ಮತ್ತೆ ಹರಿದ ಯೋಧರ ರಕ್ತ; ಮಹಾರಾಷ್ಟ್ರದಲ್ಲಿ ನಕ್ಸಲರಿಂದ ಟ್ರಕ್ ಸ್ಫೋಟ; 16 ಸೇನಾ ಕಮಾಂಡೋಗಳು ಹುತಾತ್ಮ

0
462

ಪುಲ್ವಮಾ ದಾಳಿ ಮಾಸುವ ಮುನ್ನವೇ ಮತ್ತೊಂದು ಭಯಾನಕ ಘಟನೆ ನಡೆದಿದ್ದು 16 ಸೇನಾ ಕಮಾಂಡೋಗಳು ಹುತಾತ್ಮ ರಾಗಿದ್ದಾರೆ. ಮಹಾರಾಷ್ಟ್ರದ ಗಡ್‍ಚಿರೋಳಿಯಲ್ಲಿ ಭದ್ರತಾ ಪಡೆಯ ಕಮಾಂಡೋಗಳಿದ್ದ ಪೊಲೀಸರ ವಾಹನವನ್ನು ಸುಧಾರಿತ ಸ್ಫೋಟಕ ಸಾಧನದಿಂದ (ಐಇಡಿ) ಸ್ಫೋಟಿಸಿರುವ ನಕ್ಸಲರು, ಯೋಧರನ್ನು ಬಲಿತೆಗೆದುಕೊಂಡಿದ್ದಾರೆ. ಘಟನೆಯಲ್ಲಿ ವಾಹನದ ಚಾಲಕ ಸಹ ಮೃತಪಟ್ಟಿದ್ದಾರೆ. ಕಳೆದ ವರ್ಷ ಸೇನಾ ಕಮಾಂಡೋಗಳು 40 ನಕ್ಸಲರನ್ನು ಹತ್ಯೆಗೈದಿದ್ದರು. ಆ ಘಟನೆಗೆ ಮಾವೋವಾದಿಗಳು ಇವತ್ತು ಸೇಡು ತೀರಿಸಿಕೊಂಡಿದ್ದಾರೆ.

ಏನಿದು ಘಟನೆ?

ಮಹಾರಾಷ್ಟ್ರದ ಗಡ್‍ಚಿರೋಳಿಯಲ್ಲಿ ಮಾವೋವಾದಿಗಳು ಮೂವತ್ತಕ್ಕೂ ಹೆಚ್ಚು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿ ಆರ್ಭಟಿಸಿದ ಬೆನ್ನಲ್ಲೇ ನಕ್ಸಲರು 16 ಕ್ಕೂ ಹೆಚ್ಚು ಸೇನಾ ಕಮಾಂಡೋಗಳನ್ನ ಬಲಿತೆಗೆದುಕೊಂಡಿದ್ದಾರೆ. ಗಡಚಿರೋಲಿಯಲ್ಲಿ ಸಿ-60 ಕಮಾಂಡೋಗಳ ತಂಡವೊಂದನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಮೇಲೆ ನಕ್ಸಲರು ಐಇಡಿ ಬಾಂಬ್ ಸ್ಫೋಟಿಸಿದ ಪರಿಣಾಮ 15ಕ್ಕೂ ಹೆಚ್ಚು ಕಮಾಂಡೋಗಳು ದಾರುಣ ಸಾವನ್ನಪ್ಪಿದ್ದಾರೆ. ಟ್ರಕ್ ಚಾಲಕ ಕೂಡ ಮೃತಪಟ್ಟಿದ್ದಾರೆ. ಬಾಂಬ್ ಸ್ಫೋಟದ ಬೆನ್ನಲ್ಲೇ ನಕ್ಸಲ್ ಮತ್ತು ಉಳಿದು ಕಮಾಂಡೋಗಳ ನಡುವೆ ಗುಂಡಿನ ದಾಳಿ ನಡೆದಿದೆ.

ಘಟನೆ ನಡೆದಿದ್ದು ಹೇಗೆ?

ಯೋಧರಿದ್ದ ವಾಹನ ತೆರಳುತ್ತಿದ್ದ ಮಾರ್ಗದ ಮಧ್ಯೆ ಉಗ್ರರು ದೊಡ್ಡ ಕಲ್ಲುಗಳನ್ನು ಇಟ್ಟು ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಯೋಧರು ವಾಹನದಿಂದ ಕೆಳಗಿಳಿದು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಮರೆಯಲ್ಲಿ ಅವಿತಿಟ್ಟುಕೊಂಡಿದ್ದ ನಕ್ಸಲರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿದರು. ಇದೇ ಸಂದರ್ಭದಲ್ಲಿ ಯೋಧರು ಮತ್ತು ಮಾವೋವಾದಿಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆಯಿತು. ಈ ಘಟನೆಯಲ್ಲಿ 15 ಯೋಧರು ಹುತಾತ್ಮರಾಗಿ ತೀವ್ರತೆಗೆ ವಾಹನ ನಜ್ಜುಗುಜ್ಜಾಗಿದೆ. ಇದಕ್ಕೂ ಮೊದಲು ಬುಧವಾರ ಬೆಳಿಗ್ಗೆ ನಕ್ಸಲರು ಗಡ್ಚಿರೋಲಿ ಜಿಲ್ಲೆಯ ಕುರ್ಖೇಡಾದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿದ್ದ 27 ಯಂತ್ರಗಳಿಗೆ ಮತ್ತು 30 ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಕಳೆದ 18 ದಿನಗಳಲ್ಲಿ 25 ಯೋಧರು ಬಲಿಯಾಗಿದ್ದಾರೆ.

ಘಟನೆಗೆ ಮೋದಿಯವರ ಪ್ರತಿಕ್ರಿಯೆ?

ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ‘ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಮ್ಮ ಭದ್ರತಾ ಸಿಬ್ಬಂದಿ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಎಲ್ಲ ಧೈರ್ಯಶಾಲಿ ಯೋಧರಿಗೆ ನಮನಗಳು. ಅವರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ. ಈ ಹುತಾತ್ಮ ಯೋಧರ ಕುಟುಂಬಕ್ಕೆ ನನ್ನ ಸಂತಾಪಗಳು. ಇಂತಹ ಹಿಂಸಾಚಾರ ನಡೆಸಿದ ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಮೋದಿ ಹೇಳಿದ್ದಾರೆ.

ಈ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ನಕ್ಸಲರು ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಖಾಸಗಿ ಗುತ್ತಿಗೆದಾರರೊಬ್ಬರಿಗೆ ಸೇರಿದ್ದ ಎರಡು ಜೆಸಿಬಿ, 11 ಟಿಪ್ಪರ್, ಡೀಸೆಲ್ ಮತ್ತು ಪೆಟ್ರೋಲ್ ಟ್ಯಾಂಕರ್ಸ್, ರೋಡ್ ರೋಲರ್ಸ್, ಜನರೇಟರ್ ವ್ಯಾನ್‍ಗಳು ಸೇರಿದಂತೆ 25 ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದಾರೆ. ಬೆಂಕಿಗೆ ಆಹುತಿಯಾದ ವಾಹನಗಳ ಸುಟ್ಟು ಕರಕಲಾಗಿವೆ.