ಇನ್ಮುಂದೆ ರಸ್ತೆ ಗುಂಡಿ ಅಪಘಾತ ಸಂತ್ರಸ್ತರಿಗೆ ಬಿಬಿಎಂಪಿ ಪರಿಹಾರ ಕೊಡಬೇಕು; ಹೈ ಕೋರ್ಟ್ ಮಹತ್ವದ ತೀರ್ಪು.!!

0
916

ಬೆಂಗಳೂರಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ನೂರಾರು ಜನರು ಪ್ರಾಣಕಳೆದುಕೊಂಡಿದ್ದಾರೆ. ಇನ್ನೂ ಸಾಕಷ್ಟು ಜನರು ಕೈ ಕಾಲು ಕಳೆದುಕೊಂಡಿದ್ದಾರೆ. ಈ ಎಲ್ಲ ಅಪಘಾತಗಳಿಗೆ ಯಾರು ಹೊಣೆ ಎನ್ನುವುದು ಬಹುದಿನಗಳಿಂದ ವಿವಾದ ಸೃಷ್ಟಿ ಮಾಡಿದ್ದು, ಈ ಕುರಿತು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ನಗರದಲ್ಲಿ ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ತೊಂದರೆಗೆ ಒಳಗಾದ ನಾಗರಿಕರಿಗೆ ಬಿಬಿಎಂಪಿ ಪರಿಹಾರ ನೀಡಬೇಕು ಎಂದು ಆದೇಶ ಮಾಡಿದ್ದು, ಸಂತ್ರಸ್ತರಿಗೆ ಪಾಲಿಕೆಯೇ ಪರಿಹಾರ ನೀಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕು ಎಂದು ಹೇಳಿದೆ.

ಏನಿದು ಸುದ್ದಿ?

ರಸ್ತೆಗುಂಡಿಗಳಿಂದ ಸವಾರರು ಅಪಘಾತಕ್ಕೆ ಒಳಗಾಗಿ ಗಾಯಗೊಂಡಲ್ಲಿ ಅದಕ್ಕೆ ಸಂಬಂಧಿಸಿ ಪಾಲಿಕೆ ಅಧಿಕಾರಿಗಳನ್ನೇ ಹೊಣೆಯಾಗಿಸುವ ಜತೆಗೆ ಪರಿಹಾರವನ್ನು ಬಿಬಿಎಂಪಿಯೇ ವಿತರಿಸಬೇಕಾಗುತ್ತದೆ ಎಂದು ನ್ಯಾಯಪೀಠವು ಮಂಗಳವಾರ ಮೌಖಿಕವಾಗಿ ತಿಳಿಸಿತ್ತು. ಅದರಂತೆ ಬುಧವಾರ ಆದೇಶವನ್ನು ಬರೆಯಿಸಿದ ನ್ಯಾಯಪೀಠವು, ಪಾಲಿಕೆಗೆ ಕೆಲವೊಂದು ನಿರ್ದೇಶನಗಳನ್ನು ನೀಡಿ ರಸ್ತೆಗುಂಡಿ ವಿಚಾರದಲ್ಲಿ ಗಂಭೀರತೆ ಹೊಂದಲು ಸೂಚಿಸಿ ನಗರದಲ್ಲಿ ರಸ್ತೆ ಗುಂಡಿಗಳಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವಿಜಯ್‌ ಮೆನನ್‌ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂ ನ್ಯಾ. ಮೊಹಮ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿದೆ.

ಈ ಕುರಿತು ಕೋರ್ಟ್ ಹೇಳಿದ ಪ್ರಕಾರ ನಾಗರಿಕರು ಕೇವಲ ತೆರಿಗೆ ಪಾವತಿಗೆ ಸೀಮಿತರಲ್ಲ. ಸುರಕ್ಷಿತ ಸಂಚಾರಕ್ಕೆ ಸುಸ್ಥಿತಿಯ ಹಾಗೂ ಗುಣಮಟ್ಟದ ರಸ್ತೆಗಳನ್ನು ಬಯಸುವುದೂ ಸಹ ಅವರ ಹಕ್ಕು. ಅಂತಹ ಸೌಲಭ್ಯ ಒದಗಿಸುವುದು ಪಾಲಿಕೆಯ ಜವಾಬ್ದಾರಿ. ಆದ್ದರಿಂದ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡುವಲ್ಲಿ ನಿರ್ಲಕ್ಷ್ಯ ತೋರಿದರೆ ಅಥವಾ ವಿಫ‌ಲರಾದರೆ ಪಾಲಿಕೆಯೇ ಹೊಣೆ ಹೊರಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕು. ಅಷ್ಟೇ ಅಲ್ಲದೆ ಇನ್ಮುಂದೆ ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ಗಾಯ ಇಲ್ಲವೇ ಇನ್ನಾವುದೇ ರೀತಿಯ ತೊಂದರೆಗೆ ಒಳಗಾದವರು ಪರಿಹಾರ ಕೋರಿ ಬಿಬಿಎಂಪಿಗೆ ಅರ್ಜಿ ಸಲ್ಲಿಸಬಹುದು. ಆ ಅರ್ಜಿಯನ್ನು ಬಿಬಿಎಂಪಿ ಪರಿಗಣಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರತಿಯೊಬ್ಬ ಮೂಲಭೂತ ಹಕ್ಕು

ಪರಿಹಾರ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ, ಅದು ಸಕಾರಣಗಳಿಂದ ಕೂಡಿದ್ದರೆ ಮತ್ತು ತೃಪ್ತಿಕರವಾದಲ್ಲಿ ನ್ಯಾಯಸಮ್ಮತವಾಗಿ ಪರಿಹಾರ ನೀಡಲು ಬಿಬಿಎಂಪಿ ಮುಕ್ತವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿತು. ಘನತೆಯಿಂದ ಬುದುಕುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಸಂವಿಧಾನದ ಪರಿಚ್ಛೇದ 21 ಪ್ರತಿಪಾದಿಸುತ್ತದೆ. ಅದನ್ನು ವಿಸ್ತರಿಸಿ ವಿಶ್ಲೇಷಣೆ ಮಾಡಿರುವ ಸುಪ್ರೀಂ ಕೋರ್ಟ್‌, ಸುಸ್ಥಿತಿಯ ರಸ್ತೆಯಲ್ಲಿ ಸಂಚರಿಸುವುದು ಕೂಡ ವ್ಯಕ್ತಿಯ ಹಕ್ಕು ಎಂದು ವ್ಯಾಖ್ಯಾನಿಸಿದೆ. ಅದಕ್ಕಾಗಿ ಜನರು ಸುರಕ್ಷಿತವಾಗಿ ನಡೆದಾಡಲು ಮತ್ತು ವಾಹನಗಳಲ್ಲಿ ಸಂಚಾರ ಮಾಡಲು ಸುಸ್ಥಿರ, ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಬೇಕಿರುವುದು ಸರ್ಕಾರ ಹಾಗೂ ಪೌರ ಸಂಸ್ಥೆಗಳ ಜವಾಬ್ದಾರಿ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.