ಭರತ ಖಂಡದಲ್ಲೇ ಕೃಷ್ಣನ ಬಾಲ ಲೀಲೆಯನ್ನ ಹೋಲುವಂತಹ ವಿಗ್ರಹ ಇರುವ ಏಕೈಕ ದೇವಾಲಯ

0
4464

Kannada News | Karnataka Temple History

ರಾಮನಗರ ಜಿಲ್ಲೆಯ ಬೊಂಬೆನಗರಿ ಚನ್ನಪಟ್ಟಣದ ಮಳೂರು ಗ್ರಾಮದಲ್ಲಿರುವ ಅಂಬೆಗಾಲು ಕೃಷ್ಣನ ದೇವಾಲಯ ಸಾಕಷ್ಟು ಮಹತ್ವ ಹೊಂದಿರುವ ದೇಗುಲ. ಇಡೀ ಭರತ ಖಂಡದಲ್ಲಿ ಕೃಷ್ಣನ ಬಾಲ ಲೀಲೆಯನ್ನ ಹೋಲುವಂತಹ ವಿಗ್ರಹ ಇರುವುದು ಇಲ್ಲಿ ಮಾತ್ರ. ಊರಿನ ತುಂಬಾ ಮರಳು ಇದ್ದುದರಿಂದ ಮರಳೂರು ಎಂದು ಈ ಗ್ರಾಮವನ್ನ ಕರೆಯಲಾಗುತ್ತಿತ್ತು. ಕಾಲಘಟ್ಟದಲ್ಲಿ ಮಳೂರು ಎಂದಾಯಿತು.

ವಿಷ್ಣು ಸಹಸ್ರನಾಮದಲ್ಲಿ ಬರುವಂತೆ ಅಪ್ರಮೇಯಸ್ವಾಮಿ ದೇಗುಲವೂ ಇಲ್ಲೇ ಇದೆ. 4ನೇ ಶತಮಾನದಲ್ಲಿ ಮಳೂರಿನಲ್ಲಿ ದೇಗುಲ ನಿರ್ಮಾಣ ಮಾಡಲಾಗಿದೆ ಎಂದು ಗರ್ಭಗುಡಿಯಲ್ಲಿ ಇರುವ ಶಾಸನದಲ್ಲಿದೆ. ಅಗಣಿತ ಗುಣವನ್ನ ಹೊಂದಿರುವವನೇ ವಿಷ್ಣುದೇವ. ಆದ್ದರಿಂದ ವಿಷ್ಣು ಸಹಸ್ರನಾಮದಲ್ಲಿ ಬರುವಂತೆ ಅಪ್ರಮೇಯ ಎಂದು ಖ್ಯಾತಿಗೊಂಡಿದೆ. ಇದೇ ದೇಗುಲದಲ್ಲಿ ಸಾಕಷ್ಟು ಮಹತ್ವವನ್ನ ಪಡೆದಿರುವ ಅಂಬೆಗಾಲು ಕೃಷ್ಣನ ಮೂಲ ಮೂರ್ತಿ ಇದೆ. ಬಲಗೈಯಲ್ಲಿ ಬೆಣ್ಣೆ, ಅಂಬೆಗಾಲನ್ನಿಟ್ಟುಕೊಂಡಿರುವ ಬಾಲಕೃಷ್ಣನ ವಿಗ್ರಹ ನೋಡುತ್ತಿದ್ದರೆ ಒಂದು ರೀತಿ ಮನಸ್ಸಿಗೆ ಆಹ್ಲಾದ ಉಂಟಾಗುತ್ತದೆ.

doddamallur_krishna

ಪುರಾಣದ ಕಥೆ

ಅಂಬೆಗಾಲು ಕೃಷ್ಣನ ಮೂರ್ತಿಯನ್ನ ಕಣ್ವ ಮಹರ್ಷಿಗಳು ತಪಸ್ಸು ಮಾಡಿ ಪ್ರತಿಷ್ಠಾಪಿಸಿದ್ದಾರೆಂಬ ಪುರಾಣದ ಕಥೆ ಇದೆ. ಪುರಂದರದಾಸರು ಇದೇ ಅಂಬೆಗಾಲು ಕೃಷ್ಣನನ್ನ ನೋಡಿ ‘ಆಡಿಸಿದಳು ಯಶೋಧೆ ಜಗದೋದ್ಧಾರನ’ ಎಂದು ಹಾಡಿ ಅಂಬೆಗಾಲು ಕೃಷ್ಣನಿಗೆ ತಮ್ಮ ಭಕ್ತಿ ಸಮರ್ಪಿಸಿದ್ದಾರೆ ಎಂದು ಹೇಳಲಾಗಿದೆ ಎಂದು ಪ್ರಧಾನ ಆರ್ಚಕ ರಾಧಾಕೃಷ್ಣ ಹೇಳುತ್ತಾರೆ.

ಈ ಅಂಬೆಗಾಲು ಕೃಷ್ಣನ ಮತ್ತೊಂದು ವಿಶೇಷ ಏನೆಂದರೆ ಎಷ್ಟೋ ವರ್ಷಗಳಿಂದ ಮಕ್ಕಳಿಲ್ಲದವರು ಈ ಕೃಷ್ಣನ ಬಳಿ ಬಂದು ಹರಕೆ ಹೊತ್ತರೆ ಸಂತಾನ ಪ್ರಾಪ್ತಿಯಾಗುತ್ತದೆಂಬ ನಂಬಿಕೆ ಇಂದಿಗೂ ಇದೆ. ವೈದ್ಯರುಗಳೇ ಮಕ್ಕಳಾಗುವುದಿಲ್ಲವೆಂದು ಕೈಚೆಲ್ಲಿದ ಮೇಲೆ ಈ ಅಂಬೆಗಾಲು ಕೃಷ್ಣನ ಮೊರೆಹೋದವರಿಗೆ ಸಂತಾನ ಪ್ರಾಪ್ತಿಯಾಗಿದೆಯಂತೆ. ಇಂದಿಗೂ ಕೂಡ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿ ಫಲಿಸುತ್ತಿದೆ ಎಂದು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿಸುವುದು ವಾಡಿಕೆ ಎನ್ನುತ್ತಾರೆ ಭಕ್ತೆ ಪುಷ್ಪಲತಾ.

ಒಟ್ಟಾರೆ ಸಾಕಷ್ಟು ವೈಶಿಷ್ಟ್ಯಗಳನ್ನ ಹೊಂದಿರುವ ಅಂಬೆಗಾಲು ಕೃಷ್ಣನ ದೇವಾಲಯಕ್ಕೆ ದಿನ ನಿತ್ಯ ನೂರಾರು ಭಕ್ತರು ಬಂದು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊರುವುದಲ್ಲದೆ ರಾಜ್ಯ ಮಾತ್ರವಲ್ಲದೆ, ತಮಿಳುನಾಡು, ಆಂಧ್ರ ಪ್ರದೇಶ ಇನ್ನು ಮುಂತಾದ ರಾಜ್ಯಗಳಿಂದ ಆಗಮಿಸಿ ಅಂಬೆಗಾಲು ಕೃಷ್ಣನಿಗೆ ಭಕ್ತರು ತಮ್ಮ ಹರಕೆ ತೀರಿಸುತ್ತಾರೆ.

Also read: ನಾವು ದೇವರಿಗೆ ದೀಪವನ್ನು ಹಚ್ಚುವುದರ ಹಿಂದಿನ ವೈಜ್ಞಾನಿಕ ಕಾರಣ