ಹೌದು, ಹುಬ್ಬಳ್ಳಿ-ಬೆಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಹಾರಾಟ ಆ
ರಂಭಿಸಿದ್ದು, ಬುಧವಾರ ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮೊದಲ ಹಾರಾಟ ನಡೆಸಿತು. ಏರ್ ಇಂಡಿಯಾ ವಿಮಾನಯಾನ ಆರಂಭವಾಗಬೇಕೆಂಬ ಹುಬ್ಬಳ್ಳಿ ಜನರ ಕನಸು ಅಂತೂ ಬುಧವಾರ ನನಸಾಯಿತು. ಈಗಾಗಲೇ ಏರ್ ಪೆಗಾಸಿಸ್ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಬೆಂಗಳೂರು-ಹುಬ್ಬಳ್ಳಿ ನಡುವೆ ಹಾರಾಟ ನಡೆಸುತ್ತಿದ್ದು, ಏರ್ ಇಂಡಿಯಾ ವಿಮಾನ ಯಾನ ಆರಂಭದೊಂದಿಗೆ ವಾರದಲ್ಲಿ ಮೂರು ದಿನ ಬೆಂಗಳೂರಿಗೆ ಮೂರು ವಿಮಾನಗಳು ಹಾರಾಡಲಿವೆ.
ಉಭಯ ನಗರಗಳ ನಡುವಿನ ಸಂಚಾರಕ್ಕೆ ಏರ್ ಇಂಡಿಯಾ 1,902 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ.ಸಂಜೆ 5.05ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಟಿಆರ್ 42 ವಿಮಾನ, ಸಂಜೆ 5.25ಕ್ಕೆ ನಿರ್ಗಮಿಸಬೇಕಿತ್ತು. ಆದರೆ, ಮೊದಲ ದಿನದ ಹಾರಾಟ ಆಗಿದ್ದರ ಪರಿಣಾಮ ನಿರ್ಗಮನದ ವೇಳೆಯನ್ನು ಸಂಜೆ 6.25ಕ್ಕೆ ಬದಲಿಸಲಾಗಿತ್ತು. ಅದೇ ಸಮಯಕ್ಕೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹಾರಿತು. ಇದಕ್ಕೂ ಮುನ್ನ ಮೊದಲ ಬಾರಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನಕ್ಕೆ ಸಂಪ್ರದಾಯದಂತೆ ಅಗ್ನಿಶಾಮಕ ದಳದಿಂದ ನೀರಿನ ಫಿರಂಗಿ ಸೆಲ್ಯೂಟ್ ನೀಡಲಾಯಿತು.
ಇದೇ ಸಂದರ್ಭದಲ್ಲಿ ಏರ್ ಇಂಡಿಯಾ ಸಿಬ್ಬಂದಿಯನ್ನು ಹೂಗುಚ್ಛ ನೀಡಿ ಸ್ವಾಗತಿಸಿದ ವಿಮಾನ ನಿಲ್ದಾಣ ನಿರ್ದೇಶಕ ಶಿವಾನಂದ ಬೇನಾಳ, ಏರ್ ಇಂಡಿಯಾ ವಿಮಾನಯಾನ ಆರಂಭಿಸುವ ಮೂಲಕ ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಬೆಂಗಳೂರಿಗೆ ತೆರಳಲು ಮತ್ತೊಂದು ವಿಮಾನ ದೊರೆತಂತಾಗಿದೆ. ಮೊದಲ ದಿನ ಬೆಂಗಳೂರಿನಿಂದ 39 ಪ್ರಯಾಣಿಕರು ಹುಬ್ಬಳ್ಳಿಗೆ ಆಗಮಿಸಿದರೆ, ಹುಬ್ಬಳ್ಳಿಯಿಂದ 42 ಜನ ಬೆಂಗಳೂರಿಗೆ ಪ್ರಯಾಣಿಸಿದರು. ವಾರದಲ್ಲಿ ಮೂರು ದಿನ ಎರಡೂ ನಗರಗಳ ನಡುವೆ ಏರ್ ಇಂಡಿಯಾ ವಿಮಾನ ಸಂಚರಿಸಲಿದೆ.
ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನ ಯಾನ ಆರಂಭಿಸುವ ಕುರಿತು ಏರ್ ಇಂಡಿಯಾ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ವೇಳಾಪಟ್ಟಿ : ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಂಗಳೂರಿನಿಂದ ಮಧ್ಯಾಹ್ನ 3.45ಕ್ಕೆ ಹೊರಡಲಿರುವ ವಿಮಾನ ಸಂಜೆ 5.05ಕ್ಕೆ ಹುಬ್ಬಳ್ಳಿಗೆ ಆಗಮಿಸುವುದು. ಏರ್ ಇಂಡಿಯಾ ಪ್ರತ್ಯೇಕ ಟಿಕೆಟ್ ಕೌಂಟರ್ನ್ನೂ ತೆರೆಯಲಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದ ಪ್ರಯಾಣಿಕ ಸುರೇಶ ಕಡೇಮನಿ ಮಾತನಾಡಿ, ವಿಮಾನ ಸೇವೆ ಚೆನ್ನಾಗಿದ್ದು, ಹುಬ್ಬಳ್ಳಿಗೆ ವಿಮಾನ ಹಾರಾಟ ಆರಂಭಿಸಿರುವುದು ಸಂತಸದ ವಿಷಯ. ಏರ್ ಇಂಡಿಯಾ ಸಿಬ್ಬಂದಿಯ ಸೌಜನ್ಯ ಹಾಗೂ ಸೇವಾ ಮನೋಭಾವ ಖುಷಿ ತಂದಿತು ಎಂದು ಹೇಳಿದರು.
ವಿಮಾನ ಅಪಘಾತ ಸಂಭವಿಸಿತ್ತು : ಮೊದಲು ಸ್ಪೈಸ್ಜೆಟ್ ಹುಬ್ಬಳ್ಳಿಗೆ ವಿಮಾನಯಾನ ಸೇವೆ ನೀಡುತ್ತಿತ್ತು. 2015ರ ಮಾ.8ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಅಪಘಾತ ಸಂಭವಿಸಿತ್ತು. ಇದರಿಂದಾಗಿ ಸ್ಪೈಸ್ ಜೆಟ್ ವಿಮಾನ ಸೇವೆ ಸ್ಥಗಿತಗೊಂಡಿತ್ತು.