ನಿಮ್ಮ ಖಾತೆಯಲ್ಲಿ 2 ಲಕ್ಷ ರೂ. ಜಮೆಯಾಗಿದ್ದರೆ ಓದಲೇಬೇಕಾದ ಸುದ್ದಿ

0
3506

ಮುಂಬಯಿ : ಈ ತನಕ ಎಂದೂ ತಮ್ಮ ಬ್ಯಾಂಕ್ ಖಾತೆಯಲ್ಲಿ ಎರಡು ಲಕ್ಷ ರೂ.ಗಳನ್ನು ಹೊಂದಿರದವರರು ಈಗಿನ್ನು ಅಷ್ಟು ಮೊತ್ತದ ಹಣವನ್ನು ತಮ್ಮ ಖಾತೆಯಲ್ಲಿ ಹೊಂದಿದ್ದರೆ ಅವರು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ.

ನೋಟು ನಿಷೇಧದ ಬಳಿಕ ಕಾಳಧನಿಕರು ತಮ್ಮಲ್ಲಿನ ಕಪ್ಪುಹಣವನ್ನು ಹೇಗಾದರೂ ಮಾಡಿ ಬಿಳಿ ಹಣವನ್ನಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಶತಾಯಗತಾಯ ಯತ್ನಿಸುತ್ತಿದ್ದು ಇದಕ್ಕಾಗಿ ಅಮಾಯಕ ಬ್ಯಾಂಕ್ ಖಾತೆಗಳನ್ನು ಬಳಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದರುವುದರಿಂದ ಆರ್ಬಿಐ, ಮೊದಲ ಮೂರು ವರ್ಗಗಳ ಮಹಾನಗರ, ನಗರ ಹಾಗೂ ಪಟ್ಟಣಗಳಲ್ಲಿನ ಬ್ಯಾಂಕುಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.

ಕೇಂದ್ರ ಸರಕಾರ ನೋಟು ಅಪನಗದೀಕರಣ ಗೈದ ನ.8ರ ಬಳಿಕದಲ್ಲಿ ಎರಡು ಲಕ್ಷ ರೂ. ಅಥವಾ ಹೆಚ್ಚಿನ ಹಣ ಜಮೆಯಾಗಿರುವ ಖಾತೆಗಳನ್ನು ಗುರುತಿಸಿ ವರದಿ ಮಾಡುವಂತೆ ಬ್ಯಾಂಕುಗಳಿಗೆ ಆರ್ಬಿಐ ಸೂಚಿಸಿದೆ. ಇಂತಹ ಖಾತೆಗಳ ಬಗ್ಗೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಇಂತಹ ಶಂಕಿತ ಖಾತೆಗಳ ವ್ಯವಹಾರವನ್ನು ಗುರಿ ಇರಿಸಿ ಕಪ್ಪು ಹಣದ ವಿರುದ್ಧ ಹೋರಾಡುವುದು ಸರಕಾರದ ಮುಂದಿನ ಕ್ರಮವಾಗಿದೆ ಎಂದು ವರದಿಯಾಗಿದೆ.

ಪ್ಯಾನ್ ಕಾರ್ಡ್ ವಿವರ ನೀಡುವ ಬದ್ಧತೆಯಿಂದ ತಪ್ಪಿಸಿಕೊಳ್ಳಲು ಒಂದು ಬಾರಿಗೆ 50,000 ರೂ.ಗಳಗಿಂತ ಕಡಿಮೆ ಪ್ರಮಾಣದ ಹಣವನ್ನು ಹಲವು ಬಾರಿ ನಿರ್ದಿಷ್ಟ ಖಾತೆಗಳಲ್ಲಿ ನಗದು ಹಣ ಜಮೆ ಮಾಡಿರುವುದು ಕಂಡು ಬಂದಿದ್ದು ಹೀಗೆ ಮಾಡುವ ಮೂಲಕ 2.50 ಲಕ್ಷ ರೂ. ಜಮೆಯಾಗಿರುವ ಖಾತೆಗಳನ್ನು ಗುರುತಿಸಿ ಅವುಗಳ ಬಗ್ಗೆ ವಿವರ ನೀಡುವಂತೆ ಆರ್ಬಿಐ ಬ್ಯಾಂಕುಗಳಿಗೆ ಸೂಚಿಸಿದೆ.

ಹಾಗಿದ್ದರೂ ಹಲವು ಶಂಕಿತ ಖಾತೆಗಳಲ್ಲಿ ಹಲವು ಬಾರಿ ಹಣ ಜಮೆ ಮಾಡಿ ಹಲವು ಬಾರಿ ಹಣ ಹಿಂಪಡೆದಿರುವ ಪ್ರಕರಣಗಳಿದ್ದು ಅವೆಲ್ಲವುಗಳನ್ನು ಗುರುತಿಸಿ ವರದಿ ಮಾಡುವುದು ಕಷ್ಟಕರ ಕೆಲಸವೆಂದು ಬ್ಯಾಂಕ್ ಅಧಿಕಾರಿಯೋರ್ವರು ಹೇಳಿದ್ದಾರೆ.

ನೋಟು ಅಮಾನ್ಯ ಕ್ರಮಕ್ಕೆ ಮುನ್ನ 500 ರೂ. ಮತ್ತು 1,000 ರೂ. ಮೌಲ್ಯದ 15.4 ಲಕ್ಷ ಕೋಟಿ ರೂ. ಮೌಲ್ಯದ ಕರೆನ್ಸಿ ನೋಟುಗಳು ಚಾಲ್ತಿಯಲ್ಲಿದ್ದವು. ಈಗ ಈ ಪೈಕಿ 12.44 ಲಕ್ಷ ಕೋಟಿ ರೂ. ಬ್ಯಾಂಕುಗಳಲ್ಲಿ ಜಮೆಯಾಗಿದೆ; ಎಂದರೆ ಅಮಾನ್ಯಗೊಂಡ ಮೌಲ್ಯದ ನೋಟುಗಳ ಶೇ.80ರಷ್ಟು ಮೌಲ್ಯದ ನೋಟುಗಳು ಸರಕಾರಕ್ಕೆ ಮರಳಿ ಬಂದಿವೆ.