ಮುಂದಿನ ವರ್ಷ ಕರೋನ ಲಸಿಕೆಗಳು ಬರುತ್ತವೆಯಂತೆ, ಧೈರ್ಯದಿಂದ ನೀವು ಅದನ್ನು ತೆಗೆದುಕೊಳ್ಳುತ್ತೀರ??

0
427

ಡಿಸೆಂಬರ್ ಅಂತ್ಯ ಇಲ್ಲವೆ ಮುಂದಿನ 2021ರ ಮೊದಲ ಭಾಗದಲ್ಲಿ ಬಹು ನಿರೀಕ್ಷಿತ ಕೋವಿಡ್ 19 ಸೋಂಕಿಗೆ ಲಸಿಕೆ ದೊರೆಯುವ ನಿರೀಕ್ಷೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.

ಕೋವಿಡ್ ಲಸಿಕೆ ಕುರಿತ ಬೆಳವಣಿಗೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇಶದಲ್ಲಿನ ವಿವಿಧ ಬಗೆಯ ಲಸಿಕೆಗಳ ಪ್ರಿ-ಕ್ಲಿನಿಕಲ್ ಪರೀಕ್ಷೆ ವಿವಿಧ ಹಂತಗಳಲ್ಲಿದ್ದು, ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ ಎಂದು ಹೇಳಿದರು. ಈ ಪೈಕಿ 4 ಲಸಿಕೆಗಳ ಪರೀಕ್ಷೆ ಮೂರನೇ ಹಂತದಲ್ಲಿ ನಡೆಯುತ್ತಿದೆ. ಮೂರನೇ ಹಂತದ ಬಳಿಕ ಲಸಿಕೆಗಳ ಸಾಮರ್ಥ್ಯ ಮತ್ತು ಸುರಕ್ಷತೆಯನ್ನು ಪರಿಗಣಿಸಿ ಮಾನವ ಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.

ಇನ್ನು ಮುಂದಿನ ವರ್ಷದ ಆರಂಭದಲ್ಲಿ ಹಲವಾರು ಮೂಲಗಳಿಂದ ಕೋವಿಡ್-19 ಲಸಿಕೆ ಭಾರತಕ್ಕೆ ಬರುವ ಸಾಧ್ಯತೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ದೇಶದಲ್ಲಿ ಲಸಿಕೆಯನ್ನು ಯಾವ ರೀತಿಯಲ್ಲಿ ವಿತರಿಸಬೇಕು ಎಂಬುದರ ಬಗ್ಗೆ ತಜ್ಞರ ಗುಂಪು ಕಾರ್ಯತಂತ್ರವನ್ನು ರೂಪಿಸುತ್ತಿರುವುದಾಗಿ ಹೇಳಿದರು.

ಲಸಿಕೆಗಳು ಸಿದ್ಧವಾದ ನಂತರ ನ್ಯಾಯಯುತ ಮತ್ತು ಸಮಾನ ರೀತಿಯಲ್ಲಿ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಮಾಹಿತಿ ಸಂಗ್ರಹಿಸಲು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹರ್ಷ ವರ್ಧನ್ ಈ ಹಿಂದೆ ಹೇಳಿದ್ದರು.ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡುವುದು ಹೇಗೆ ಎಂಬುದು ನಮ್ಮ ಅತ್ಯಂತ ಆದ್ಯತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದ್ಯತೆಯ ನಾಗರಿಕ ಗುಂಪುಗಳನ್ನು ಗುರುತಿಸಲು ಗಣನೆಗೆ ತೆಗೆದುಕೊಳ್ಳಬೇಕಾದ ಪ್ರಮುಖ ಅಂಶಗಳ ಬಗ್ಗೆಯೂ ಇತ್ತೀಚಿಗೆ ಕೇಂದ್ರ ಸಚಿವರು ಮಾಹಿತಿ ನೀಡಿದ್ದರು.ಸೋಂಕಿನ ಅಪಾಯದಲ್ಲಿರುವ ವೃತ್ತಿಪರರು, ಗಂಭೀರ ಸ್ಥಿತಿಯಲ್ಲಿರುವವರು ಮತ್ತು ಹೆಚ್ಚಿನ ಮರಣ ಪ್ರಮಾಣದ ಅಂಶಗಳನ್ನು ಪರಿಗಣಿಸಿ ಆದ್ಯತೆಯ ಗುಂಪುಗಳಿಗೆ ಲಸಿಕೆಯನ್ನು ವಿತರಿಸಲಾಗುವುದು ಎಂದು ಡಾ. ಹರ್ಷವರ್ಧನ್ ತಿಳಿಸಿದ್ದರು.

ಕೋವಿಡ್-19 ಗೆ ಸಂಬಂಧಪಟ್ಟಂತೆ ಅತಿ ಹೆಚ್ಚು ಅಪಾಯಕಾರಿ ಸನ್ನಿವೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಹಾಗೂ ಹಿರಿಯ ನಾಗರಿಕರಿಗೆ ಮಾತ್ರ ಅನ್ವಯವಾಗುವಂತೆ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ದೃಢೀಕರಣ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಸರ್ಕಾರದ ಈ ಘೋಷಣೆ ಕೋವಿಡ್-19 ಲಸಿಕೆಗಳ ಕ್ಲಿನಿಕಲ್ ಟ್ರಯಲ್ ಗಳು 3 ನೇ ಹಂತ ಮುಕ್ತಾಯಗೊಳ್ಳುವುದಕ್ಕೂ ಮುನ್ನ, ಅವುಗಳ ಫಲಿತಾಂಶವನ್ನು ವಿಶ್ಲೇಷಿಸುವುದಕ್ಕೂ ಮುನ್ನ ನಿರ್ದಿಷ್ಟ ವಿಭಾಗದ ಜನರಿಗೆ ಮಾತ್ರವೇ ನೀಡಲಾಗುವ ಸಾಧ್ಯತೆಗಳಿವೆ ಎಂಬ ಸೂಚನೆಯನ್ನು ನೀಡಿದೆ.