ಸಂಖ್ಯಾಶಾಸ್ತ್ರಜ್ಞನಿಗೆ ಉಲ್ಟಾ ಹೊಡೆದ ನಂಬರ್: ಆರ್ಯವರ್ಧನನಿಗೆ ‘ಬಂಧನ ಯೋಗ’

0
1056

ಬೆಂಗಳೂರು: ಆಂಧ್ರ ಪ್ರದೇಶ ಮೂಲದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ವಂಚನೆ ಮಾಡಿದ ಆರೋಪದ ಎದುರಿಸುತ್ತಿದ್ದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಖಾಸಗಿ ಸುದ್ದಿಮಾಧ್ಯಮವೊಂದು ವರದಿ ಮಾಡಿರುವಂತೆ ಆರ್ಯವರ್ಧನ ಗುರೂಜಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದ್ದು, ದೇವಾಲಯಕ್ಕೆ ತೆರಳಿ ವಾಪಸಾಗುತ್ತಿದ್ದಾಗ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ಸ್ ಪೆಕ್ಟರ್ ಶಿವಾರೆಡ್ಡಿ ನೇತೃತ್ವದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೊಲೀಸರ ತಂಡ ತಮಿಳುನಾಡಿನಲ್ಲಿ ಕಾರ್ಯಾಚರಣೆ ಆರ್ಯವರ್ಧನ ಗುರೂಜಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಜ್ಯೋತಿಷಿ ಆರ್ಯವರ್ಧನ್ ಕೆಲದಿನಗಳ ಹಿಂದೆ ಜ್ಯೋತಿಷ್ಯ ತರಬೇತಿ ನೀಡುವುದಾಗಿ ಜಾಹೀರಾತು ನೀಡಿದ್ದರು. 5 ದಿನಗಳ ತರಗತಿ ಪ್ರವೇಶಾತಿಗೆ 24 ಸಾವಿರ ನಿಗದಿ ಮಾಡಲಾಗಿತ್ತು. ಹೆಚ್ಚಿನ ತರಗತಿಗಾಗಿ 1.5ಲಕ್ಷ ಹಣವನ್ನು ಆಕೆಯಿಂದ ಆರ್ಯವರ್ಧನ್ ಪಡೆದಿದ್ದರು. ತಮ್ಮ ತರಗತಿ ಉಪಯೋಗವಾಗದಿದ್ದರೆ ಹಣ ವಾಪಸ್ ನೀಡುವುದಾಗಿ ಹೇಳಿದ್ದರು.

ಕೆಲವು ದಿನ ತರಬೇತಿ ಭಾಗವಹಿಸಿದ ನಂತರ ಸಂಖ್ಯಾಶಾಸ್ತ್ರ ಪ್ರಯೋಜನವಿಲ್ಲವೆಂದು ತಿಳಿದು ಆಕೆ ಹಣ ವಾಪಸ್ ಕೇಳಿದ್ದರು. ಇದರಿಂದ ಇಬ್ಬರ ನಡುವೆ ವಾಗ್ವಾದಗಳು ನಡೆದಿದ್ದವು. ಆಗಸ್ಟ್ 21ರಂದು ಆರ್ಯವರ್ಧನ್ ಆಕೆಯ ಮನೆಗೆ ತೆರಳಿ ಹಣ ನೀಡುವಂತೆ ಕೇಳಿದ್ದು ಈ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.

ಡಿಸೆಂಬರ್ 10ರಂದು ಮಹಿಳೆ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರಿಗೆ ಲೈಂಗಿಕ ಕಿರುಕುಳ, ವಂಚನೆ, ಪ್ರಾಣಬೆದರಿಕೆ ದೂರು ದಾಖಲಿಸಿದ್ದರು. ಐ.ಪಿ.ಸಿ. ಸೆಕ್ಷನ್ 354, 420, 506, 504 ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರೂಜಿ ಬಂಧನಕ್ಕೆ 2 ವಿಶೇಷ ತಂಡಗಳನ್ನು ರಚಿಸಿದ್ದರು. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಗುರೂಜಿಯನ್ನು ನಿನ್ನೆ ರಾತ್ರಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ವಲಯ ಡಿಜಿಪಿ ಅನುಚೇತ್ ಅವರ ನೇತೃತ್ವದಲ್ಲಿ ಆರ್ಯವರ್ಧನ ವಿಚಾರಣೆ ನಡೆಸಲಾಗುತ್ತಿದೆ.