ಕಾಲೇಜುಗಳು ತೆರೆದು ಒಂದು ವಾರಕ್ಕೆ 250 ಮಕ್ಕಳಲ್ಲಿ ಕೋಚಿಡ್‌ ಸೋಂಕು

0
149

ರಾಜ್ಯದಲ್ಲಿ ಕಾಲೇಜು ಆರಂಭದ ಬೆನ್ನಲ್ಲೇ ಬೆಂಗಳೂರಿನ 117 ವಿದ್ಯಾರ್ಥಿಗಳು ಸೇರಿ 250ಕ್ಕೂ ಹೆಚ್ಚು ವಿದ್ಯಾರ್ಥಿ ಹಾಗೂ ಕಾಲೇಜು ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ.

ಕಾಲೇಜು ಆರಂಭವಾದ ಐದೇ ದಿನದಲ್ಲೇ 117 ವಿದ್ಯಾರ್ಥಿಗಳು ಮತ್ತು 51 ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮಂಗಳೂರಿನಲ್ಲಿ 29, ಚಾಮರಾಜನಗರದಲ್ಲಿ 8 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪದವಿ, ಸ್ನಾತಕೋತ್ತರ ಪದವಿ, ಎಂಜನಿಯರಿಂಗ್ ಮತ್ತು ಡಿಪ್ಲೋಮಾ ಕಾಲೇಜುಗಳನ್ನು ಆರಂಭಿಸಲಾಗಿದ್ದರೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಇಂತಹ ಆತಂಕದ ನಡುವೆಯೇ ರಾಜ್ಯದಲ್ಲಿ ಶಾಲೆ ಮತ್ತು ಪದವಿ ಪೂರ್ವ ತರಗತಿಗಳು ಆರಂಭಿಸುವ ಸಂಬಂಧ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಚರ್ಚೆ ನಡೆಸಲಿದ್ದಾರೆ.

ಸೋಮವಾರ ಮಧ್ಯಾಹ್ನ 12 ಗಂಟೆಗೆ ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಶಾಲಾರಂಭದ ಕುರಿತು ಚರ್ಚೆ ನಡೆಯಲಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಆಯುಕ್ತ ಅನುಬ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಆರೋಗ್ಯ ಸಚಿವರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ಈಗಾಗಲೇ ಆರಂಭವಾಗಿದ್ದರೂ, ವಿದ್ಯಾರ್ಥಿಗಳ ಹಾಜರಾತಿ ಶೇ.15ರಷ್ಟು ದಾಟಿಲ್ಲ. ಕೊರೊನಾ ಆಂತಕ ಹಾಗೂ ಇತರೆ ಕಾರಣಕ್ಕಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿಲ್ಲ. ಆನ್ಲೈನ್ ಹಾಗೂ ಆಫ್ಲೈನ್( ಪೂರ್ವ ಮುದ್ರಿತ ವಿಡಿಯೋ ತರಗತಿ) ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮಧ್ಯೆ ಕೊರೊನಾ ಎರಡನೇ ಅಲೆಯ ಆತಂಕವೂ ಕೇಳಿ ಬರುತ್ತಿದೆ. ಹೀಗಾಗಿ ಶಾಲಾರಂಭಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.

ಶಾಲಾರಂಭದ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಶಿಕ್ಷಣ ತಜ್ಞರು, ಖಾಸಗಿ ಆಡಳಿತ ಮಂಡಳಿಯ ಸದಸ್ಯರು, ಆರ್ಟಿಇ ಪೋಷಕರ ಸಂಘದ ಪ್ರತಿನಿಧಿಗಳ ಅಭಿಪ್ರಾಯ ಪಡೆದು ವರದಿ ಸಿದ್ಧಪಡಿಸಿದೆಯಾದರೂ ಮುಖ್ಯಮಂತ್ರಿಗಳಿಗೆ ಇನ್ನೂ ಸಲ್ಲಿಸಿಲ್ಲ ಎನ್ನಲಾಗಿದೆ. ಎಸ್ಸೆಸ್ಸೆಲ್ಸಿ ಅಥವಾ 10ನೇ ತರಗತಿ ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸಬಹುದು ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಈಗಿನ ಸನ್ನಿವೇಶದಲ್ಲಿ ಡಿಸೆಂಬರ್ ಅಂತ್ಯದವರೆಗೂ ಶಾಲೆ ಆರಂಭಿಸುವುದು ಬೇಡ ಎಂದು ಕೊರೋನಾ ತಜ್ಞರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.