ಬಿಲ್ವ ವೃಕ್ಷ

0
3592

ಎಲ್ಲಿ ಶಿವಾಲಯವೋ ಅಲ್ಲಿ ಬಿಲ್ವವಕ್ಷ, ಎಲ್ಲಿ ಶಿವಪೂಜೆ ನಡೆಯುತ್ತದೋ ಅಲ್ಲಿ ಬಿಲ್ವಪತ್ರೆ. ಶಿವಾರ್ಚನೆಗೆ ಬಿಲ್ವಪತ್ರೆ ಎಲ್ಲಕ್ಕಿಂತ ಪವಿತ್ರವಾದದ್ದು. `ತ್ರಿಜನ್ಮಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ’ ಎಂಬ ಮಂತ್ರವೊಂದೇ ಸಾಕು ಬಿಲ್ವದ ಮಹತ್ವವನ್ನು ಹೇಳಲು.

bilva

ಬಿಲ್ವವು ಅಶ್ವತ್ಥ, ಔದುಂಬರಾದಿಗಳಂತೆ ದೇವವೃಕ್ಷ. ಅದು ಭೌತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಪ್ರಖ್ಯಾತ. ಇದರ ಮಹಿಮೆಯನ್ನು ಶ್ರೀಸೂಕ್ತ, ಸೌಭಾಗ್ಯ ಸಂಜೀವಿನಿ, ಸನತ್ಕುಮಾರ ಸಂಹಿತೆ, ಸಾರಸ್ವತ ಸಿದ್ಧಿ, ವಾಮನ ಪುರಾಣ, ಶಿವಪುರಾಣ ಮುಂತಾದ ಗ್ರಂಥಗಳಲ್ಲಿ ವಿವರಿಸಲಾಗಿದೆ.

pic

ಬಿಲ್ವಪತ್ರೆ ಒಣಗಿದ್ದರೂ ಒಂದು ಸಲ ಅರ್ಚಿಸಿದರೂ ನೀರಿನಿಂದ ತೊಳೆದು ಪುನಃ ಅರ್ಚಿಸಬಹುದೆಂದು ಶಾಸ್ತ್ರಮತ. ಸ್ಕಂದ ಪುರಾಣದಲ್ಲಿ ರೋಚಕವಾದ ಕಥೆಯೊಂದುಂಟು. ಲಕ್ಷ್ಮೀನಾರಾಯಣರು ಶಿವನನ್ನು ಕುರಿತು ತಪಸ್ಸು ಮಾಡಿದರಂತೆ. ಆಗ ಲಕ್ಷ್ಮಿಯ ಬಲಗೈಯಿಂದ ಬಿಲ್ವದ ಮರಹುಟ್ಟಿತಂತೆ. ಅದಕ್ಕೆಂದೇ ಶ್ರೀವೃಕ್ಷ ಎಂದು ಹೆಸರು ಪಡೆಯಿತು. ತ್ರಿಗುಣಗಳನ್ನು ಸಂಕೇತಿಸುವ ಅದರ ಎಲೆಯ ಮೂರು ಎಸಳುಗಳು ತ್ರಿಮೂರ್ತಿಗಳ ಮೂರು ವೇದಗಳ ಪ್ರತೀಕ.

bilva1

ಬಿಲ್ವವಕ್ಷದ ಕೆಳಗೆ ಕುಳಿತು ಲಕ್ಷೀ ಮಂತ್ರವನ್ನು ಪುನಶ್ಚರಣೆ ಮಾಡಿದರೆ ಸಿದ್ಧಿಯಾಗುವುದೆಂದು ನಂಬಿಕೆ. ತುಳಸಿ, ನೆಲ್ಲಿ, ಬಿಲ್ವ ಇವು ಮೂರು ಪಾರ್ವತೀ, ಸರಸ್ವತೀ, ಲಕ್ಷೀ ಸ್ವರೂಪದಿಂದ ದೇವತೆಗಳ ಅಂಶವೆಂದು ಪುರಾಣಗಳು ಸಾರುತ್ತವೆ. ಬಿಲ್ವ, ಚರು, ಆಜ್ಯಗಳಿಂದ ಹೋಮ ಮಾಡುವುದರಿಂದ ದಾರಿದ್ರ್ಯವು ನಿರ್ನಾಮವಾಗಿ ಲಕ್ಷ್ಮಿಯು ಗೃಹದಲ್ಲಿ ಸ್ಥಿರವಾಗಿರುವಳೆಂದು ಧರ್ಮಗ್ರಂಥಗಳಲ್ಲಿ ನಿರೂಪಣೆ ಇದೆ.

bilva-shiva

ಶಿವಪುರಾಣಗಳಲ್ಲಿ ಶಿವರಾತ್ರಿಯ ಮಹಿಮೆಯನ್ನು ತಿಳಿಸುತ್ತಾ ಓರ್ವ ಬೇಡನೂ ಚಂಡಾಲಿಯೂ ಎಸೆದ ಬಿಲ್ವಪತ್ರೆಯು ಶಿವಲಿಂಗದ ಮೇಲೆ ಬಿದ್ದುದರಿಂದ ಅವರು ನರಕ ಬಾಧೆಯಿಂದ ಪಾರಾಗಿ ಕೈಲಾಸವನ್ನು ಸೇರಿದರೆಂದು ಬಣ್ಣನೆ ಇದೆ.