತ್ತು ಕಾವೇರಿ ನೀರಿನ ವಿವಾದಗಳು ತಲೆತಿನ್ನತೊಡಗಿವೆ. ಇದರ ಜೊತೆಗೆ ಪೊಲೀಸ್ ಇಲಾಖೆಯ ವೈಫಲ್ಯವೂ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ಇದಕ್ಕಿಂತ ಮಿಗಿಲಾಗಿ ಆಡಳಿತ ಕಾಂಗ್ರೆಸ್ ಪಕ್ಷದಲ್ಲಿಯ ಭಿನ್ನಮತ ಬಗೆಹರಿಯದೆ ಒಳಸಂಚುಗಳಿಗೆ ಆಸ್ಪದ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಕ್ಕೆ ಕುಂದು ತರಲು ಆಡಳಿತ ಪಕ್ಷದಲ್ಲಿಯ ನಾಯಕರೆ ಪ್ರಯತ್ನಿಸುತ್ತಿರುವ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಗೃಹ ಸಚಿವರಾದ ಮೇಲೆ ಅವರ ಮೇಲೆ ಗೂಬೆ ಕೂಡಿಸಲು ಆಗಾಗ ಗಲಭೆಗಳನ್ನು ಮಾಡುವ ಸಂಚು ಕೂಡ ಇಲ್ಲದಿಲ್ಲ. ಜೊತೆಗೆ ವೈಫಲ್ಯ ಕೂಡ ಇದರ ಭಾಗವೇ? ಎಂಬ ಅನುಮಾನ ಮೂಡುವಂತಾಗಿದೆ. ಇದು ಮೂಲ ಮತ್ತು ವಲಸಿಗರ ನಡುವಿನ ಗುದ್ದಾಟವೂ ಹೌದು. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೂ ಸರಿ ಇಲ್ಲ, ಅನ್ನಲು ಇಂದಿನ ವಿದ್ಯಮಾನಗಳೆ ಸಾಕ್ಷಿ. ಅನೇಕ ಸಚಿವರು ಜಿಲ್ಲೆಯ ಉಸ್ತುವಾರಿ ಹೊಂದಿದ್ದರೂ ಅಲ್ಲಿಯ ಕಾರ್ಯಕರ್ತರೊಡನೆ ಸರಿಯಾಗಿ ವರ್ತನೆ ಮಾಡದಿರುವ ಬಗ್ಗೆ ಆರೋಪಗಳು ಬಂದಿವೆ.

ರಾಷ್ಟ್ರೀಯ ಕಾಂಗ್ರೆಸ್ ವರಿಷ್ಠರು ಈಗ ಉತ್ತರ ಪ್ರದೇಶ ಚುನಾವಣೆಯತ್ತ ಗಮನ ಹರಿಸಿದ್ದಾರೆ. ಅಲ್ಲಿ ಅವರ ಚಿತ್ತ ಇದ್ದಾಗ ರಾಜ್ಯದ ವಿದ್ಯಮಾನಗಳು ನಗಣ್ಯ ಎನಿಸಿವೆ. ಜೊತೆಗೆ ಈಗ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣಾ ಚಾಣಾಕ್ಷ ಪ್ರಶಾಂತ ಕಿಶೋರ್ ಹೇಳಿದ ಹಾಗೆ ಕೇಳಬೇಕಾಗಿದೆ. ಅವರ ಮಾರ್ಗದರ್ಶನದಲ್ಲಿ ರಾಹುಲ್ ಗಾಂಧಿ ಕೂಡ ಹೇಳಿಕೆ ನೀಡಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ದಲಿತ ವಿರೋಧಿ ಎಂದು ಬಿಂಬಿಸಲು ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ. ಗುಜರಾತ್ ದಲಿತ ಸಮಸ್ಯೆಯನ್ನೆ ಪ್ರಮುಖವಾಗಿ ಇಟ್ಟುಕೊಂಡು ದೇಶಾದ್ಯಂತ ಮೋದಿ ವಿರುದ್ಧ ಅದರಲ್ಲೂ ಆರ್‍ಎಸ್‍ಎಸ್ ವಿರುದ್ಧ ಗಂಭೀರ ಆರೋಪ ಮಾಡಲಾಗುತ್ತಿದೆ.

ಹಿಂದೆ ಪ್ರಶಾಂತ ಕಿಶೋರ್ ಇದೇ ತಂತ್ರವನ್ನು ಬಿಹಾರ್ ಚುನಾವಣೆಯಲ್ಲಿಯೂ ಮಾಡಿ ಯಶಸ್ವಿಯಾಗಿದ್ದರು. ಬಿಹಾರ ಚುನಾವಣೆ ಸಂದರ್ಭದಲ್ಲಿ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ ಭಾಗವತ ಮೀಸಲಾತಿ ಕುರಿತು ನೀಡಿದ ಹೇಳಿಕೆಯನ್ನು ಬಿಜೆಪಿ ದಲಿತ ವಿರೋಧಿ ಎಂದು ಬಿಂಬಿಸಿ ನೀತಿಶ್ ಪಕ್ಷಕ್ಕೆ ಮತದಾರರು ವಾಲುವಂತೆ ಮಾಡಿದ ತಂತ್ರ ಫಲಿಸಿತ್ತು. ಈಗ ಅದೇ ಮಾದರಿಯಲ್ಲಿ ಗೋರಕ್ಷಣೆ ಹೆಸರಿನಲ್ಲಿ ಹಿಂದೂಗಳು ದಲಿತರ ಮೇಲೆ ದೌರ್ಜನ್ಯ ಎಸುಗುತ್ತಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಬಿಜೆಪಿ ನೇತೃತ್ವದ ಪ್ರಧಾನಿ ಮೋದಿ ಆಡಳಿತ ಕಾರಣ ಎಂದು ಅಬ್ಬರಿಸಲಾಗುತ್ತಿದೆ.

ಇಂತಹದೆ ತಂತ್ರ ಈಗ ಕರ್ನಾಟಕದಲ್ಲಿ ಮಾಡುವತ್ತ ಕಾಂಗ್ರೆಸ್ ಚಿತ್ತ ಹರಿಸಿದೆ. ಕಾಂಗ್ರೆಸ್ ರಾಜ್ಯದಲ್ಲಿ ಪುನಃ ಅಧಿಕಾರಕ್ಕೆ ಬರಲು ಈಗಿನಿಂದಲೆ ಸಿದ್ಧತೆ ನಡೆಸಿದೆ. ಇತ್ತೀಚಿನ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಪಕ್ಷದ ಉಸ್ತುವಾರಿ ದಿಗ್ವಿಜಯ ಸಿಂಗ್ ಪಕ್ಷದ ಗೆಲುವಿಗೆ ತಂತ್ರ ರೂಪಿಸಲು ಸಲಹೆ ನೀಡಿದ್ದಾರೆ.

ರಾಜ್ಯ ಸರಕಾರದ ವೈಫಲ್ಯ ಮರೆ ಮಾಚಲು ಪ್ರತಿಪಕ್ಷ ಬಿಜೆಪಿ ಮೇಲೆ ಗೂಬೆ ಕೂಡಿಸಲು ಪಕ್ಷದ ನಾಯಕರು ಹೊರಟಿದ್ದಾರೆ. ಅಲ್ಲಲ್ಲಿ ವರದಿಯಾಗುವ ಗಲಭೆಗಳಿಗೆ ಬಿಜೆಪಿ ಕಾರಣ ಎಂದು ಕಾಂಗ್ರೆಸ್ ಧುರೀಣರು ಆಪಾದಿಸುತ್ತಿರುವದನ್ನು ನೋಡಿದರೆ ಇದರ ಹಿಂದಿನ ತಂತ್ರ ಗೋಚರವಾಗುತ್ತದೆ.

ಆಪಾದನೆಗಳು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟ. ಅದರಲ್ಲಿ ಯಾವದೇ ಹುರಳಿಲ್ಲದಿದ್ದರೂ ಸಧ್ಯದ ಮಟ್ಟಿಗೆ ಚರ್ಚೆಗೆ ಗ್ರಾಸ ಒದಗಿಸಿ ಜನರಲ್ಲಿ ಗೊಂದಲ ಸೃಷ್ಟಿಸುವದಂತೂ ಖಚಿತ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿತ ನ್ಯಾಯಾಲಯ ತೀರ್ಪಿನ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಉಂಟಾದ ಹಿಂಸಾಚಾರದಲ್ಲಿ ಆರ್‍ಎಸ್‍ಎಸ್ ಕೈವಾಡ ಇದೆ ಎಂದು ಪಕ್ಷದ ರಾಜ್ಯ ಅಧ್ಯಕ್ಷ ಪರಮೇಶ್ವರ್ ಮತ್ತು ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನಡೆಸಿದ ಸಭೆಯಲ್ಲಿ ಹಲವು ಧುರೀಣರು ಅಪಸ್ವರ ಎತ್ತಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಸಾಥ್ ನೀಡಿದ್ದಾರೆ. ಇಷ್ಟೂ ಸಾಲದೆಂಬಂತೆ ನದಿ ನೀರಿನ ಹಂಚಿಕೆ ತಂಟೆ ಬಗೆ ಹರಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ಸಾಧ್ಯತೆ ಇದ್ದರೂ ಅವರು ಮುಂದಾಗುತ್ತಿಲ್ಲ. ಇದರಲ್ಲಿ ರಾಜಕೀಯ ವಾಸನೆ ಇದೆ ಎಂಬ ಗಂಭೀರ ಆರೋಪವನ್ನು ದಿನೇಶ್ ಗುಂಡೂರಾವ್ ಮಾಡಿದ್ದಾರೆ.

ಕಾವೇರಿ ವಿವಾದಕ್ಕೆ ದೊಡ್ಡ ಇತಿಹಾಸವೇ ಇದೆ. ಯಾವ ಸರಕಾರ ಬಂದರೂ ಅಷ್ಟೆ ವಿವಾದ ಬಗೆ ಹರಿಸಿಕೊಳ್ಳುವ ಬದಲು ರಾಜಕೀಯಗೊಳಿಸಲು ಮುಂದಾಗುವದನ್ನೆ ಕಾಣುವಂತಾಗಿದೆ. ರಾಜ್ಯ ಸರಕಾರ ಸರಿಯಾದ ಮಾಹಿತಿ ನೀಡದ್ದರಿಂದ ನ್ಯಾಯಾಲಯದಲ್ಲಿ ರಾಜ್ಯಪರ ತೀರ್ಪು ಬಂದಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿದ್ದರೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸದೆ ವಿವಾದ ಜೀವಂತ ಇಟ್ಟು ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ತಲೆಗೆ ಕಟ್ಟುತ್ತಿದ್ದಾರೆ ಎಂಬುದು ಕಾರ್ಯಾಧ್ಯಕ್ಷರ ಹೇಳಿಕೆಯಾಗಿದೆ.

ಮುಖ್ಯಮಂತ್ರಿಗಳು ಇದೇ ತಂತ್ರವನ್ನು ಮಹದಾಯಿ ವಿಷಯದಲ್ಲಿಯೂ ಮಾಡುತ್ತಿದ್ದಾರೆಂದು ಪ್ರತಿಪಕ್ಷ ಬಿಜೆಪಿ ಆಪಾದಿಸಿದೆ. ಜನರ ಸಮಸ್ಯೆಗಳು ಗೊತ್ತಿದ್ದರೂ ರಾಜಕೀಯಗೊಳಿಸುವ ಧೋರಣೆ ರಾಜಕೀಯ ಪಕ್ಷಗಳಿಗೆ ಇಷ್ಟ ಎನ್ನಲು ಇದು ಸ್ಪಷ್ಟ ನಿದರ್ಶನ.

ರಾಜ್ಯದ ಹಿತದೃಷ್ಟಿಗಿಂತ ರಾಜಕೀಯ ಪಕ್ಷಗಳಿಗೆ ತಮ್ಮ ಪಕ್ಷದ ಅಸ್ತಿತ್ವವೇ ಪ್ರಮುಖವಾಗಿದೆ. ಮತ ಪಡೆಯಲು ರಾಜಕೀಯ ತಂತ್ರ ಬಳಿಸಿ ರಾಜ್ಯದ ಹಿತಕ್ಕೆ ಧಕ್ಕೆ ಉಂಟು ಮಾಡುವದು ಎಷ್ಟು ಸರಿ? ಕುಣಿಯಲು ಬರದಿದ್ದರೆ ಅಂಗಳು ಡೊಂಕು ಎನ್ನುವದು ಇಂದಿನ ರಾಜಕೀಯ ಪಕ್ಷಗಳ ಸಿದ್ಧಾಂತವಾಗಿದೆ.

ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂಡಿಸುವ ರಾಜಕೀಯ ಪಕ್ಷಗಳ ಧೋರಣೆ ರಾಜ್ಯದ ಹಿತಕ್ಕೆ ಮಾರಕ.