ಇದು ನಿಜ ಕಣ್ರೀ ಬುಲೆಟ್ ಬೈಕ್ ಗೆ ಪೂಜೆ ಸಲ್ಲಿಸಲಾಗುತ್ತದೆ. ಅಚ್ಚರಿಯಾದರೂ ಇದು ಸತ್ಯ. ಈ ಸ್ಥಳದಲ್ಲಿ ಬುಲೆಟ್ ಗೆ ಪೂಜೆ ಸಲ್ಲಿಸುವುದರಿಂದ ಇದಕ್ಕೆ ಬುಲೆಟ್ ಟೆಂಪಲ್ ಎಂದೇ ಹೆಸರು ನೀಡಲಾಗಿದ್ದು, ಬುಲೆಟ್ ಬಾಬಾ ದೇವಾಲ ಎಂದೇ ಪ್ರಸಿದ್ಧಿ ಪಡೆದಿದೆ.
ರಾಜಸ್ಥಾನದ ಜೋಧ್ ಪುರದಿಂದ 50 ಕಿಮೀ ದೂರದಲ್ಲಿರುವ ಪಾಲಿ ಜಿಲ್ಲೆಯಲ್ಲಿ ಈ ದೇವಾಲಯವಿದ್ದು, 350 ಸಿಸಿ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್ ನ್ನು ದೇವರಂತೆ ಪೂಜಿಸಲಾಗುತ್ತದೆ. ಈ ಬುಲೆಟ್ ಬೈಕ್ ಗೆ ದೇವರ ಪಟ್ಟ ಒಲಿದಿದ್ದರ ಬಗ್ಗೆಯೂ ಅತ್ಯಂತ ಸ್ವಾರಸ್ಯಕರ ಸಂಗತಿ ಇದೆ. 1988 ರ ಡಿಸೆಂಬರ್ 2 ರಂದು ಓಂ ಸಿಂಗ್ ರಾಥೋಡ್ ಎಂಬ ವ್ಯಕ್ತಿ ಈ ಬುಲೆಟ್ ಸವಾರಿ ಮಾಡುತ್ತಾ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಅಪಘಾತಕ್ಕೀಡಾದ ಬುಲೆಟ್ ಹೊಂಡದೊಳಗೆ ಬಿದ್ದಿತ್ತು.
ಅಲ್ಲಿಂದ ಪೊಲೀಸರು ಅದನ್ನು ಠಾಣೆಗೆ ತೆಗೆದುಕೊಂಡು ಹೋದರಾದರೂ, ಮರುದಿನ ಬೆಳಿಗ್ಗೆ ಅಚ್ಚರಿಯ ರೀತಿಯಲ್ಲಿ ಕಣ್ಮರೆಯಾಗಿತ್ತಂತೆ. ಅಷ್ಟೇ ಅಲ್ಲ ಯಾವ ಪ್ರದೇಶದಲ್ಲಿ ಅಪಘಾತ ಉಂಟಾಗಿತ್ತೋ ಅದೇ ಪ್ರದೇಶದಲ್ಲಿ ಸಿಕ್ಕಿತ್ತಂತೆ. ಈಗ ಎಚ್ಚೆತ್ತ ಪೊಲೀಸರು ಬೈಕ್ ನ ಇಂಧನ ಟ್ಯಾಂಕ್ ನ್ನು ಖಾಲಿ ಮಾಡಿ ಮತ್ತೆ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದರು.
ಆದರೆ ಮತ್ತೊಮ್ಮೆ ಬೈಕ್ ಕಣ್ಮರೆಯಾಯಿತು. ಮತ್ತು ಅಪಘಾತವಾದ ಪ್ರದೇಶದಲ್ಲೇ ಮತ್ತೊಮ್ಮೆ ಪತ್ತೆಯಾಗಿತ್ತು. ಹೀಗೆ ಬೈಕ್ ನ್ನು ಬೇರೆ ಪ್ರದೇಶಕ್ಕೆ ಕೊಂಡೊಯ್ದಾಗಲೆಲ್ಲಾ ಕಣ್ಮರೆಯಾಗಿ ಅಪಘಾತವಾದ ಸ್ಥಳದಲ್ಲೇ ಪತ್ತೆಯಾಗಿದ್ದರಿಂದ, ಸ್ಥಳೀಯರು ಓಂ ಸಿಂಗ್ ರಾಥೋಡ್ ಅವರ ಚೈತನ್ಯ ಇನ್ನೂ ಇದೆ ಎಂದು ನಂಬಿ ಇದನ್ನು ಪವಾಡ ಎಂದು ಭಾವಿಸಿ ಬುಲೆಟ್ ಬಾಬ ಎಂದು ಬೈಕ್ ಗೆ ನಾಮಕರಣ ಮಾಡಿ ಪೂಜೆ ಮಾಡುತಿದ್ದರೆ.