ಕರ್ನಾಟಕದ ಬೇಲೂರು ಚನ್ನಕೇಶವ ದೇವಾಲಯ ಕಲೆಗೆ 900ರ ವೈಭವ

0
902

ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ‘ಹೊಯ್ಸಳ’ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ ವಿನಯಾದಿತ್ಯ (ಆಡಳಿತ: ೧೦೪೭-೧೦೯೮).

ಕರ್ನಾಟಕದ ವೈಭವವನ್ನು ಎತ್ತಿ ಹಿಡಿಯುತ್ತಿರುವ ಪ್ರಪಂಚದಲ್ಲೆ ಎಲ್ಲೂ ಇಲ್ಲದ ಅಪೂರ್ವ ಕಲಾ ವೈಭವದ ಸ್ಮಾರಕ ಬೇಲೂರಿನ ಚನ್ನಕೇಶವ ದೇವಾಲಯ.

ದೇವಾಲಯದ ಉದ್ಘಾಟನೆ ಯಾ ಪ್ರತಿಷ್ಠಾಪನೆ ಯಾಗಿದ್ದು 10.3.1117 ರಂದು. ನಾಳೆ 10.3.2017 ಕ್ಕೆ 900 ವರ್ಷ ತುಂಬುತ್ತದೆ.

ಹೊಯ್ಸಳ ರಾಜ ವಿಷ್ಣುವರ್ಧನ (1104 – 1142) ತನ್ನ ವಿಜಯಗಳಿಂದ ಬಂದ ಹಣವನ್ನು ಸ್ವಾರ್ಥಕ್ಕೆ ಬಳಸದೇ ಕರ್ನಾಟಕದ ಕೀರ್ತಿಯನ್ನು ದಿಗ್ದಿಗಂತಗಳಲ್ಲಿ ಹರಡುವಂತೆ ಮಾಡುತ್ತೇನೆ ಎಂದು ಶಾಸನದಲ್ಲಿ ಹೇಳಿಕೊಂಡಿದ್ದಾನೆ.

ಆಚಾರ್ಯ ರಾಮಾನುಜರ (1017 – 1137) ಆಜ್ಞೆಯಂತೆ ಈ ದೇವಾಲಯವನ್ನು ವಿಷ್ಣುವರ್ಧನನ ಕಂಚಿ, ತಲಕಾಡು, ಹಾನಗಲ್, ಬನವಾಸೆ ಮತ್ತು ಚೋಳರ ಮೇಲಿನ ವಿಜಯಗಳ ಸಂಕೇತವಾಗಿ ವಿಜಯನಾರಾಯಣ ದೇವರ ಪ್ರತಿಷ್ಠೆಯನ್ನು ತಾನೇ ನಿಂತು ನೆರವೇರಿಸಿದ.

ಈ ದೇವಾಲಯ ನಮ್ಮ ದೇಶದ ಕರ್ನಾಟಕದ ಹೆಮ್ಮೆ. ಈ ವಿಷಯದ ಬಗ್ಗೆ ಕನ್ನಡಿಗರು ಮಾತ್ರವಲ್ಲದೆ ನಮ್ಮ ದೇಶವೇ ಹೆಮ್ಮೆ ಪಡಬೇಕಾದ ಸಂಗತಿ. ಕನ್ನಡಿಗರಾಗಿ ಹುಟ್ಟಿ ಬೇಲೂರನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು. ‌