ವೀಳ್ಯದೆಲೆ ತಿನ್ನುವುದರಿಂದ ಆಗುವ ಹಲವು ಪ್ರಯೋಜನಗಳು

0
9762

ಭಾರತೀಯ ಸಂಪ್ರದಾಯದಲ್ಲಿ ಅತಿ ಹೆಚ್ಚಿನ ವೀಳ್ಯೆದೆಲೆಗೆ ಮಹತ್ವವಿದೆ. ಕರಾವಳಿ ಕರ್ನಾಟಕದಲ್ಲಿ ತುಳುವರ ಎಲ್ಲಾ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇಬೇಕು. ನಿತ್ಯದ ದೇವರ ಸಮರ್ಪಣೆಗೂ ಹಣ್ಣು ಕಾಯಿಗಳ ಜತೆಗೆ ಎಲೆ ಅಡಿಕೆ ಇರಲೇಬೇಕು,`ಫಲತಾಂಬೂಲ’ ಕೊಡುವಾಗ ತೆಂಗಿನ ಕಾಯಿಯ ಜತೆಗೆ ವೀಳ್ಯದೆಲೆ ಮತ್ತು ಅಡಿಕೆ ಇಡಲೇ ಬೇಕು. ದೇವರ ಪೂಜೆಯ ಜೊತೆಗೆ ತಾಂಬೂಲಕ್ಕೂ ವೀಳ್ಯದೆಲೆಯನ್ನು ಬಳಸುತ್ತೇವೆ. ಅಡಿಕೆ ಸುಣ್ಣ ಹಾಕಿ ತಿನ್ನುವ ವೀಳ್ಯದೆಲೆಯಿಂದ ಅತಿ ಹೆಚ್ಚಿನ ಉಪಯೋಗಗಳು ದೊರೆಯುತ್ತವೆ.

ವೀಳ್ಯದೆಲೆ ತಿನ್ನುವುದರಿಂದ ಆಗುವ ಹಲವು ಪ್ರಯೋಜನಗಳು

 • ಒಂದು ವೀಳ್ಯದೆಲೆ, ಸ್ವಲ್ಪ ಕರೀ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು.
 • ಕ್ಯಾಲ್ಸಿಯಂ ಅಂಶ ಹೆಚ್ಚಿರುವ ವೀಳ್ಯದೆಲೆ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ.
 • ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ.
 • ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.
 • ವೀಳ್ಯದೆಲೆಗೆ ಹರಳೆಣ್ಣೆಯನ್ನು ಹಚ್ಚಿ ಅದನ್ನು ಬಿಸಿ ಮಾಡಿ ಹೊಟ್ಟೆ ಉಬ್ಬರದಿಂದ ನರಳುತ್ತಿರುವ ಮಗುವಿನ ಹೊಟ್ಟೆಗೆ ಕಾವು ಕೊಟ್ಟರೆ ನೋವು ಮಾಯವಾಗಿ ಮೂತ್ರ ಸುಲಭವಾಗಿ ಆಗುವುದು.
 • ಮಕ್ಕಳಲ್ಲಿ ನೆಗಡಿ, ಕೆಮ್ಮು, ಕಫ‌ ಉಂಟಾದಾಗ ವೀಳ್ಯದೆಲೆಯ ರಸ, ತುಳಸೀರಸ, ದೊಡ್ಡಪತ್ರೆಯ ರಸ ಬೆರೆಸಿ, ಜೇನು ತುಪ್ಪ ಸೇರಿಸಿ ನೀಡಿದರೆ ಶೀಘ್ರ ಗುಣವಾಗುತ್ತದೆ.
 • ಅಸ್ತಮಾ, ಕೆಮ್ಮು, ಕಫ‌ದಿಂದ ಬಳಲುವವರು, ವೀಳ್ಯದೆಲೆಯ ರಸ, ಬಿಳಿ ಈರುಳ್ಳಿಯ ರಸ ಹಾಗೂಜೇನುತುಪ್ಪ ಬೆರೆಸಿ, ಅದರಲ್ಲಿ ಶುದ್ಧ ಇಂಗನ್ನು ಕದಡಿ ದಿನಕ್ಕೆ 3-4 ಬಾರಿ ಸೇವಿಸಿದರೆ ತುಂಬಾ ಪರಿಣಾಮಕಾರಿ.

 • ಹೊಟ್ಟು ಉದುರುವುದು, ಕೂದಲು ಉದುರುವುದು ನಿವಾರಣೆಯಾಗುತ್ತದೆ: 2 ಕಪ್‌ ಕೊಬ್ಬರಿ ಎಣ್ಣೆಗೆ ಅರ್ಧ ಕಪ್‌ ವೀಳ್ಯದೆಲೆಯ ರಸ ಮತ್ತು ಅರ್ಧ ಕಪ್‌ ಒಂದೆಲಗದ ರಸ ಬೆರೆಸಿ ಚೆನ್ನಾಗಿ ಕುದಿಸಿ ನಿತ್ಯ ತಲೆಯ ಕೂದಲಿಗೆ ಹಚ್ಚಿ ಮಾಲೀಶು ಮಾಡಬೇಕು. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. .
 • ವೀಳ್ಯದ ಎಲೆಗಳನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ, ಬಳಿಕ ಸೋಸಿ ಈ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು, ಊತ ಗುಣವಾಗುತ್ತದೆ.
 • ಹಲ್ಲುನೋವು, ವಸಡುನೋವು ಕಡಿಮೆಯಾಗುತ್ತದೆ: ತೀವ್ರವಾದ ಹಲ್ಲು ನೋವಿದ್ದಾಗ ವೀಳ್ಯದೆಲೆಯ ರಸದಲ್ಲಿ ಲವಂಗದ ಹುಡಿಯನ್ನು ಬೆರೆಸಿ, ಅದರಲ್ಲಿ ಅದ್ದಿದ ಹತ್ತಿಯನ್ನು ನೋವಿರುವ ಭಾಗದಲ್ಲಿ ಇರಿಸಬೇಕು.
 • ಗರ್ಭಿಣ ಸ್ತ್ರೀಯರಲ್ಲಿ ವಾಕರಿಕೆ, ಬಿಕ್ಕಳಿಕೆ ಉಂಟಾದಾಗ 2 ವೀಳ್ಯದೆಲೆಯಲ್ಲಿ ಅಡಿಕೆಯ ಚೂರನ್ನು ಇಟ್ಟು ಜೊತೆಗೆ 4 ಯಾಲಕ್ಕಿ ಕಾಳುಗಳನ್ನಿಟ್ಟು ಜಗಿದು ರಸ ಹೀರಿದರೆ ಶಮನಕಾರಿ.

 • ಗಾಯ ಉಂಟಾದಾಗ, ತುರಿಕೆ ಕಜ್ಜಿಗಳಿಗೆ ವೀಳ್ಯದೆಲೆಯ ರಸದಲ್ಲಿ 4-6 ಹನಿ ನಿಂಬೆರಸ ಬೆರೆಸಿ ಹಚ್ಚಿದರೆ ಗುಣಕಾರಿ.
 • ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಪರಿಹಾರವಾಗುತ್ತದೆ.
 • ವೀಳ್ಯದೆಲೆ ‘ಕೊಲೆಸ್ಟ್ರಾಲ್’ಮತ್ತು ಗಂಟಲಿನಲ್ಲಿನ ಅಂಟು ಕಫವನ್ನು ತೆಗೆದುಹಾಕುತ್ತದೆ.
 • ಅನ್ನಜೀರ್ಣವಾಗಲು ಬೇಕಾಗುವ ನಾರುಮಯ ಹಾಗೂ ಗೆರೆಗಳಿರುವ ಪದಾರ್ಥವು ಈ ಎಲೆಯಿಂದ ಸಿಗುತ್ತದೆ. ಎಲೆಯಲ್ಲಿನ ಕ್ಷಾರತನವು ಜಂತುಗಳನ್ನು ನಾಶಪಡಿಸುತ್ತದೆ.