ಅಪರೂಪದ ಅಂಬಲಪಾಡಿ ಪುಣ್ಯಕ್ಷೇತ್ರದ ಬಗ್ಗೆ ತಿಳಿದ್ರೆ ಉಡುಪಿಗೆ ಹೋದವ್ರು ಅದರ ದರ್ಶನ ಮಾಡ್ದೆ ವಾಪಸ್ ಬರಲ್ಲ..

0
2206

ಮಹಾವಿಷ್ಣು, ಮಹಾಕಾಳಿಯರು ಒಂದೆಡೆ ನೆಲೆಸಿರುವ ಅಪರೂಪದ ಪುಣ್ಯಕ್ಷೇತ್ರವೇ ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಾಲಯ.

ತಂಪಾದ ತೆಂಗಿನಮರಗಿಡಗಳ ಮಧ್ಯೆ ತಾಯಿ ಮಹಾಕಾಳಿಯನ್ನು ಆರಾಧಿಸುತ್ತಿದ್ದ ಸ್ಥಳವೇ ಅಮ್ಮನ ಆವಾಸಸ್ಥಾನವಾಯಿತು. ಇದೆ ಮಹಾಕಾಳಿ ಗುಡಿಯ ಸಮೀಪದ ನಿಡಂಬೂರು ಬೀಡು ಎಂಬ ಅರಮನೆಯಲ್ಲಿ ಎಂಟು ಗ್ರಾಮಗಳ ಕೂಟವಾದ ನಿಡಂಬೂರು ಸಂಸ್ಥಾನವನ್ನು ಆಳುತ್ತಿದ್ದ ಬಂಗವಂಶದ ಜೈನರು ಈ ತಾಯಿಯ ಕ್ಷೇತ್ರವನ್ನು ಅಂಬಲಪಾಡಿ ಎಂದು ಕರೆದರೂ. ಬಂಗವಂಶದ ಕೊನೆಯ ರಾಜ ಜೈನ ದೀಕ್ಷೆಯನ್ನು ತೊಟ್ಟ ನಂತರ ಸರ್ವಸ್ವವನ್ನು ತನ್ನ ವಂಶಕ್ಕೆ ಉಪಕಾರ ಮಾಡಿದ ಕಂದಾವರ ಉಡುಪ ಕುಟುಂಬಕ್ಕೆ ಕೊಟ್ಟನು. ನಂತರ ಉಡುಪರು ಬಲ್ಲಾಳರಾಗಿ ಇದೆ ಉಡುಪ ಕುಲದ ಹಿರಿಯ ಶ್ರೀಧರ ನಿಡಂಬೂರಾಯರು ತಮ್ಮ ಪೂರ್ವಜರು ಆರಾಧಿಸುತ್ತಿದ್ದ ಶ್ರೀ ಜನಾರ್ಧನ ವಿಗ್ರಹವನ್ನು ಮಹಾಕಾಳಿಯ ಗುಡಿಯ ಬಳಿ ಸ್ಥಾಪಿಸಿ ವಿಷ್ಣುವಿನ ಮೂಲಕ ವಿಷ್ಣುಮಾಯೆಯನ್ನು ಜೊತೆಯಾಗಿ ಆರಾಧಿಸಿದರು. ಮುಂದೆ ಜನಮನದಲ್ಲೂ ಶ್ರೀ ಜನಾರ್ಧನ ಸಹಿತ ಮಹಾಕಾಳಿಯ ಅಪರೂಪದ ಆರಾಧನಾ ಪದ್ದತಿಯು ಬೆಳೆದು ಬಂತು.

ಚೋಳಕಾಲದ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಿರುವ ಶ್ರೀ ಜನಾರ್ಧನ ಸ್ವಾಮಿಯ ದೇಗುಲವು ಬಹುತೇಕ ಕಂಬಗಳ ಮೇಲೆಯೇ ನಿಂತಿದೆ.ಶಂಖ ಚಕ್ರ ಗಾಢಾಧಾರಿ ಶ್ರೀ ಜನಾರ್ಧನ ಸ್ವಾಮಿಯ ವಿಗ್ರಹವು ಅತಿ ಸುಂದರವಾಗಿದೆ. ಇಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಗಳ ಮಾದರಿಯ ಹೆಂಚು, ಗರ್ಭಗುಡಿ, ತೀರ್ಥಮಂಟಪ, ಪ್ರದಕ್ಷಿಣಾ ಪಥ, ದೊಡ್ಡ ಬಲಿಕಲ್ಲು, ಧ್ವಜ ಕಂಬ, ವಿಸ್ತಾರವಾದ ಹೊರ ಪ್ರಾಂಗಣ, ಮುಖ ಮಂಟಪ ಹಾಗು ಗೋಪುರಗಳಿವೆ.

ಮಾಘ ಶುದ್ಧ ದ್ವಾದಶಿಯಿಂದ ಪಂಚಮಿಯ ದಿನಗಳಲ್ಲಿ ಉತ್ಸವಗಳು ನಡೆದು ಬಹುಳ ತದಿಗೆಯಂದು ರಥೋತ್ಸವವು ನಡೆಯುತ್ತದೆ. ಮಹಾಕಾಳಿಯ ವಿಗ್ರಹವಂತೂ ದುಸ್ತರನ್ನು ಶಿಕ್ಷಿಸುವ, ಶಿಷ್ಟರಿಗೆ ಅಭಯಹಸ್ತ ನೀಡುವಂತೆ ಭಾಸವಾಗುತ್ತದೆ. ಅಂಬಲಪಾಡಿಯ ಮಹಾಕಾಳಿಯು ಪಶ್ಚಿಮಕ್ಕೆ ತಿರುಗಿ ನಿಂತಿರುವುದು ವಿಶೇಷವಾಗಿದೆ. ಶಂಖ,ಚಕ್ರ,ಖಡ್ಗ,ಪಾನಪಾತ್ರೆ ಹಿಡಿದು ರಾಕ್ಷಸರ ರುಂಡ ಮಾಲೆ ಧರಿಸಿ ನೆತ್ತರಿಗೆ ನಾಲಿಗೆ ಚಾಚಿ ನಿಂತಿರುವ ಆಳೆತ್ತರದ ಭಂಗಿಯು ಅತ್ಯಂತ ಮನೋಜ್ಞವಾಗಿದೆ.

ಇಲ್ಲಿಯ ಜನಾರ್ಧನ ದೇಗುಲದ ತೀರ್ಥ ಮಂಟಪದ ಕಂಬಗಳು ಹನುಮಂತ,ಗಣಪತಿ,ನಾಗದೇವತೆಗಳ ಸುಂದರ ಕೆತ್ತನೆಯಿಂದ ಅಲಂಕೃತಗೊಂಡಿವೆ.ಇನ್ನು ಮಹಾಕಾಳಿಯ ಗರ್ಭಗುಡಿಯ ಇಕ್ಕೆಲಗಳಲ್ಲಿ ದೇವಿಯ ವಿವಿಧ ಅವತಾರಗಳಾದ ಶ್ರೀ ದುರ್ಗಾ,ಶ್ರೀ ಆರ್ಯ ದುರ್ಗಾ, ಮಹಿಷಾಸುರ ಮರ್ಧಿನಿ ಯಾ ಶಿಲೆಗಳನ್ನು ಕಾಣಬಹುದು. ನವಗ್ರಹ ಗುಡಿ ಮತ್ತು ನವಗ್ರಹ ವೃಕ್ಷವನವು ಇಲ್ಲಿದೆ. ಪ್ರತಿ ಶುಕ್ರವಾರ ಸಾರ್ವಜನಿಕ ಭೋಜನ ಪ್ರಸಾದದ ವ್ಯವಸ್ಥೆ ಇದ್ದು ಸುಮಾರು ಎರಡು ಸಾವಿರ ಶಾಲಾ ಮಕ್ಕಳಿಗೆ ಭೋಜನ ನೀಡಲಾಗುತ್ತದೆ.

ಉಡುಪಿಯ ಶ್ರೀ ಕೃಷ್ಣಮಠದಿಂದ ಕೇವಲ ೨ ಕಿಮೀ ದೂರದಲ್ಲಿರುವ ಈ ಸನ್ನಿಧಿಯು ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ಅರ್ಧ ಕಿಮೀ ದೂರದಲ್ಲಿದೆ. ದೇಗುಲವು ನಿತ್ಯ ಬೆಳಿಗ್ಗೆ ೫ರಿಂದ ಮಧ್ಯಾಹ್ನ ೧೨.೩೦ ಮತ್ತು ೩ರಿಂದ ರಾತ್ರಿ ೮ ರ ವರೆಗೂ ತೆರೆದಿರುತ್ತದೆ.