ಹುಡುಗಿ ಹುಡುಕಲು ಯುವಕ ಮಾಡಿದ್ದೇನು ಗೊತ್ತಾ..?

0
169

ಕೊಟ್ಟಾಯಂ: ಹಲವರು ಮದುವೆಗೆ ಹುಡುಗಿಯರ ಬರ ಕಾಡುತ್ತಿದೆ ಎನ್ನುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮದುವೆಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಇಲ್ಲೊಬ್ಬ ಯುವಕ ಏನ್ ಮಾಡಿದ್ದಾನೆ ಗೊತ್ತಾ..?

ಐದಾರು ವರ್ಷಗಳಿಂದ ಹುಡುಗಿ ಹುಡುಕಿ ಹುಡುಕಿ ಸಾಕಾದ ಕೇರಳದ ಕೊಟ್ಟಾಯಂ ಯುವಕನೊಬ್ಬ ಅದ್ಭುತ ಪ್ಲ್ಯಾನ್ ಮಾಡಿಬಿಟ್ಟಿದ್ದಾನೆ. ವಧು-ವರರ ಕೇಂದ್ರದಲ್ಲಿ ಹೆಸರು ನೋಂದಾಯಿಸಿದರೂ, ವೆಬ್ಸೈಟ್ಗಳಲ್ಲಿ ವಧು ಬೇಕಾಗಿದ್ದಾಳೆ ಎಂದು ಜಾಹೀರಾತು ಕೊಟ್ಟರೂ ಫಲ ಕಾಣದ 35 ವರ್ಷದ ಯುವಕನ ಪ್ಲ್ಯಾನ್ ಈಗ ಯಶಸ್ಸು ಕಂಡಿದೆ.

ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ತನ್ನದೇ ಆದ ವುಡ್ ಮಿಲ್ ಹೊಂದಿರುವ 35 ವರ್ಷದ ಅನೀಶ್ ಸೆಬಾಸ್ಟೀಯನ್, ತನ್ನದೇ ಮಾಲೀಕತ್ವದ ಮರದ ಮಿಲ್ನ ಹೊರಗಡೆ ‘ವಧು ಬೇಕಾಗಿದ್ದಾಳೆ’ ಎಂಬ ಫ್ಲೆಕ್ಸ್ ಹಾಕಿಸಿಬಿಟ್ಟಿದ್ದಾನೆ. ಈತನ ಅದೃಷ್ಟ ಖುಲಾಯಿಸಿ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿದೆ. ಇದೀಗ ಅನೇಕ ಮಂದಿ ಈತನನ್ನು ಸಂಪರ್ಕಿಸುತ್ತಿದ್ದಾರೆ. ವಧು ಹುಡುಕುತ್ತಿದ್ದೇನೆ. ಪ್ರೀತಿಯೇ ಮುಖ್ಯ ಎಂಬ ಯೋಚನೆಯಲ್ಲಿ ಇರುವ, ಯಾವುದೇ ಬೇಡಿಕೆಗಳಿಲ್ಲದ, ನಮ್ಮ ಸಂಸ್ಕೃತಿಯ ಜತೆಗೂಡಿ ಸಾಗುವಂಥ ವಧು ಬೇಕಾಗಿದ್ದಾಳೆ. ಇಷ್ಟವಿದ್ದರೆ ಈ ಸಂಖ್ಯೆ ಸಂಪರ್ಕಿಸಿ’ ಎಂದು ಫ್ಲೆಕ್ಸ್ನಲ್ಲಿ ಬರೆದಿದ್ದಾನೆ.

ಹುಡುಗಿಯನ್ನು ಹುಡುಕಿ ಹುಡುಕಿ ಸಾಕಾದ ಮೇಲೆ ಈ ಪ್ಲ್ಯಾನ್ ಮಾಡಿದ್ದೇನೆ. ಫೋಟೋ ತೆಗೆಸಿ, ಡಿಸೈನ್ ಮಾಡಿಸಿ, ಅದರಲ್ಲೇ ವಾಟ್ಸಪ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಫ್ಲೆಕ್ಸ್ ಹಾಕಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿಬಿಟ್ಟಿದೆ, ನನಗೇ ಅಚ್ಚರಿಯಾಯಿತು. ಅನೇಕ ಮಂದಿ ಬಂದಿದ್ದಾರೆ. ವಿದೇಶದಿಂದಲೂ ಕೆಲವರು ಸಂಪರ್ಕಿಸಿದ್ದಾರೆ. ಆದರೆ ಈ ರೀತಿ ಸಂಪರ್ಕಕ್ಕೆ ಬಂದವರು ಯಾಕೋ ನನಗೆ ಸರಿ ಅನ್ನಿಸಲಿಲ್ಲ. ಜೀವನಪೂರ್ತಿ ಬಾಳಿ ಬದುಕಬೇಕಾದವರನ್ನು ಹುಡುಕುತ್ತಿರೋದಲ್ವಾ. ಆದ್ದರಿಂದ ಯೋಚನೆ ಮಾಡಿ ಮುಂದಿನ ಹೆಜ್ಜೆ ಇಡುತ್ತಿದ್ದೇನೆ ಎನ್ನುತ್ತಾನೆ ಅನೀಶ್.