ಸಂಸಾರ ನಡೆಸಲು ಹಣಕಾಸಿನ ಈ ಅಂಶಗಳನ್ನು ದಂಪತಿಗಳು ಅನುಸರಿಸಿದರೆ, ಸಂಸಾರ ನಿಭಾಯಿಸಲು ಸಲೀಸಾಗುತ್ತೆ!!

0
3462

ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿಯ ಪ್ರಕಾರ ಮದುವೆಗೆ ಮಹತ್ತರ ಸ್ಥಾನ ಇದೆ ಹಾಗೂ ವಿಶೇಷ ಗೌರವ ಪಡೆದಿದೆ. ಜೀವನದಲ್ಲಿ ನಮಗಾಗಿ ಬಾಳ ಸಂಗಾತಿ ಜೊತೆಯಾಗುತ್ತಾರೆ. ನಮ್ಮ ಪ್ರತಿ ಕಷ್ಟ, ಸುಖ-ದುಃಖ, ನೋವು-ನಲಿವಲ್ಲಿ ಕೈ ಹಿಡಿದು ಜೀವನ ಸಾಗಿಸುತ್ತಾರೆ. ಹೀಗೆ ಇಬ್ಬರೂ ಅನ್ಯೋನ್ಯವಾಗಿ ನೆಮ್ಮದಿಯಿಂದ ಜೀವನ ಸಾಗಿಸಬೇಕೆಂದರೆ ಹಣಕಾಸು ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ.

ಹಣಕಾಸು ದಾಂಪತ್ಯ ಜೀವನದಲ್ಲಿ ಎಷ್ಟು ಮುಖ್ಯ ಪಾತ್ರ ವಹಿಸುತ್ತದೆ ಹಾಗೂ ನೆಮ್ಮದಿ ಜೀವನ ನಡೆಸುವುದಕ್ಕೆ ಕೆಲವು ಅಂಶಗಳು ಇಲ್ಲಿವೆ :

  • ನೀವು ನಿಮ್ಮ ಸಂಗಾತಿಯೊಂದಿಗೆ ದಿನ ನಿತ್ಯದ ಖರ್ಚು – ವೆಚ್ಚಗಳನ್ನು ಅಗತ್ಯವಾಗಿ ಚರ್ಚಿಸಬೇಕು. ಇದರಿಂದಾಗಿ ಸಂಸಾರದಲ್ಲಿ ಉಂಟಾಗುವ ಆರ್ಥಿಕ ತೊಂದರೆಗಳನ್ನು ತಡೆಗಟ್ಟಬಹುದು.

  • ಪ್ರತಿಯೊಬ್ಬರ ಜೀವನದಲ್ಲೂ ವೈಯಕ್ತಿಕ ದೃಷ್ಟಿಕೋನಗಳಿರುತ್ತವೆ ಆದರೆ ಒಂದು ಸಾರಿ ವೈವಾಹಿಕ ಜೀವನ ಪ್ರಾರಂಭಿಸಿದ ನಂತರ ಹಣದ ಬಗ್ಗೆ ಇರುವ ಇಬ್ಬರ ದೃಷ್ಟಿಕೋನವನ್ನು ಬದಲಿಸಿ ಒಂದೇ ಪಥದಲ್ಲಿ ನಡೆದರೆ ಭದ್ರ ಅಡಿಪಾಯ ಹಾಕಲು ಸಹಕರಿಸುತ್ತದೆ ಮತ್ತು ಸಂಸಾರದ ತಕ್ಕಡಿ ಸಮವಾಗಿ ತೂಗುತ್ತದೆ.

  • ” ಹಾಸಿಗೆ ಇದ್ದಷ್ಟು ಕಾಲು ಚಾಚಿ ” ಎನ್ನುವ ಗಾದೆಯಂತೆ, ವೈವಾಹಿಕ ಜೀವನವನ್ನು ಯಾವುದೇ ವೈಯಕ್ತಿಕ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಗಳಿಲ್ಲದೆ, ದುಂದುವೆಚ್ಚ ಮಾಡದೆ ಹತೋಟೆಯಲ್ಲಿರಬೇಕು. ಒಂದು ವೇಳೆ ಸಾಲ ಮಾಡಿದ್ದಲ್ಲಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಾಲ ತೀರಿಸಿ ಮುಕ್ತರಾಗಬೇಕು.

  • ನೀವು ದಂಪತಿಗಳಿಬ್ಬರೂ ದುಡಿಮೆಯ ಮೇಲೆ ಅವಲಂಬಿತರಾಗಿದ್ದರೆ, ಒಬ್ಬರ ಸಂಬಳ ತಿಂಗಳ ಖರ್ಚಿಗೆ ಬಳಸಿದರೆ ಮತ್ತೊಬ್ಬರ ಸಂಬಳದಲ್ಲಿ ಆದಷ್ಟು ಉಳಿತಾಯ ಮಾಡಲು ಪ್ರಯತ್ನಿಸಿ. ಸಮಯ ಯಾವಾಗಲೂ ಒಂದೇ ರೀತಿಯಲ್ಲಿ ಇರುತ್ತದೆಂದು ನಂಬುವುದು ಕಷ್ಟ.

  • LIC Policy, Health Insurance ತರಹದ ಕೆಲವು ಪ್ಲಾನ್ಗಳನ್ನು ಮಾಡಿಕೊಳ್ಳಿ, ಇದು ಯಾವುದೇ ತುರ್ತು ಸಮಯದಲ್ಲಿ ಕೂಡಾ ನಿಮ್ಮ ಕೈ ಹಿಡಿಯುತ್ತದೆ ಹಾಗೂ ಯಾರೋ ಮೂರನೇ ವ್ಯಕ್ತಿಯ ಮೇಲೆ ಅವಲಂಬಿಸುವುದು ತಪ್ಪುತ್ತೆ.

  • ಮುಖ್ಯವಾಗಿ ಗಂಡ – ಹೆಂಡತಿಯ ಮಧ್ಯ ಮೇಲು – ಕೀಳು ಎಂಬ ತಾರತಮ್ಯ ಬರದಂತೆ ಕಾಪಾಡಿಕೊಳ್ಳಿ. ಒಂದು ಪಕ್ಷ ನಿಮ್ಮ ಪತ್ನಿಗೇ ನಿಮಗಿಂತ ಹೆಚ್ಚು ಸಂಬಳ ಬರುತ್ತಿದ್ದರೆ ಕೀಳರಿಮೆ ಭಾವನೆಯಲ್ಲಿ ಇರಬೇಡಿ ಬದಲಾಗಿ ಸಂಸಾರವನ್ನು ಹೆಚ್ಚು – ಕಡಿಮೆಯಿದ್ದರೂ ಸರಿದೂಗಿಸುವ ಪ್ರಯತ್ನ ಮಾಡಿ, ಒಬ್ಬರನ್ನೊಬ್ಬರು ಗೌರವಿಸಿ.

ಈ ಎಲ್ಲಾ ಮೇಲ್ಕಂಡ ಅಂಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ದಾಂಪತ್ಯ ಜೀವನ ನೆಮ್ಮದಿಯಿಂದ ಖುಷಿಯಾಗಿ ಮತ್ತು ಸುಖಕರವಾಗಿರುತ್ತದೆ.