ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾದಿರುವ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ಬಿಡುಗಡೆಗೂ ಮುನ್ನವೇ 500 ಕೋಟಿ ರೂ. ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ನಿಜವಾದರೆ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಮೈಲುಗಲ್ಲು ಇದಾಗಲಿದೆ.
ಭಾರತೀಯ ಚಿತ್ರರಂಗದಲ್ಲಿ ಚಿತ್ರ ಬಿಡುಗಡೆ ಆದ ಮೇಲೆ 100 ಕೋಟಿ ಬಂದರೂ ಅದು ದೊಡ್ಡ ಲಾಭ ಎಂದೇ ಪರಿಗಣಿಸಲಾಗುತ್ತದೆ. ಅದರಲ್ಲೂ ಬಿಡುಗಡೆಗೂ ಮುನ್ನವೇ ಇಷ್ಟು ದೊಡ್ಡ ಮೊತ್ತ ಬಂದರಂತೂ ಸೂಪರ್ ಡೂಪರ್ ಎಂದೇ ಚಿತ್ರ ತಂಡ ಬೀಗುತ್ತದೆ. ಆದರೆ ಬಾಹುಬಲಿ ಮಟ್ಟಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದ್ದು, ಹೊಸ ದಾಖಲೆಗಳನ್ನು ಬರೆಯುತ್ತಲೇ ಇದೆ.
ಬಾಹುಬಲಿ- ದಿ ಬಿಗಿನಿಂಗ್ ಚಿತ್ರ 600 ಕೋಟಿ ಗಳಿಕೆ ಮಾಡಿ ಭಾರತೀಯ ಚಿತ್ರರಂಗದಲ್ಲೇ ಅತೀ ಹೆಚ್ಚು ಆದಾಯ ಗಳಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದರಿಂದ ಎರಡನೇ ಭಾಗದ ಮೇಲೆ ಅಪಾರ ನಿರೀಕ್ಷೆ ಇದೆ.
ಚಿತ್ರದ ಮಾರಾಟ ಹಕ್ಕುಗಳಿಂದಲೇ 500 ಕೋಟಿ ರೂ. ಬಾಚಿಕೊಂಡಿದೆ ಎಂದು ದಕ್ಷಿಣ ಭಾರತೀಯ ಚಿತ್ರಗಳ ಟ್ರ್ಯಾಕರ್ ಬಾಲಾ ಟ್ವೀಟರ್ ನಲ್ಲಿ ಅಂಕಿ-ಅಂಶ ಬಿಡುಗಡೆ ಮಾಡಿದ್ದಾರೆ.
ಬಾಹುಬಲಿ-2 ಚಿತ್ರದ ಹಿಂದಿ ಆವತರಣಿಕೆಯನ್ನು ಸಹ ನಿರ್ಮಾಪಕ ಕರಣ್ ಜೋಹರ್ 120 ಕೋಟಿಗೆ ಖರೀದಿಸಿದ್ದಾರೆ. ಹಿಂದಿಯ ಸ್ಯಾಟಲೈಟ್ ಮಾರಾಟ ಹಕ್ಕಿನಿಂದ 51 ಕೋಟಿ ಬಂದಿದೆ. ಬಾಹುಬಲಿ ಚಿತ್ರದ ಬಜೆಟ್ 180 ಕೋಟಿ ಆಗಿದ್ದು, ಇವೆರಡರಿಂದಲೇ ಚಿತ್ರದ ಬಜೆಟ್ ಮೊತ್ತ ವಾಪಸ್ ಬಂದಂತಾಗಿದೆ.
ತಮಿಳುನಾಡು ಮಾರಾಟ ಹಕ್ಕು 47 ಮತ್ತು ಕರ್ನಾಟಕದ ಮಾರಾಟ ಹಕ್ಕು 45 ಕೋಟಿಗೆ ಮಾರಾಟವಾಗಿದೆ. ಆಡೀಯೊ ಮತ್ತು ಪ್ರಾದೇಶಿಕ ಭಾಷೆಗಳ ಮಾರಾಟ ಹಕ್ಕು ಇನ್ನು ಮಾರಾಟ ಮಾಡಿಲ್ಲ. ಇವೆಲ್ಲವೂ ಸೇರಿದಂತೆ ಚಿತ್ರದ ಆದಾಯ 1000 ಕೋಟಿ ದಾಟಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ನಿಜವಾದರೆ ಭಾರತೀಯ ಚಿತ್ರರಂಗಕ್ಕೆ ಅತಿ ದೊಡ್ಡ ಮೈಲೇಜ್ ಸಿಗಲಿದೆ.