ಬುಲೆಟ್ ಟ್ರೈನ್ ನಿಜಕ್ಕೂ ಭಾರತಕ್ಕೆ ಬರುತ್ತದೆಯೇ? ಅಥವಾ ಅದು ಕೇವಲ ಗಿಮ್ಮಿಕ್??

0
688

ಬುಲೆಟ್ ಟ್ರೈನ್ ಎಂಬ ಮಾಯಾ ಕುದುರೆ
ವೇಗದ ಸಂಚಾರದ ವಿಷಯಕ್ಕೆ ಬಂದಾಗ ಭಾರತದ ಜನಸಾಮಾನ್ಯರಾದ ನಮಗೆ ಹೆಚ್ಚಿನ ಆಯ್ಕೆಗಳು ಇಲ್ಲ. ಸದ್ಯಕ್ಕೆವಿಮಾನವೇ ಅತಿವೇಗದ ಸಂಚಾರ ಸಾಧನ. ಆದರೆ ಈ ವಿಮಾನ ಸಂಚಾರವೆಂಬುದು ಹಣಕಾಸಿನ ದೃಷ್ಟಿಯಿಂದ ಬಹುತೇಕರಿಗೆ ಕಾರ್ಯ ಸಾಧುವಲ್ಲ. ಬಹಳ ವೇಗದ ದುಬಾರಿ ಕಾರುಗಳನ್ನು ಇಟ್ಟುಕೊಳ್ಳುವಷ್ಟು ಸ್ಥಿತಿವಂತರೂ ನಾವಲ್ಲ. ಹೀಗಾಗಿ ವಿಮಾನ ನಂತರದ ಸಮೂಹ ಸಾರಿಗೆಯ ವೇಗವನ್ನು ವೃದ್ಧಿಸುವ ವ್ಯವಸ್ಥೆ ಅಭಿವೃದ್ಧಿಗೊಳಿಸುವುದೊಂದೇ ಉತ್ತಮ ಪರಿಹಾರ.

ಗಂಟೆಗೆ 150 ಕಿಲೋ ಮೀಟರ್‍ವೇಗದಲ್ಲಿ ಟ್ಯಾಲ್ಗೋ ದೆಹಲಿ ಮತ್ತು ಮುಂಬೈ ನಡುವೆ ಸಂಚರಿಸಿದೆ. ವಾಸ್ತವವಾಗಿ ಭಾರತೀಯ ಸ್ಥಿತಿಗೆ ಹೊಂದುವಂತೆ ರೂಪಿಸಲಾಗಿರುವ ಈ ಟ್ಯಾಲ್ಗೋದ ಗರಿಷ್ಟ ವೇಗ ಗಂಟೆಗೆ 180 ಕಿಮೀಗಳು.

ಸ್ಪೈನ್ ದೇಶದಲ್ಲಿ ಇವುಗಳ ವೇಗ ಗಂಟೆಗೆ 390 ಕಿಮೀ ಮೀರುತ್ತದೆ. ಏಕೆಂದರೆ ಇಲ್ಲಿ ಹೀಗೆ ಬುಲೆಟ್ ವೇಗದಲ್ಲಿ ಚಲಿಸಲೆಂದೇ ಹೈಪರ್‍ಸ್ಪೀಡ್ ಟ್ರೈನ್ ಟ್ರ್ಯಾಕ್ ಮತ್ತು ಸಿಗ್ನಲಿಂಗ್ ವ್ಯವಸ್ಥೆ ಇದೆ. ನಮ್ಮಲ್ಲಿ ಇವೆಲ್ಲಾ ಜಾರಿಗೆ ಬರಲು ಇನ್ನೂ ಹಲವು ವರ್ಷಗಳ ಕಾಲಾವಕಾಶ ಬೇಕು. ಆದರೆ ಸದ್ಯಕ್ಕೆ ಟ್ರ್ಯಾಕ್ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆ ಮಾಡಿ, ಸಿಗ್ನಲಿಂಗ್ ವ್ಯವಸ್ಥೆ ಉನ್ನತೀಕರಿಸಿಕೊಂಡರೆ ದೇಶದಲ್ಲಿರುವ ಬಹುತೇಕ ದೊಡ್ಡ ನಗರಗಳ ನಡುವೆ ಹೈಸ್ಪೀಡ್ ಟ್ರೈನ್‍ಗಳನ್ನು ಓಡಿಸಲು ಸಾಧ್ಯ.
ಸದಾ ಜನರಿಂದ ತುಂಬಿ ತುಳುಕುತ್ತಾ; ಏದುಸಿರು ಬಿಡುತ್ತಾ; ಹಾವಿನಂತಹ ಹಳಿಗಳನ್ನು ಸುತ್ತಿಕೊಂಡು ಸುಸ್ತಿನಿಂದ ಸಾಗುತ್ತಿದ್ದ ಟ್ರೈನ್‍ಗಳು ಈಗ ಸುಧಾರಣೆಯತ್ತ ಹೊರಟಿದೆ. ಜೊತೆಗೆ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಅನಿವಾರ್ಯತೆಯತ್ತಲೂ ಹೊರಳುತ್ತಿರುವುದು ಬದಲಾವಣೆಯ ಸಂಕೇತ.
ಮುಂಬೈ ಮತ್ತು ದೆಹಲಿ ನಂತರ ಮೈಸೂರು, ಬೆಂಗಳೂರು ಮತ್ತು ಚನ್ನೈ ನಡುವಿನ ಅಂತರ ಕಡಿಮೆಗೊಳಿಸುವ ಪ್ರಯತ್ನ ನಡೆಯಬೇಕು.

ಸದ್ಯ ಈ ಮಹಾನಗರಗಳ ನಡುವೆ ಇರುವ ಹಳಿ ಮೇಲೆ, ಇಂತಹ ಹೈಸ್ಪೀಡ್ ಟ್ರೈನ್ ಓಡಿಸಲು ಸಾಧ್ಯವೇ ಎಂಬುದು ಕುತೂಹಲದ ವಿಷಯ. ವಾಸ್ತವ ಎಂದರೆ ಈ ಹಳಿಯಲ್ಲಿ ಪ್ರಯೋಗಾರ್ಥ ಟ್ಯಾಲ್ಗೋ ಸಹ ಗರಿಷ್ಟ ವೇಗದಲ್ಲಿ ಸಂಚರಿಸಲಾರದು! ಇದಕ್ಕೆ ಪ್ರಮುಖ ಕಾರಣವೆಂದರೆ ಮೈಸೂರು ಮತ್ತು ಬೆಂಗಳೂರು ನಡುವಿನ ಟ್ರೈನ್ ಟ್ರ್ಯಾಕ್‍ನಲ್ಲಿ ಕಂಡು ಬರುವ ಅನಗತ್ಯ ತಿರುವುಗಳು. ಈ ತಿರುವುಗಳನ್ನು ತೆಗೆದು ಸಾಧ್ಯವಾದಷ್ಟೂ ಟ್ರ್ಯಾಕ್ ನೇರಗೊಳಿಸಿದರೆ, ವೇಗವರ್ಧನೆಯಾದೀತು.
ಪ್ರಸ್ತುತ ಮೈಸೂರು ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿರುವ ಟಿಪ್ಪು ಮತ್ತು ಶತಾಬ್ದಿ ಟ್ರೈನ್‍ಗಳು ಗರಿಷ್ಠ 120 ಕಿಮೀ ಹೈಸ್ಪೀಡ್ ವೇಗದಲ್ಲೂ ಸಂಚರಿಸಬಲ್ಲವು. ಆದರೆ ಈ ನಗರಗಳ ನಡುವಿನ ಟ್ರ್ಯಾಕ್‍ನ ಕೆಲವು ಭಾಗಗಳಲ್ಲಷ್ಟೇ ಗಂಟೆಗೆ ಕೇವಲ 100-110 ಕಿಮೀ ವೇಗದಲ್ಲಿ ಚಲಿಸುವುದು ಈಟ್ರೈನ್‍ಗಳಿಗೆ ಸಾಧ್ಯವಾಗುತ್ತಿದೆ. ಅಂದರೆ- ಟ್ರ್ಯಾಕ್‍ಗಳ ತಿರುವಿನ ಕಾರಣಕ್ಕೆ ಗರಿಷ್ಠ ವೇಗ ರೂಢಿಸಿಕೊಳ್ಳಲೂ ಕೂಡ ಈ ಟ್ರೈನ್‍ಗಳಿಗೆ ಆಗುತ್ತಿಲ್ಲ ಎನ್ನುವುದು ಇಲ್ಲಿ ಉಲ್ಲೇಖಾರ್ಹ.
ಹೆಚ್ಚಿನ ತಿರುವುಗಳು ಮತ್ತು ಪದೇ ಪದೇ ಕಾಣಿಸಿಕೊಳ್ಳುವ ಲೆವೆಲ್‍ಕ್ರಾಸಿಂಗ್‍ಗಳು ಹಾಗು ತಡೆಯಲು ಸಾಧ್ಯವಾದ ತಕ್ಷಣದ ಬೇರೆ ಕಾರಣಗಳಿಂದಾಗಿ ಯಾವಾಗಲೂ ಎಂಜಿನ್‍ವೇಗ ಹೆಚ್ಚಿಸಲು ಆಗುವುದಿಲ್ಲ. ಹಾಗೊಂದು ವೇಳೆ ಎಲ್ಲಾ ಕಡೆಯೂ ಗಂಟೆಗೆ 110 ಕಿಮೀ ವೇಗದಲ್ಲಿ ನುಗ್ಗಿದರೆ, ಟ್ರೈನ್ ಎಂಜಿನ್ ಟ್ರ್ಯಾಕ್‍ಬಿಟ್ಟು ರಸ್ತೆಗೋ, ಪಕ್ಕದ ಗದ್ದೆಗೋ ಇಳಿಯುತ್ತದೆ. ಹೀಗಾಗಿ “ಎಲ್ಲಾ ಸಂದರ್ಭದಲ್ಲೂ ನಮ್ಮಲ್ಲಿ ಗರಿಷ್ಠ ವೇಗದ ಓಟ ಸಾಧ್ಯವೇ ಇಲ್ಲ’’ ಎನ್ನುತ್ತಾರೆ ಲೋಕೋ ಪೈಲೆಟ್‍ಗಳು.
ಹಳಿ ನಡುವೆ ಮಾನವ ಮತ್ತು ಇನ್ನಿತರ ಪ್ರಾಣಿಗಳ ಓಡಾಟ, ವಾಹನಗಳ ಓಡಾಟ, ಬ್ಯಾರಿಕೇಡಿಂಗ್ ಇಲ್ಲದ ಮುಕ್ತ ಟ್ರ್ಯಾಕ್ ವ್ಯವಸ್ಥೆಯಿಂದಾಗಿ ಗರಿಷ್ಠ ವೇಗ ಪಡೆಯಲು ಸಾಧ್ಯ ಆಗುತ್ತಿಲ್ಲ. ಈಗಿನ ಸಂದರ್ಭಕ್ಕಂತೂ ಇದು ಸಾಧ್ಯವೇ ಇಲ್ಲ ಎಂಬ ವಾಸ್ತವಾಂಶವನ್ನು ರೇಲ್ವೆ ಅಧಿಕಾರಿ ವರ್ಗ ಮುಂದಿಡುತ್ತದೆ.
ಈ ಅವ್ಯವಸ್ಥೆ ನಡುವೆ ನಮ್ಮ ರಾಜಕಾರಣಿಗಳು ನಮ್ಮಲ್ಲಿ ಕನಸೊಂದನ್ನು ಬಿತ್ತಿದ್ದರು. ಇದು “ಬುಲೆಟ್ ಟ್ರೈನ್’’ ಹೊಂದುವುದಕ್ಕೆ ಸಂಬಂಧಿಸಿದ್ದು. ಬುಲೆಟ್ ಟ್ರೈನ್ ತನ್ನದಾಗಿಸಿಕೊಳ್ಳಬೇಕು ಎನ್ನುವುದು ಭಾರತೀಯ ರೇಲ್ವೆಯ ಬಹುದೊಡ್ಡ ಕನಸು ಕೂಡ. ಕರ್ನಾಟಕದ ಹಿಂದಿನ ಸಿಎಂ ಸದಾನಂದಗೌಡ ಅವರು, ಮೈಸೂರು ಮತ್ತು ಬೆಂಗಳೂರು ನಡುವೆ “ಬುಲೆಟ್ ಟ್ರೈನ್’’ ಓಡಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಹೇಳಿ ಪುಳಕ ಮೂಡಿಸಿದ್ದರು.
ಇಷ್ಟಕ್ಕೂ ಸದ್ಯದ ಹಳಿಯಲ್ಲಿ ಬುಲೆಟ್ ಟ್ರೈನ್ ಇರಲಿ, ಹೈಸ್ಪೀಡ್ ಟ್ರೈನ್ ಓಡಿಸುವುದೂ ಕೂಡ ಕಷ್ಟದ ಮಾತು ಎನ್ನುವುದು ಈಗಾಗಲೇ ಸಾಬೀತಾಗಿದೆ. ಬುಲೆಟ್ ಟ್ರೈನ್‍ನ ವೇಗ ಕನಿಷ್ಠವೆಂದರೂ ಗಂಟೆಗೆ ಗರಿಷ್ಠ 350. ಅಂದರೆ ನಮ್ಮ ಈಗಿನ ಹಳಿವ್ಯವಸ್ಥೆ ಈ ವೇಗಕ್ಕೆ ಸ್ಪಂದಿಸುವುದಿಲ್ಲ. ಹೈಸ್ಪೀಡ್ ಬುಲೆಟ್ ಟ್ರೈನ್ ಓಡಿಸುವುದೆಂದರೆ ಸಾಮಾನ್ಯದ ಮಾತಲ್ಲ. ಒಂದು ಕಿಮೀ ಹಳಿಹಾಸಿ, ವಿದ್ಯುದೀಕರಿಸಲು ಒಟ್ಟಾರೆಯಾಗಿ 180 ಕೋಟಿ (ಇದು ಕೇವಲ ಅಂದಾಜಷ್ಟೇ) ರೂ, ವೆಚ್ಚ ಬೀಳುತ್ತದೆ. ಇನ್ನೂ ಬೇರೆ ಅಗತ್ಯ ಸೌಲಭ್ಯಗಳ ವೆಚ್ಚ ಬೇರೆ. ಇದು ಸರ್ಕಾರದ ಮುಂದಿರುವ ಅಂಕಿಅಂಶ. ಸದ್ಯಕ್ಕೆ ಮೈಸೂರು-ಬೆಂಗಳೂರು ನಡುವೆ 145 ಕಿಮೀ ದೂರಕ್ಕೆ ಬುಲೆಟ್ ಟ್ರೈನ್ ಓಡಿಸಲು 26.1 ಸಾವಿರ ಕೋಟಿ ಹಣ ಬೇಕು.
ಬುಲೆಟ್ ಟ್ರೈನ್ ಎಂಬ ಮಾಯಾ ಕುದುರೆಯ ಕನಸು ಕಾಣುವುದಕ್ಕೂ ಮೊದಲು ವಾಸ್ತವದ ಅರಿವಾಗಬೇಕು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮೈಸೂರು- ಬೆಂಗಳೂರು ಜೋಡಿ ರೇಲ್ವೆ ಮಾರ್ಗ 15-16 ವರ್ಷಗಳಿಂದ ಕುಂಟುತ್ತಿದೆ. ಇನ್ನೂ ಒಂದು ವರ್ಷಕ್ಕಾಗುವಷ್ಟು ಕೆಲಸ ಬಾಕಿ ಇದೆ. ಆದರೆ ಸರ್ಕಾರ ಮನಸ್ಸು ಮಾಡಿದರೆ ಮೈಸೂರು ಮತ್ತು ಬೆಂಗಳೂರು ನಡುವೆ ಬುಲೆಟ್ ಟ್ರೈನ್ ಸಂಚಾರ ಸಾಧ್ಯ. ಈ ಎರಡೂ ನಗರಗಳ ನಡುವಿನ 145 ಕಿಮೀ ದೂರ ಅರ್ಧಗಂಟೆಯಲ್ಲಿ ಕ್ರಮಿಸುವ ಇಂತಹ ಹೊಸ ಸಾರಿಗೆ ವ್ಯವಸ್ಥೆ ಜಾರಿ ಮಾಡಬಹುದು. ಇದಕ್ಕೆ ತಗುಲುವ ಭಾರೀ ವೆಚ್ಚ ಭರಿಸುವ ಶಕ್ತಿ ಸರ್ಕಾರಕ್ಕೆ ಬೇಕಷ್ಟೇ.