ಮುಗಿಲು ಮುಟ್ಟಿದ ಕುಟುಂಬದವರ ರೋದನ…

0
770

ನೇಣಿಗೆ ಶರಣಾದ ಡಿವೈಎಸ್‍ಪಿ ಗಣಪತಿ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಮಡಿಕೇರಿ ಬಳಿಯ ಸ್ವಗ್ರಾಮ ರಂಗಸಮುದ್ರದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಪತ್ನಿ ಪಾವನಾ ಹಾಗೂ ಕುಟುಂಬ ಸದಸ್ಯರ ರೋದನೆ ಮುಗಿಲು ಮುಟ್ಟಿದೆ.ಶವ ಪರೀಕ್ಷೆ ನಡೆಸುತ್ತಿದ್ದ ಆಸ್ಪತ್ರೆ ಬಳಿ ನೂರಾರು ಮಂದಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.ಇದರ ನಡುವೆಅಸಹಜ ಸಾವು ಪ್ರಕರಣವನ್ನಾಗಿ ದಾಖಲು ಮಾಡಿಕೊಳ್ಳಲಾಗಿದ್ದು, ಇಂದು ಬೆಳಗ್ಗೆ ಸ್ವತಃ ಡಿಜಿಪಿ ಓಂ ಪ್ರಕಾಶ್ ಅವರೇ ಈ ಸಂಬಂಧ ಪ್ರಾಥಮಿಕ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಿದ್ದಾರೆ.

ಕುಟುಂಬದವರಿಗೆ ದಿಗ್ಭ್ರಾಂತಿ: ಪತ್ನಿ ಪಾವನಾ

ತಮ್ಮ ಪತಿ ಪೊಲೀಸ್ ಇಲಾಖೆ ವಿಚಾರವಾಗಿ ಹೇಳಿಕೊಂಡಿರುವ ವಿಷಯ ಸತ್ಯವಾದದ್ದು. ಹಿರಿಯ ಅಧಿಕಾರಿಗಳಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದರು. ಅದನ್ನು ನನ್ನ ಬಳಿಯೂ ಹೇಳಿದ್ದರು ಎಂದು ಆತ್ಮಹತ್ಯೆಗೆ ಶರಣಾದ ಡಿವೈಎಸ್‍ಪಿ ಗಣಪತಿ ಪತ್ನಿ ಪಾವನಾ ತಿಳಿಸಿದ್ದಾರೆ. ನನ್ನ ಜತೆಯಲ್ಲೂ ಸಾಕಷ್ಟು ಬಾರಿ ಈ ಬಗ್ಗೆ ಹೇಳಿಕೊಂಡಿದ್ದರು. ಖಿನ್ನತೆಯಿಂದ ಅವರು ಆತ್ಮಹತ್ಯೆಗೆ ಶರಣಾಗಿಲ್ಲ. ನಮಗೆ ಧೈರ್ಯ ಹೇಳುತ್ತಿದ್ದ ಅವರು ಈ ರೀತಿ ಮಾಡಿಕೊಂಡಿರುವುದರಿಂದ ಕುಟುಂಬವರ್ಗಕ್ಕೆ ದಿಗ್ಭ್ರಾಂತಿಯಾಗಿದೆ ಎಂದರು. ನಮ್ಮಲ್ಲಿ ಯಾವುದೇ ರೀತಿಯ ಕೌಟುಂಬಿಕ ಕಲಹವೂ ಸಹ ಇರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಗಣಪತಿ ಸಹೋದರ ತಮ್ಮಯ್ಯ ನೀಡಿರುವ ಹೇಳಿಕೆಯನ್ನು ತಳ್ಳಿ ಹಾಕಿದರು.
ಆತ್ಮಹತ್ಯೆ ದಾರಿತುಳಿಯದಿರಿ, ನಿಮ್ಮ ಸಮಸ್ಯೆಗೆ ಸ್ಪಂದಿಸಲು ಸಿದ್ದ : ಪರಮೇಶ್ವರ್

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲಾಗುವುದು,ಯಾವುದೇ ಕಾರಣಕ್ಕೂ ಅಧಿಕಾರಿಗಳು ಆತ್ಮಹತ್ಯೆಯ ದಾರಿ ತುಳಿಯಬೇಡಿ. ನಿಮ್ಮ ಸಮಸ್ಯೆಗೆ ಸ್ಪಂದಿಸಲು ನಾನಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಯ ನೀಡಿದ್ದಾರೆ. ಗಣಪತಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಪರಮೇಶ್ವರ್ ಚರ್ಚೆ ನಡೆಸಿದರು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ದುರ್ದೈವದ ಸಂಗತಿ. ಇದು ಒಳ್ಳೆಯ ಬೆಳವಣಿಗೆಯಲ್ಲ. ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ನಿಮ್ಮೊಂದಿಗೆ ನಾನಿದ್ದೇನೆ. ಯಾವುದೇ ಸಮಸ್ಯೆ ಇದ್ದರೂ ನನಗೆ ತಿಳಿಸಿ, ನಾನು ಅದಕ್ಕೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಗಣಪತಿಯವರ ಆರೋಪಗಳಿಗೆ ಅವರ ಹೇಳಿಕೆಯೊಂದನ್ನು ಬಿಟ್ಟು ಬೇರೆ ಆಧಾರಗಳಿಲ್ಲ. ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಸಿಐಡಿ ತನಿಖೆ ನಡೆಸಲಾಗುವುದು. ಅವರಿಗೆ ಇಲಾಖೆಯಿಂದ ಕಿರುಕುಳು ಆಗುತ್ತಿತ್ತೆ, ಮಾನಸಿಕ ಖಿನ್ನತೆ ಇತ್ತೆ ಅಥವಾ ಕೌಟುಂಬಿಕ ಸಮಸ್ಯೆಗಳು ಇದ್ದವೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಗಣಪತಿ ಅವರು ಹಿರಿಯ ಅಧಿಕಾರಿಗಳು ಹಾಗೂ ಸಚಿವರೊಬ್ಬರ ಹೆಸರನ್ನು ಮಾಧ್ಯಮದ ಮುಂದೆ ಹೇಳಿದ್ದಾರೆ. ಆದರೆ, ಆ ಹೇಳಿಕೆಯನ್ನು ಹೊರತು ಪಡಿಸಿ ಅವರ ಆರೋಪಗಳನ್ನು ದೃಢೀಕರಿಸುವಂತಹ ಯಾವುದೇ ಆಧಾರಗಳಿಲ್ಲ. ಆದರೂ ಸಿಐಡಿ ತನಿಖೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಇಲಾಖೆ ಅಧಿಕಾರಿಗಳ ಮೇಲೆ ಕಾರ್ಯ ಒತ್ತಡ ಹೆಚ್ಚಾಗಿದೆ. ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ ಎಂಬ ಆರೋಪಗಳಿವೆ. ಅಧಿಕಾರಿಗಳ ಒತ್ತಡ ನಿವಾರಣೆಗಾಗಿ ಮಾನಸಿಕ ರೋಗ ತಜ್ಞರ ನಿಯೋಜನೆ ಅಗತ್ಯವಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುವುದು. ಏನೇ ಆದರೂ ಎಂತಹದ್ದೇ ಸಂದರ್ಭ ಬಂದರೂ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಯಂತಹ ಹಾದಿ ತುಳಿಯಬೇಡಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಪರಮೇಶ್ವರ್ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು.

ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣ : ಸಚಿವ ಕೆ.ಜೆ.ಜಾರ್ಜ್ ತಲೆದಂಡ ಖಚಿತ

ರಾಜ್ಯ ಸರ್ಕಾರಕ್ಕೆ ಭಾರೀ ಕಗ್ಗಂಟಾಗಿ ಪರಿಣಮಿಸಿರುವ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ತಲೆದಂಡವಾಗುವುದು ಬಹುತೇಕ ಖಚಿತವಾಗಿದೆ.
ಆತ್ಮಹತ್ಯೆಗೂ ಮುನ್ನ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದ ಎಂ.ಕೆ.ಗಣಪತಿ ಕೆ.ಜೆ.ಜಾರ್ಜ್ ಹೆಸರನ್ನು ಉಲ್ಲೇಖ ಮಾಡಿದ್ದರಲ್ಲದೆ ಡೆತ್‍ನೋಟ್‍ನಲ್ಲೂ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ನನ್ನ ಸಾವಿಗೆ ಹಿಂದಿನ ಗೃಹ ಸಚಿವ ಕೆ.ಜೆ.ಜಾರ್ಜ್, ಗುಪ್ತದಳದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಂತಿ ನೇರ ಕಾರಣ ಎಂದು ಡೆತ್ ನೋಟ್‍ನಲ್ಲಿ ಬರೆದಿಟ್ಟಿದ್ದಾರೆ. ಇದೀಗ ಈ ಪ್ರಕರಣ ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಚಿವ ಜಾರ್ಜ್ ತಲೆದಂಡಕ್ಕೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದಿವೆ.
ಸೋಮವಾರದಿಂದ ಮುಂದುವರೆದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. ಖಾಸಗಿ ಸುದ್ದಿ ವಾಹಿನಿ ಮತ್ತು ಡೆತ್‍ನೋಟ್‍ನಲ್ಲಿ ಜಾರ್ಜ್ ಹೆಸರು ಉಲ್ಲೇಖ ಮಾಡಿರುವುದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಕಲಾಪ ಹಳ್ಳ ಹಿಡಿಯುವ ಸಾಧ್ಯತೆಗಳೇ ಹೆಚ್ಚಳವಾಗಿದೆ.

ಡೆತ್‍ನೋಟ್‍ನಲ್ಲಿ ಏನಿದೆ:
ಮಡಿಕೇರಿಯ ವಿನಾಯಕ ಲಾಡ್ಜ್‍ನ ಕೊಠಡಿ ಸಂಖ್ಯೆಯ 305ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‍ನೋಟ್‍ನಲ್ಲಿ ಕೆಲವು ಆಘಾತಕಾರಿ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮಂಗಳೂರಿನ ಚರ್ಚ್ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಪ್ರಮುಖ ಸಂಘಟನೆಗಳ ಮುಖಂಡರ ಹೆಸರುಗಳನ್ನು ಸೇರ್ಪಡೆ ಮಾಡುವಂತೆ ನನಗೆ ಅಂದಿನ ಗೃಹಸಚಿವರಾದ ಕೆ.ಜೆ.ಜಾರ್ಜ್ ಒತ್ತಡ ಹಾಕಿದ್ದರು. ನಾನು ಇದನ್ನು ವಿರೋಧಿಸಿದ್ದಕ್ಕೆ ನನಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಕಿರುಕುಳ ನೀಡಲಾಗಿತ್ತೆಂದು ಉಲ್ಲೇಖ ಮಾಡಿದ್ದಾರೆ. ಈಗ ಇದನ್ನೇ ಅಸ್ತ್ರ ಮಾಡಿಕೊಂಡಿರುವ ಪ್ರತಿಪಕ್ಷ ಬಿಜೆಪಿ ಬೆಂಗಳೂರು ನಗರಾಭಿವೃದ್ದಿ ಸಚಿವರಾಗಿರುವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಒತ್ತಡ ಹಾಕಿದೆ. ಅವರು ಗೃಹ ಸಚಿವರಾಗಿದ್ದ ವೇಳೆಯೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಚರ್ಚ್ ಮೇಲೆ ದಾಳಿ ನಡೆದಿತ್ತು. ಇಲಾಖೆಯಲ್ಲಿ ಹಸ್ತಕ್ಷೇಪ ನಡೆಸಿ ಅಧಿಕಾರಿಗಳ ಮೇಲೆ ಒತ್ತಡ ಹಾಕುವುದು ಇಲ್ಲದಿದ್ದರೆ ತನಿಖಾಧಿಕಾರಿಗಳಿಗೆ ಒಂದಿಲ್ಲೊಂದು ಕಿರುಕುಳ ನೀಡುವುದು ಸರ್ವೇ ಸಾಮಾನ್ಯವಾಗಿತ್ತೆಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒತ್ತಡದಲ್ಲಿ ಸಿಎಂ:
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಹೆಸರು ಕೇಳಿಬಂದಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡಕ್ಕೆ ಸಿಲುಕಿದ್ದಾರೆ. ನೇರವಾಗಿ ಅವರಿಂದ ರಾಜೀನಾಮೆ ಕೇಳುವ ಪರಿಸ್ಥಿತಿಯಲ್ಲೂ ಅವರಿಲ್ಲ. ಏಕೆಂದರೆ ಹೈಕಮಾಂಡ್ ಮಟ್ಟದಲ್ಲಿ ಜಾರ್ಜ್ ಸಾಕಷ್ಟು ಪ್ರಭಾವಿ ನಾಯಕ. ಒಂದು ವೇಳೆ ಜಾರ್ಜ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರೆ ಅಧಿಕಾರಿಯೊಬ್ಬರ ಸಾವಿಗೆ ಸರ್ಕಾರವೇ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಇದು ಸರ್ಕಾರದ ಮೇಲೂ ಪರಿಣಾಮ ಬೀರುವುದರ ಜೊತೆಗೆ ವಿಪಕ್ಷಗಳ ಟೀಕೆಗೆ ಮತ್ತೊಂದು ಅಸ್ತ್ರ ನೀಡಿದಂತಾಗುತ್ತದೆ. ಜಾರ್ಜ್ ರಾಜೀನಾಮೆ ನೀಡದಿದ್ದರೆ ಅಧಿವೇಶನ ನಡೆಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸುತ್ತದೆ. ಈಗಾಗಲೇ ಡಿವೈಎಸ್ಪಿಗಳಾದ ಅನುಪಮಾ ಶೆಣೈ ರಾಜೀನಾಮೆ, ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ಸರ್ಕಾರ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಜಾರ್ಜ್ ರಾಜೀನಾಮೆ ನೀಡಿದರೂ ಕಷ್ಟ , ನೀಡದಿದ್ದರೂ ಕಷ್ಟ . ಅಡಕತ್ತರಿಯಲ್ಲಿ ಸಿಲುಕಿರುವ ಸರ್ಕಾರ ದಿಕ್ಕು ತೋಚದ ನಾವಿಕನಂತಾಗಿದೆ

Source : esanje