ಹುಬ್ಬಳ್ಳಿಯಲ್ಲಿ 1 ರೂಪಾಯಿಗೆ ಫುಲ್ ಮೀಲ್ಸ್

0
6467

ಈಗಿನ ಕಾಲದಲ್ಲಿ ಒಂದು ರೂಪಾಯಿಗೆ ಏನು ಸಿಗುತ್ತೆ ಹೇಳಿ. ಒಂದು ನಿಮಿಷದ ಲೋಕಲ್ ಫೋನ್ ಕಾಲ್ ಮಾಡಬಹುದಷ್ಟೇ. ಒಂದು ರೂಪಾಯಿಗೆ ಹೊಟ್ಟೆ ತುಂಬುವಷ್ಟು ಒಂದು ಊಟ ಸಿಕ್ಕರೆ.. ನಂಬಲು ಸಾಧ್ಯವಿಲ್ಲ ಅಲ್ಲವೇ ?

ಒಂದು ಚಹ ಕುಡಿದರೂ ಕನಿಷ್ಠ ರೂ 5 ನೀಡಬೇಕು. ಅಂಥದ್ದರಲ್ಲಿ ಎರಡು ರೊಟ್ಟಿ, ಪಲ್ಯ, ಬೂಂದಿ ಕೇವಲ 1 ರೂಪಾಯಿಗೆ ನೀಡುತ್ತಿರುವುದು ನಮ್ಮಂತಹ ಬಡವರಿಗೆ ನೆರವಾಗಿದೆ ಎಂದು ಮಗನನ್ನು ಚಿಕಿತ್ಸೆಗೆ ದಾಖಲಿಸಿರುವ ಸಿಂಧನೂರಿನ ಗೂಳಪ್ಪ ಸಂತಸ ವ್ಯಕ್ತಪಡಿಸುತ್ತಾರೆ.

ಇಂತಹ ಊಟದ ವ್ಯವಸ್ಥೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿದೆ. ಮಹಾವೀರ ಯುಥ್ ಫೆಡರೇಶನ್ ರೋಟಿ ಘರ್ ಎಂಬ ಹೊಟೆಲ್ ಆರಂಭಿಸಿದ್ದು, ರೋಟಿ, ಚಪಾತಿ, ಪಲ್ಯೆ, ಅನ್ನ ಸಾರು, ಫಲಾವ್, ಪಚಡಿ, ಮುಂಗಸಬಜಿ,ಮಜ್ಜಗಿ ಸಾರು, ಉಪ್ಪಿನಕಾಯಿ ಊಟದಲ್ಲಿರುತ್ತವೆ. ಉಪ್ಪಿಟ್ಟು, ಶಿರಾ, ಜೈನ್ ಫುಡ್ ಹಾಗೂ ಹಬ್ಬ ಹರಿದಿನಗಳಲ್ಲಿ ಉಂಡಿ, ಜಿಲೇಬಿ ಹಾಗೂ ಇನ್ನಿತರ ಸಿಹಿ ಊಟವನ್ನೂ ಇಲ್ಲಿ ವಿತರಿಸಲಾಗುತ್ತದೆ. ನಿತ್ಯ ಮಧ್ಯಾಹ್ನ 12ರಿಂದ 2.30ರ ವರೆಗೆ ಮಾತ್ರ ಇದರ ಸೇವೆ.

ಊಟ ಮಾಡುವವರಿಗೆ ಮುಜುಗರ ಆಗಬಾರದು ಎಂಬ ಉದ್ದೇಶದಿಂದ ಒಂದು ರೂಪಾಯಿ ದರ ನಿಗದಿ ಮಾಡಲಾಗಿದೆ. ಈ ರೋಟಿ ಘರ್‌ನಲ್ಲಿ ಒಂದು ಡಬ್ಬಿ ಇದೆ. ಅದರಲ್ಲಿ ಒಂದು ರೂ. ಹಾಕಿ, ಸರದಿಯಲ್ಲಿ ನಿಂತರೆ ಸಾಕು. ತಟ್ಟೆಯಲ್ಲಿ ರೊಟ್ಟಿ, ಪಲ್ಯೆ, ಅನ್ನ ಸಾರು ಹಾಕಿಯೇ ಬಿಡುತ್ತಾರೆ. ಇಲ್ಲಿ ಮೂರು ಜನ ಕೆಲಸ ನಿರ್ವಹಿಸುತ್ತಿದ್ದು, ಇಬ್ಬರು ಮಹಿಳೆಯರು, ಒಬ್ಬ ಪುರುಷನನ್ನು ನೇಮಿಸಲಾಗಿದೆ. ಅವರು ಈರುಳ್ಳಿ, ಬೆಳ್ಳುಳ್ಳಿ ಹಾಕದೇ ಸಿದ್ಧ ಪಡಿಸುವ ಬಿಸಿಬಿಸಿ ರೊಟ್ಟಿ, ಪಲ್ಯ, ಅನ್ನ ಸಾರನ್ನು ಸರದಿಯಲ್ಲಿ ಬರುವ ಜನತೆಗೆ ವಿತರಿಸುತ್ತಾರೆ.

ಎಲ್ಲರಿಗೂ ಚೆನ್ನಾಗಿ ಊಟ ಬಡಿಸುತ್ತೇವೆ. ಮತ್ತೆ ಕೇಳಿದರೂ ಊಟ ವಿತರಿಸುತ್ತೇವೆ. ಸ್ವಲ್ಪ ತಡವಾಗಿ ಬಂದರೂ ಊಟ ಖಾಲಿಯಾಗಿದೆ ಎಂದು ಹೇಳದೇ ಸ್ವಲ್ಪ ಇದ್ದರೂ ಅವರಿಗೆ ಊಟ ಕೊಡುತ್ತೇವೆ. ಯಾರಿಗೂ ಭೇದಭಾವ ಮಾಡುವುದಿಲ್ಲ ಎಂದು ಉಸ್ತುವಾರಿ ಮ್ಯಾನೇಜರ್ ಬಸವರಾಜ ಮೆಣಸಿನಕಾಯಿ ಹೇಳುತ್ತಾರೆ.