ಪ್ರಧಾನಿಯನ್ನು ಚೋರ್ ಎಂದ ನಟಿ, ಮಾಜಿ ಸಂಸದೆ ರಮ್ಯಾ ವಿರುದ್ಧ ಕಂಪ್ಲೇಂಟ್..!

0
510

ಮಾಜಿ ಸಂಸದೆ ರಮ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ.. ಸದಾ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರುವ ರಮ್ಯಾ ಈ ತಮ್ಮ ವಿರುದ್ಧ ದೂರು ದಾಖಲಾಗುವಂತೆ ಮಾಡಿಕೊಂಡಿದ್ದಾರೆ. ಪ್ರತಿ ಭಾರಿಯೂ ಮೋದಿ ವಿರುದ್ಧ ಒಂದಲ್ಲ ಒಂದು ಹೇಳಿಕೆ ನೀಡಿ ಟ್ವೀಟ್ ಮಾಡುವ ರಮ್ಯಾ ಈ ಸಲ ಪೇಚಿಗೆ ಸಿಕ್ಕಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ನಿಂದನಾತ್ಮಕ ಫೋಟೋಗಳನ್ನು ಹಾಕಿದ್ದ ಮಾಜಿ ಸಂಸದೆ ರಮ್ಯಾ ವಿರುದ್ಧ ಎಫ್ಐಆರ್ ದಾಖಲಾಗಿದೆ.

ರಫೇಲ್ ಒಪ್ಪಂದ ವಿವಾದಕ್ಕೆ ಸಂಬಂಧಿಸಿ ರಮ್ಯಾ ಪ್ರಧಾನಿ ಮೋದಿ ಅವರನ್ನು ಟೀಕಿಸಿ ಮಾಡಿದ ಟ್ವೀಟ್ ಗೆ ಸಂಬಂಧಿಸಿ ಉತ್ತರಪ್ರದೇಶದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ರಫೇಲ್‌ ಒಪ್ಪಂದದ ವಿಚಾರದಲ್ಲಿ ರಮ್ಯಾ ಅವರು ಮೋದಿ ಅವರ ಮೇಣದ ಪ್ರತಿಮೆ ಎದುರಿಗಿದ್ದ ಫೋಟೋ ಟ್ವೀಟ್‌ ಮಾಡಿ “ಚೋರ್‌ ಪಿಎಂ ಚುಪ್‌ ಹೇ” ಎಂದು ಬರೆದಿದ್ದರು. ಈ ಸಂಬಂಧ ರಮ್ಯಾ ಅವರನ್ನು ಈ ಪೋಸ್ಟ್ ಅಳಿಸುವಂತೆ ರಿಜ್ವಾನ್ ಎಂಬುವರು ಕೇಳಿಕೊಂಡಿದ್ದರು.. ಪ್ರಧಾನಿ ಪದವಿ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿದ್ದಲ್ಲ. ನರೇಂದ್ರ ಮೋದಿ ದೇಶಕ್ಕೆ ಪ್ರಧಾನಿಯಾಗಿದ್ದಾರೆ. ಹೀಗಾಗಿ ರಮ್ಯಾ ಟ್ವೀಟ್ ಮಾಡಿರುವುದು ದೇಶ ಮತ್ತು ಪ್ರಧಾನಿ ಪದವಿಗೆ ಮಾಡಿದ ಅವಮಾನ. ನನಗೂ ಬಿಜೆಪಿ ಅಥವಾ ಆರ್’ಎಸ್’ಎಸ್’ಗೂ ಯಾವುದೇ ಸಂಬಂಧವಿಲ್ಲ. ದೇಶದ ಬಗ್ಗೆ ಕಳಕಳಿಯಿರುವ ಸಾಮಾನ್ಯ ನಾಗರಿಕನಾಗಿ ಈ ಪ್ರಕರಣ ದಾಖಲಿಸುತ್ತಿದ್ದೇನೆ ಎಂದು ರಿಜ್ವಾನ್ ಹೇಳಿದ್ದಾರೆ. ಜೊತೆಗೆ ತಮ್ಮ ಟ್ವಿಟರ್ ಪೇಜ್’ನಲ್ಲಿ ರಮ್ಯಾ ವಿರುದ್ಧ ದಾಖಲಾದ ಎಫ್’ಐಆರ್ ಪ್ರತಿಯನ್ನ ಪ್ರಕಟಿಸಿದ್ದಾರೆ.

ಲಖನೌ ಮೂಲದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸೈಯದ್ ರಿಜ್ವಾನ್ ಅಹ್ಮದ್ ಉತ್ತರ ಪ್ರದೇಶದ ಗೋಮತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಈ ದೂರಿನನ್ವಯ ಗೋಮತಿನಗರ ಪೊಲೀಸರು ರಮ್ಯಾ ವಿರುದ್ಧ ಸೆಕ್ಷನ್ 67 ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆ, 2008 ಮತ್ತು ಸೆಕ್ಷನ್ 124ಎ ಅಡಿ ಎಫ್ಐಆರ್ ದಾಖಲಿಸಿದ್ದಾರೆ. ತಮ್ಮ ವಿರುದ್ಧ ಎಫ್​ಐಆರ್​ ದಾಖಲಾಗಿ, ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಟೀಕೆಗೆ ಗುರಿಯಾಗಿದ್ದರು. ಇದಕ್ಕೆ ಜಗ್ಗದ ರಮ್ಯಾ ಮತ್ತೊಮ್ಮೆ ‘ಪ್ರಧಾನಿ ಕಳ್ಳ’ ಎಂದು ಟ್ವೀಟ್​ ಮಾಡುವ ಮೂಲಕ ಟೀಕಾಕಾರರ ಬೆದರಿಕೆಗೆ ಬೆದರುವುದಿಲ್ಲ ಎಂದು ತೋರಿಸಿದ್ದಾರೆ.

“ನನ್ನ ಟ್ವೀಟ್​ಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಇದೇ ರೀತಿ ನಿಮ್ಮ ಸಹಕಾರವಿರಲಿ. ಮುಂದೆ ಕೂಡ ಇದೇ ಶೈಲಿಯಲ್ಲಿ ಟ್ವೀಟ್​ ಮುಂದುವರೆಸುತ್ತೇನೆ. ಭಾರತ ದೇಶದ್ರೋಹ ಕಾನೂನಿನಿಂದ ದೂರವಿರಬೇಕು. ಈ ಕಾನೂನು ಅನಾದಿಕಾಲದಿಂದ ಇದ್ದು, ಇದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ” ಎಂದು ಟ್ವೀಟ್​ ಮಾಡಿದ್ದಾರೆ.