ಉದ್ಯೋಗ ಸೃಷ್ಟಿ ಮಾಡಿಕೊಡದಿದ್ದರೆ ಯುವಕ/ಯುವತಿಯರು ಬೀದಿಗಿಳಿದು ಉಗ್ರ ಹೋರಾಟ ಮಾಡುವ ದಿನ ದೂರವಿಲ್ಲ : ರಘುರಾಮ್ರಾಜನ್!!

0
90

ನವದೆಹಲಿ: ಮುಂಬರುವ ದಿನಗಳಲ್ಲಿ ಭಾರತದ ಯುವ ಜನರಿಗೆ ಅಗತ್ಯ ಪ್ರಮಾಣ ಉದ್ಯೋಗ ಸೃಷ್ಟಿ ಮಾಡಿಕೊಡದಿದ್ದರೆ ಅವರು ಬೀದಿಗಿಳಿದು ಹೋರಾಟ ಮಾಡುವ ದಿನ ದೂರವಿಲ್ಲ ಎಂದು ಆರ್ ಬಿ ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

ಹಣಕಾಸು ಅಧ್ಯಯನ ಕೇಂದ್ರ ಆಯೋಜಿಸಿದ್ದ ವೆಬ್ನಾರ್ನಲ್ಲಿ ಭಾಗವಹಿಸಿ ಮಾತನಾಡಿದ ರಘುರಾಮ್ ರಾಜನ್, ಕೊರೋನಾ ಕಾರಣದಿಂದಾಗಿ ದೇಶದ ಆರ್ಥಿಕತೆ ಪಾತಾಳಕ್ಕೆ ಬಿದ್ದಿದೆ. ಇದು ಉದ್ಯೋಗ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಕಡಿತವಾಗಿದೆ. ಇದು ಯುವ ಪೀಳಿಗೆಯನ್ನು ನಿರುದ್ಯೋಗಿಗಳನ್ನಾಗಿಸಿದೆ. ಕೊರೋನೋತ್ತರ ಕಾಲದಲ್ಲಿ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆ ಮತ್ತಷ್ಟು ಮೇಲೇರಲು ಉದ್ಯೋಗ ಸೃಷ್ಟಿ ಸಹಕಾರ ನೀಡುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಉದ್ಯೋಗ ಸೃಜನೆಯತ್ತ ಗಮನ ಹರಿಸಬೇಕು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಸದ್ಯ ಸರ್ಕಾರ ಈ ಕೆಲಸ ಮಾಡದೆ ಸಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ವಾಸ್ತವದ ಲೆಕ್ಕಾಚಾರವನ್ನು ದೇಶದ ಜನರಿಗೆ ನೀಡದೆ ಮರೆ ಮಾಚುತ್ತಿದೆ. ಕೇಂದ್ರದ ಈ ಲೆಕ್ಕ್ಕಾಚಾರ ಕೆಲ ದಿನಗಳವರೆಗೆ ಮಾತ್ರ ಫಲ ನೀಡುತ್ತದೆ. ಜನಕ್ಕೆ ವಾಸ್ತವದ ಅರ್ಥವಾದಾಗ ಅವರು ಸರ್ಕಾರದ ವಿರುದ್ದ ತಿರುಗಿ ಬೀಳುವ ಸನ್ನಿವೇಶ ಸೃಷ್ಟಿಯಾದರೂ ಅಚ್ಚರಿ ಇಲ್ಲ ಎಂದು ರಾಜನ್ ಹೇಳಿದ್ದಾರೆ.

ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಕೆಲಸವನ್ನು ಸರ್ಕಾರ ಮಾಡಬೇಕು. ಶೀಘ್ರ ಉದ್ಯೋಗ ಕಲ್ಪಿಸದಿದ್ದರೆ ಯುವ ಜನಾಂಗ ಈ ಸಲುವಾಗಿ ಬೀದಿಗಿಳಿಯಬಹುದು ಎಂದು ರಘುರಾಮ್ ರಾಜನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಆತ್ಮ ನಿರ್ಭರ ಭಾರತದಲ್ಲಿನ ಉತ್ಪಾದನಾ ಮತ್ತು ರಫ್ತು ನೀತಿ ಬಗ್ಗೆ ಮಾತನಾಡಿದ ರಾಜನ್ ಸರ್ಕಾರದ ಆಮದು ಬದಲಿ ನೀತಿ ದೇಶದ ಆರ್ಥಿಕತೆಗೆ ಪೆಟ್ಟು ನೀಡಬಹುದು ಎಂದು ಅಭಿಪ್ರಾಯಪಟ್ಟರು. ದೇಶ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಾದರೆ ಮೊದಲು ಗ್ರಾಹಕರ ಬೇಡಿಕೆ ಪೂರೈಸುವ ಹಾಗೂ ಗುಣಮಟ್ಟದ ರಫ್ತು ವಸ್ತುಗಳನ್ನು ಉತ್ಪಾದನೆ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಡಿ ಇಟ್ಟರೆ ಉಧ್ಯೋಗ ಸೃಷ್ಟಿ ಜೊತೆಗೆ ಅಭಿವೃದ್ದಿಯೂ ಸಾಧ್ಯವಾಗುತ್ತದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.