ಭುಪಾಲ್ ಅನಿಲ ದುರಂತ ನಡೆದು 33 ವರ್ಷವಾದರೂ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.. ಸರ್ಕಾರಕ್ಕೆ ಸಾಮಾನ್ಯ ಜನರ ಜೀವಕ್ಕೆ ಬೆಲೆಯೇ ಇಲ್ಲವಾ??

0
1062

ಸಹಸ್ರ ಜನರ ಬಲಿ ಪಡೆದ ಕರಾಳ ನೆನೆಪು..!

ಅದು ಡಿಸೆಂಬರ್​ 2,1984. ದಿನ ಕಳೆದ ಎಲ್ಲರೂ ನೆಮ್ಮದಿಯಾಗಿ ನಿದ್ರಿಸುತ್ತಿದ್ದರು. ಮಧ್ಯರಾತ್ರಿ ಆಪತ್ತೊಂದು ಬಂದೆರುಗುತ್ತೆ ಅನ್ನೋ ಪರಿವೆಯೂ ಯಾರಿಗೂ ಇರಲಿಲ್ಲ. ಆದರೆ ಎಂದಿನಂತೆ ಅಂದು ಬೆಳಗಾಗಿರಲಿಲ್ಲ.. ಮುಂಜಾನೆಯ ಸೂರ್ಯನ ಕಿರಣ ಚುರು ಚುರು ಸುಡುತ್ತಿದ್ದ. ಎರಗಿಬರುತ್ತೆ ಎನ್ನುವ ಪರಿವೆಯೂ ಅವರಿಗೆ ಇರಲಿಲ್ಲ..ಮಲಗಿದ್ದ ಭೂಪಾಲ್ ಜನತೆ ಮೇಲೆ ಯಮನಂತೆ ಕಾಡಿದ್ದು ಯೂನಿಯನ್​ ಕಾರ್ಬೈಡ್​ ಕಾರ್ಖಾನೆಯ ವಿಷ ಅನಿಲ. ಕೇವಲ ಒಂದು ಅನಿಲ ಎಷ್ಟೋ ಜನರ ಜೀವವನ್ನು ಬಲಿತೆಗೆದುಕೊಂಡಿತ್ತು. ದೇಶದಲ್ಲಿ ಸಂಭವಿಸಿದ ದೊಡ್ಡ ದೊಡ್ಡ ದುರಂತಗಳ ಸಾಲಿಗೆ ಭೂಪಾಲ್ ತನ್ನ ಹೆಸರನ್ನು ಅಂದು ರಾತ್ರಿ ಲಗತ್ತಿಸುವಂತೆ ಮಾಡಿತ್ತು ದುರ್ವಿಧಿ.

40 ಟನ್​ಗೂ ಹೆಚ್ಚು ಅತ್ಯಂತ ವಿಷಕಾರಕ ಮಿಥೈಲ್ ಐಸೋಸೈನೆಟ್ ಅನಿಲ ಸೋರಿಕೆಯಾಗಿ ಘೋರ ದುರಂತ ಸಂಭವಿಸಿತ್ತು. ನೋಡನೋಡುತ್ತಿದ್ದಂತೆ ವಿಷಾನಿಲ ಹರಡುತ್ತಿದ್ದಂತೆ ಜನ ಸಾಮೂಹಿಕವಾಗಿ ಏಕಾಏಕಿ ಜೋರಾಗಿ ಕೆಮ್ಮತೊಡಗಿದರು. ಗಂಟಲೊಳಗೆ ಬೆಂಕಿ ಕೆಂಡ ತುರುಕಿದ ಉರಿ. ಕಣ್ಣೊಳಗೆ ನೂರು ಕೆಂಪು ಮೆಣಸಿನ ಕಾಯಿ ಅರೆದು ಕುಟ್ಟಿದ ಯಾತನೆ. ಒಂದೇ ಸಮನೆ ನೋವು, ಉರಿ ಎಂದು ಅರಚುತ್ತಾ ಮನೆಯ ಹೊರಗೋಡಿ ಬರುವಷ್ಟರಲ್ಲಿ ಉಸಿರುಗಟ್ಟಿ ಸತ್ತರು. ಮುದುಕರು ಹಾಸಿಗೆಯಲ್ಲೇ ಮಡಿದರು. ಗರ್ಭಿಣಿಯರಿಗೆ ಇದ್ದಲ್ಲಿಯೇ ಗರ್ಭಪಾತವಾಯಿತು. ಆಸ್ಪತ್ರೆಯಲ್ಲಿ ಹುಟ್ಟಿದ ನೂರಾರು ನವಜಾತ ಶಿಶುಗಳು ತೊಟ್ಟಿಲಲ್ಲೇ ಅಸು ನೀಗಿದವು.

ವಿಷಾನಿಲ ಯಾವ ಯಾವ ಮನೆಗೆ ಕಾಲಿಟ್ಟಿತೋ ಅಲ್ಲೆಲ್ಲ ಹೆಣಗಳು! ದಾರಿಯಲ್ಲಿ ಹೋಗುವವರು, ಬೀದಿಬದಿಯಲ್ಲಿ ಮಲಗಿದವರು, ಕಣ್ಣುಗಳನ್ನು ತೆರೆಯುವುದರೊಳಗೆ ಶಾಶ್ವತವಾಗಿ ಕಣ್ಮುಚ್ಚಿದ್ದರು. ಸಾವಿರಾರು ಮಂದಿ ದಿಕ್ಕಾಪಾಲಾಗಿ ಓಡಿದರು. ದಿಗ್ಭ್ರಮೆಯಲ್ಲಿ ಅನೇಕರಿಗೆ ಎತ್ತ ಕಡೆ ಓಡಬೇಕೆಂಬುದೇ ತಿಳಿಯಲಿಲ್ಲ. ಬಹುತೇಕರು ಅನಿಲ ಸೋರಿಕೆಯಾಗುತ್ತಿದ್ದ ಕಡೆಗೇ ಓಡತೊಡಗಿದರು.ಈ ಧಾವಂತದಲ್ಲಿ ಕಾಲ್ತುಳಿತಕ್ಕೊಳಗಾಗಿ ಸತ್ತರು, ಗಾಯಗೊಂಡರು. ಬೆಳಗ್ಗೆ ಹೊತ್ತಿಗೆ ಸುಮಾರು ಭೋಪಾಲದ ಸುಮಾರು ಸಾವಿರಾರು ಜನರು ಶವವಾಗಿದ್ದರು. ಕನಿಷ್ಠ ಒಂದು ಲಕ್ಷ ಜನರು ಅಸ್ವಸ್ಥರಾದರು. ವಿಷಾನಿಲ ಸೇವಿಸಿದವರಿಗೆಲ್ಲ ರಕ್ತವಾಂತಿಯಾಗಿ ರಸ್ತೆಗಳಲ್ಲೆಲ್ಲ ನೆತ್ತರು ಹರಿಯುತ್ತಿತ್ತಂತೆ! ಡ್ರೈನೇಜ್ ನಲ್ಲಿಯೂ ಕೆಂಪು ಬಣ್ಣ ಹರಡಿಕೊಂಡಿತ್ತಂತೆ. ಮರುದಿನ ಗಾಯಗೊಂಡವರಿಗೆ ವಿಷಾನಿಲ ಪರಿಣಾಮಕ್ಕೊಳಗಾದವರಿಗೆ ಚಿಕಿತ್ಸೆ ಕೊಡಲು ವೈದ್ಯರೇ ಇರಲಿಲ್ಲ.

ಏಕೆಂದರೆ ಅವರೂ ಬಲಿಯಾಗಿ ಹೋಗಿದ್ದರು! ಹೆಣ ಸಾಗಿಸುವವರು ಇರಲಿಲ್ಲ. ದಾರಿಯಲ್ಲೆಲ್ಲ ರಕ್ತ ಕಕ್ಕಿಕೊಂಡು ಬಿದ್ದಿದ್ದ ಶವಗಳ ರಾಶಿ! ಇವಿಷ್ಟು ಮೊದಲನೆಯ ದಿನದ ಪರಿಣಾಮ. ಅಲ್ಲಿಯ ಜನರು ಇಂದಿಗೂ ತಿಂಗಳಿಗೆ 5-10 ಜನರು ಸಾವಿನ ಬಾಗಿಲನ್ನು ಮುಟ್ಟುತ್ತಾರೆ. ಕಳೆದ ಇಪ್ಪತ್ತೈದು ವರ್ಷದಿಂದ ಅದೆಷ್ಟು ಜನ ಸತ್ತಿದ್ದಾರೋ ಆ ದೇವರಿಗೆ ಗೊತ್ತು. ಈಗಲೂ ಅಲ್ಲಿಯ ಜನರು ಅಸ್ತಮಾ, ಅಲರ್ಜಿ, ಶ್ವಾಸಕೋಶ, ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳಿಂದ ನರಳುತ್ತಿದ್ದಾರೆ. ಹುಟ್ಟುವ ಮಕ್ಕಳು ಅಂಗವಿಕಲರಾಗಿಯೋ, ಉಸಿರಾಟ ಸಂಬಂಧಿ ಕಾಯಿಲೆಗಳೊಂದಿಗೋ ಹುಟ್ಟುತ್ತಿದ್ದಾರೆ!

ಭೂಪಾಲ್ ಅನಿಲ ದುರಂತ, ಇಂದಿಗೂ ಅಲ್ಲಿನ ಜನರ ಹಾಗೂ ಇಡೀ ದೇಶದ ಜನರ ಎದೆ ಝಲ್ ಎನಿಸುವಂತಹ ಭೀಕರವಾದ ದುರಂತ. ಭೂಪಾಲ್ ದುರಂತ ಸಂಭವಿಸಿ ಮೂರು ದಶಕಗಳೇ ಕಳೆದಿವೆ. ಇಂದಿಗೆ ಸರಿಯಾಗಿ 33 ವರ್ಷಗಳ ಹಿಂದೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ನಡೆದ ಅಂದಿನ ಅನಿಲ ದುರಂತದ ಕರಿಛಾಯೆ ಇಂದಿಗೂ ಹಾಗೇ ಉಳಿದಿದೆ. ಭೋಪಾಲ್​ ಅನಿಲ ದುರಂತಕ್ಕೆ ಒಡ್ಡಿಕೊಂಡ ಪೋಷಕರಿಗೆ ಹುಟ್ಟುವ 10 ಸಾವಿರ ಮಕ್ಕಳಲ್ಲಿ 2,500 ಮಕ್ಕಳು ಅಡ್ಡಪರಿಣಾಮ ಎದುರಿಸುತ್ತಿದ್ದಾರೆ. ಅನಿಲ ದುರಂತದ ಪೀಡಿತರಿಗೆ ಚಿಕಿತ್ಸೆ ನೀಡಲು ತೆರೆದಿರುವ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ನು ಈ ದುರಂತಕ್ಕೆ ಕಾರಣರಾದವರನ್ನು ನ್ಯಾಯಾಲಯ ಹಲವು ವರ್ಷಗಳ ವಿಚಾರಣೆ ಬಳಿಕ ಅಪರಾಧಿ ಎಂದು ಘೋಷಿಸಿತ್ತು  ಅಷ್ಟೇ..ಆದ್ರೆ ಇನ್ನೂ ಈ ದುರಂತದಲ್ಲಿ ಸಾವನ್ನಪ್ಪಿದವರಿಗೆ ಮಾತ್ರ ನ್ಯಾಯ ದೊರಕಲೇ ಇಲ್ಲ.