ಫೆಬ್ರವರಿ 28ರಿಂದ ಉಳಿತಾಯ ಖಾತೆಯಿಂದ ವಿಥ್ ಡ್ರಾ ಮಾಡುವ ವಾರದ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಘೋಷಿಸಿದೆ. ಮಾರ್ಚ್ 13ರಿಂದ ನಗದು ವಿಥ್ ಡ್ರಾದ ಎಲ್ಲ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ತಿಳಿಸಲಾಗಿದೆ.
ಕಳೆದ ವರ್ಷ ನವೆಂಬರ್ 8ರಂದು 500, 1000 ರುಪಾಯಿ ಹಳೆ ನೋಟುಗಳನ್ನು ಹಿಂಪಡೆದ ನಂತರ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ತೆಗೆದುಕೊಳ್ಳಲು ಮಿತಿ ಹಾಕಲಾಗಿತ್ತು. ಎಟಿಎಂ ಮತ್ತು ಬ್ಯಾಂಕ್ ನಲ್ಲಿ ಉಳಿತಾಯ ಖಾತೆಗಳಿಂದ ಹಣ ವಿತ್ ಡ್ರಾ ಮಾಡಲು ಮಿತಿ ಹೇರಲಾಗಿತ್ತು. ಹಳೆಯ 500 ಮತ್ತು 1000ದ ನೋಟುಗಳನ್ನು ಬ್ಯಾಂಕುಗಳಿಗೆ ಜಮಾ ಮಾಡಲು ಡಿಸೆಂಬರ್ ವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ತೆರಿಗೆ ವಂಚನೆಯಿಂದ ತಪ್ಪಿಸಲು ಎರಡೂವರೆ ಲಕ್ಷಕ್ಕೂ ಅಧಿಕ ಹಣ ಠೇವಣಿಯಿಟ್ಟವರ ಖಾತೆಗಳನ್ನು ಪರೀಕ್ಷಿಸಲಾಗುತ್ತಿತ್ತು.
ಆರ್ ಬಿಐ ತನ್ನ ಹಣಕಾಸು ವರ್ಷದ ಮೊದಲ ಎರಡು ತಿಂಗಳ ವಿತ್ತೀಯ ನೀತಿಯನ್ನು ಇಂದು ಪ್ರಕಟಿಸಿದ್ದು, ಬಡ್ಡಿದರದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ನೇತೃತ್ವದ 6 ಸದಸ್ಯರನ್ನೊಳಗೊಂಡ ಹಣಕಾಸು ನೀತಿ ಸಮಿತಿ, ರೆಪೊ ದರವನ್ನು ಬದಲಾಯಿಸದೆ ಶೇಕಡಾ 6.25 ಮತ್ತು ರಿವರ್ಸ್ ರೆಪೊ ದರವನ್ನು ಶೇಕಡಾ 5.75ರಷ್ಟು ಕಾಯ್ದುಕೊಂಡಿದೆ.
ಉಳಿತಾಯ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಎರಡು ಹಂತಗಳಲ್ಲಿ ಮಾಡಲಾಗುವುದು. ಮೊದಲನೆಯದಾಗಿ ಫೆಬ್ರವರಿ 20ರಿಂದ ವಿತ್ ಡ್ರಾ ಮಿತಿ ವಾರಕ್ಕೆ 24,000ದಿಂದ 50,000ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ತಿಳಿಸಿದ್ದಾರೆ.