ಮಹಾನ್ ವ್ಯಕ್ತಿ ಚಾಣಕ್ಯನಿಂದ ಈಗಿನ ರಾಜಕಾರಣಿಗಳು ಕಲಿಯಬೇಕಾದದ್ದು ಸಾಕಷ್ಟಿದೆ!!

0
1899

ಸಾವಿರಾರು ವರ್ಷಗಳ ಹಿಂದಿನ ಮಾತು ಇದು. ಆಗ ಪಾಟಲಿಪುತ್ರ ಭಾರತದ ದೊಡ್ಡ ರಾಜಧಾನಿಯಾಗಿತ್ತು. ದೂರ ದೂರದ ದೇಶಗಳವರೆಗೂ ಇದರ ಕೀರ್ತಿ ಹಬ್ಬಿತ್ತು. ಈಗಿನ ಹಾಗೆಯೇ ಆ ಕಾಲದಲ್ಲೂ ಬೇರೆ ಬೇರೆ ದೇಶಗಳಿಂದ ನಮ್ಮ ಈ ಭಾರತ ದೇಶವನ್ನು ನೋಡಲು ಜನರು ಬರುತ್ತಿದ್ದರು. ಹೀಗೆ ನೋಡಲು ಬಂದವರಲ್ಲಿ ಚೀನಾ ದೇಶದಿಂದ ಬಂದ `ಚೀನಿಸಯ್ಯ’ ಒಬ್ಬರು. ಭಾರತದಲ್ಲೆಲ್ಲ ಕನ್ಯಾಕುಮಾರಿಯಿಂದ ಹಿಡಿದು ಹಿಮಾಚಲ ಪರ್ವತದವರೆಗೂ- ಸುಜಲಾಂ, ಸುಫಲಾಂ ಮಲಯಜ ಶೀತಲಾಂ, ಸಸ್ಯಶ್ಯಾಮಲಾಂ-ದಿಂದ ಸುಶೋಭಿತವಾದ ಈ ನಾಡನ್ನು ಚೀನಿಸಯ್ಯಾ ನೋಡಿ ತುಂಬಾ ಸಂತೋಷಪಟ್ಟುಕೊಂಡ.
L

ಭಾರತವನ್ನೆಲ್ಲ ನೋಡುತ್ತ ಸುತ್ತುತ್ತಿದ್ದ ಈ ಚೀನಿಸಯ್ಯ ಒಂದು ದಿನ ಪಾಟಲಿಪುತ್ರಕ್ಕೂ ಬಂದ. ಆ ಸಮಯದಲ್ಲಿ ಪಾಟಲಿಪುತ್ರದಲ್ಲಿ ಸಾಮ್ರಾಟ್ ಚಂದ್ರಗುಪ್ತ ಆಳುತ್ತಿದ್ದ. ಇಲ್ಲಿಗೆ ಬಂದ `ಚೀನಿಸಯ್ಯ’ ಇಲ್ಲಿಯ ರಾಜ್ಯದಾಡಳಿತ, ಶಾಂತಿ, ಸಮೃದ್ಧಿ, ಸುಖ, ಸಂತೋಷ ಕಂಡು ಈ ನಾಡಿನ ಬಗೆಗೆ ಅಭಿಮಾನ ತಾಳಿದ. ಪ್ರಜೆಗಳಿಂದ-ಮಹಾಮಂತ್ರಿಯಾದ ಚಾಣಕ್ಯನಿಂದಲೇ ಈ ನಾಡು ಇಷ್ಟು ಪ್ರಗತಿಯನ್ನು ಸಾಧಿಸಿದೆ ಎಂಬುದನ್ನು ಕೇಳಿ ತಿಳಿದ `ಚೀನಿಸಯ್ಯ’ ಮಹಾಮಂತ್ರಿಯನ್ನು ಕಾಣಬೇಕೆಂಬ ವಿಚಾರವನ್ನು ಸ್ಥಿರಗೊಳಿಸಿದ.

ಇಡೀ ರಾಜ್ಯದಲ್ಲೆಲ್ಲ ಮಹಾಮಂತ್ರಿ ಚಾಣಕ್ಯನಿಂದ ಮಾಡಲ್ಪಟ್ಟ ಕಾನೂನುಗಳೇ ಕಾರ್ಯರೂಪದಲ್ಲಿದ್ದವು. ಇಡಿ ರಾಜ್ಯಸೂತ್ರದ ಸೂತ್ರಧಾರಿಯೇ ಚಾಣಕ್ಯನಾಗಿದ್ದ. ಮಹಾಮಂತ್ರಿ ಚಾಣಕ್ಯ ಪಟ್ಟಣದಿಂದ ದೂರದಲ್ಲಿ ನದಿತೀರಕ್ಕೆ ಸಮೀಪವಾಗಿ ವಾಸಿಸುತ್ತಿದ್ದ. `ಚೀನಿಸಯ್ಯ’ ಮಹಾಮಂತ್ರಿಯ ದರ್ಶನಾರ್ಥಿಯಾಗಿ ನದಿಯ ಕಡೆ ಹೊರಟ. ನದೀ ತೀರದ ಮೇಲೆ ಭವ್ಯವಾದ ರಾಜಸೌಧಗಳು, ಅರಮನೆಗಳು ಕಾಣಿಸಿಕೊಂಡವು. `ಚೀನಿಸಯ್ಯ’ ಚಾಣಕ್ಯನ ಮನೆಯನ್ನು ಹುಡುಕಿಯೇ ಹುಡುಕಿದನು. ನದೀ ತೀರದುದ್ದಕ್ಕೂ ನೆಲೆಸಿರುವ ಅರಮನೆಗಳನ್ನು ದಾಟಿ ಮುಂದಕ್ಕೂ ಹುಡುಕಿಕೊಂಡು ಹೊದ. ಕೊನೆಗೆ ಮನೆಗಳೇ ಇಲ್ಲವಾದವು.

ನಿರಾಶನಾಗಿ ಚೀನಿಸಯ್ಯ ಮರಳುತ್ತಿದ್ದ. ಚಾಣಕ್ಯನಂತಹ ಮಹಾ ವ್ಯಕ್ತಿಯ ದರ್ಶನ ಲಾಭ ಸಿಕ್ಕಲಿಲ್ಲವಲ್ಲ ಎಂದು ಚಿಂತಿಸುತ್ತ ತಿರುಗಿ ಬರುತ್ತಿರುವಂತೆ ಓರ್ವ ಮುದುಕನನ್ನು ನೋಡಿದ. ಮುದುಕ ಅಸಾಮಾನ್ಯ ಪುರುಷನಾಗಿದ್ದ. ತೇಜಸ್ವಿಯಾದ ಮುಖಮುದ್ರೆ, ಶಾಂತಿಯುತವಾದ ಕಣ್ಣುಗಳು, ಆತನ ಹಿರಿಯ ವ್ಯಕ್ತಿತ್ವವನ್ನು ಸಾರುತ್ತಿದ್ದವು. ಅದೇ ಸ್ನಾನ ಮಾಡಿ, ನೀರು ತುಂಬಿದ ಮಣ್ಣಿನ ಬಿಂದಿಗೆಯೊಂದನ್ನು ಹೆಗಲಮೇಲಿರಿಸಿಕೊಂಡು ಮಡಿ ಬಟ್ಟೆ ಕೈಯಲ್ಲಿ ಹಿಡಿದುಕೊಂಡು ಆ ಮುದುಕ ಕುಟೀರದ ಕಡೆಗೆ ಹೊರಟಿದ್ದ.

ಈ ಮುದುಕನನ್ನಾದರೂ ಕೇಳಿದರೆ ಚಾಣಕ್ಯನ ಮನೆ ಸಿಕ್ಕಬಹುದೇನೋ ಎಂದು ಯೋಚಿಸಿ ಚೀನಿಸಯ್ಯ “ಚಾಣಕ್ಯರ ನಿವಾಸ ಸ್ಥಾನ ನಿಮಗೆ ಗೊತ್ತೇ?’’ ಎಂದು ಕೇಳಿದ. ಅದಕ್ಕೆ ಉತ್ತರವಾಗಿ ಆ ಮುದುಕ “ನನ್ನೊಂದಿಗೆ ಬನ್ನಿ…’’ ಎಂದ. ಚೀನಿಸಯ್ಯ ಮುದುಕನ ಹಿಂದೆ ಸಾಗಿದ.

ಈ ಮುದುಕ ತನ್ನೊಂದಿಗೆ ಕರೆದುಕೊಂಡು ಬಂದು ಚೀನಿಸಯ್ಯನನ್ನು ಒಂದು ಕುಟೀರದೆದುರಿಗೆ ನಿಲ್ಲಿಸಿದ. ಹುಲ್ಲಿನ ಗುಡಿಸಲು ಅದು. ಕೆಲಕ್ಷಣ ಹೊರಗೇ ನಿಂತು ಚೀನಿಸಯ್ಯನ ಕಡೆಗೊಮ್ಮೆ ನೋಡಿ ಆ ಮುದುಕ ಒಳಗೆ ಹೋಗಿ ನೀರಿನ ಬಿಂದಿಗೆ, ಬಟ್ಟೆ ಇರಿಸಿ ಮತ್ತೆ ಬಾಗಿಲಿಗೆ ಬಂದು `ಬರಬೇಕು’ ಎಂದು ಚೀನಿಸಯ್ಯನನ್ನು ಸ್ವಾಗತಿಸಿದ. ಚೀನಿಸಯ್ಯನಿಗೆ ಇದೆಲ್ಲ ಒಂದು ತೆರನಾಗಿ, ವಿಚಿತ್ರವಾಗಿ ಕಾಣಿಸಿತು. ಆದರೂ ಒಳಗೆ ಹೋದ. “ಹೇಳಿ ತಮಗೆ ಏನಾಗಬೇಕು? ಮಹತ್ತರವಾದ ಕೆಲಸವೇನಾದರೂ ಇದೆಯೆ?’’ ಎಂದು ಆ ಮುದುಕ ಚೀನಿಸಯ್ಯನನ್ನು ಕೇಳಿದ. ಚೀನಿಸಯ್ಯ ಕೊಟ್ಟ ಉತ್ತರ ಮತ್ತೆ ಅದೇ. “ನಾನು ಮಹಾಮಂತ್ರಿ ಚಾಣಕ್ಯನನ್ನು ಕಾಣಬೇಕೆಂದಿದ್ದೇನೆ’’ ಎಂದು.

ಮುದುಕ ಮುಗುಳುನಗುತ್ತ ಬಹು ನವುರಾಗಿ ಉತ್ತರಿಸಿದ- “ನಾನೇ ಚಾಣಕ್ಯ’’ ಎಂದು.
ಅದಕ್ಕೆ ಚೀನಿ ಪ್ರವಾಸಿ-“ನಾನು ಕಾಣಬೇಕೆನ್ನುತ್ತಿರುವುದು ಈ ದೇಶದ ಮಹಾ ಮುತ್ಸದ್ದಿ, ರಾಜನೀತಿಜ್ಞ, ಮಹಾ ಅಮಾತ್ಯರಾದ ಚಾಣಕ್ಯರನ್ನು’’ ಎಂದುದಕ್ಕೆ ಮುದುಕ “ಚಾಣಕ್ಯ, ಮಹಾಮಂತ್ರಿ ಚಾಣಕ್ಯ- ಆ ಚಾಣಕ್ಯನೂ ನಾನೇ..’’ ಎಂದು ಮುಗುಳ್ನಗುತ್ತ ವಿವರಿಸಿದ. ಈ ಉತ್ತರವನ್ನು ಕೇಳಿದ ಚೀನೀ ಪ್ರವಾಸಿ ಬಹು ಅಚ್ಚರಿ ಪಟ್ಟುಕೊಂಡ. ಒಂದು ಮಹಾ ದೇಶದ ಮಹಾ ಮಂತ್ರಿಯಾಗಿರುವ ವ್ಯಕ್ತಿ, ಶಕ್ತಿ ಇಷ್ಟು ಸಾದಾತನ, ಸರಳತನದಿಂದಿರಲು ಸಾಧ್ಯವೆ? ಎಂದು ವಿಚಾರಪರವಶನಾದ. ಚಾಣಕ್ಯನನ್ನು ಕಾಣುವುದಕ್ಕಿಂತ ಮೊದಲು ಅವನ ಬಗೆಗೆ ಚೀನಿಸಯ್ಯನಲ್ಲಿ ಅದೆಷ್ಟು ಗೌರವಿತ್ತೋ ಅವನನ್ನು ಕಂಡ ನಂತರ ಅದಕ್ಕೂ ಹೆಚ್ಚಿನ ಗೌರವ ಚೀನಿಸಯ್ಯನಲ್ಲಿ ಉಂಟಾಯಿತು.

ಅದಕ್ಕೆಂತಲೇ ಸದಾತನ, ಸರಳತನ ಮಾನವನಿಗೆ ಭೂಷಣ ಎಂದು ಹೇಳುವುದು. ಇಲ್ಲದ ಆಡಂಬರಿಗಳಾಗಬಾರದು. ಜೀವನದಲ್ಲಿ ಮಾಡಬೇಕಾದ ಒಳ್ಳೆ ಕೆಲಸಗಳಿರುವಾಗ ಫ್ಯಾಶನ್, ಧಿಮಾಕು ಮಾಡುವುದರಲ್ಲಿಯೇ ಈ ಜೀವನ ಕಳೆದರೆ ಯಾವ ಲಾಭ?