ನಮ್ಮದೇಶದ ಅತೀ ದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬವನ್ನು ಎಂದು ಮತ್ತು ಹೇಗೆ ಆಚರಿಸಲಾಗುವುದು ಎಂಬುವುದು ನಿಮಗೆ ಗೊತ್ತಾ..!! ಇಲ್ಲಿ ನೋಡಿ…

0
1177

ನಮ್ಮದೇಶದ ಅತೀ ದೊಡ್ಡ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಕತ್ತಲನ್ನೋಡಿಸಿ ಬೆಳಕನ್ನು ತರುವ ಬೆಳಕಿನ ಹಬ್ಬದೀಪಾವಳಿ. ಮಂಗಳವಾರ ಸಂಜೆ ನೀರುತುಂಬುವ ಹಬ್ಬದಿಂದ ಆರಂಭಿಸಿ ಶನಿವಾರ (20-10-2017)ದವರೆಗೆ “ದೀಪಾವಳೀ ಹಬ್ಬದ” ಸಂಭ್ರಮ.

ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿ ಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ ೩ ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ.

ಮಂಗಳವಾರ (17-10-2017) ಸಂಜೆ “ನೀರುತುಂಬುವ ಹಬ್ಬ”. ಮನೆಯ ಸ್ನಾನಗೃಹದಲ್ಲಿರುವ ಹಂಡೆ (ಈಗ ಬಾಯ್ಲರ್, ಗೀಸರ್)ಯನ್ನು ಸ್ವಚ್ಛಶುಭ್ರಗೊಳಿಸಿ ರಂಗೋಲಿ ಕೆಮ್ಮಣ್ಣುಗಳಿಂದ ಅಲಂಕರಿಸಿ ಶುದ್ಧವಾದ ನೀರನ್ನು ತುಂಬುವ ಸಂಭ್ರಮ. ಈ ದಿನ ಹಾಗೂ ಮಾರನೇ ದಿನ ಪ್ರತಿಯೊಂದು ನೀರಿನಾಸರೆಯಲ್ಲಿರುವ ನೀರಿನಲ್ಲಿ ಗಂಗೆಯ ಧರ್ಮವಿರುವುದನ್ನು ಗುರುತಿಸಿದ ನಮ್ಮ ಮಹರ್ಷಿಗಳು ಗಂಗಾಸ್ನಾನದ ಫಲವನ್ನು ಪ್ರತಿಯೊಬ್ಬರೂ ಅನುಭವಿಸಿ ಆನಂದಿಸಲಿ ಎಂಬ ಅಪಾರ ಕರುಣೆಯಿಂದ ಈ ಸಂಪ್ರದಾಯವನ್ನು ತಂದಿದ್ದಾರೆ.

ಅಂತೆಯೇ ಎಣ್ಣೆಯಲ್ಲಿ ಸಾಕ್ಷಾನ್ಮಹಾಲಕ್ಷ್ಮೀಯ ಸಾನಿಧ್ಯವಿರುತ್ತದೆ ಆದ್ದರಿಂದ ಆಶ್ವಯುಜ ಕೃಷ್ಣ ಬುಧವಾರ ಚತುರ್ದಶಿಯಂದು ಬೆಳಿಗ್ಗೆ ಅಭ್ಯಂಗ(ಎಣ್ಣೇನೀರು) ಕಡ್ಡಾಯ. ಇದರಿಂದ ದೈಹಿಕ ದೈವಿಕ ಆಧ್ಯಾತ್ಮಿಕ ಲಾಭಗಳುಂಟು. ಇಂದು “ನರಕಚತುರ್ದಶಿ” ಎಂದು ಹಬ್ಬವನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣ ನರಕನೆಂಬ ರಾಕ್ಷಸನನ್ನು ಸಂಹರಿಸಿ ಅವನ ವಶದಲ್ಲಿದ್ದ 16000 ಕನ್ಯೆಯನ್ನು ಬಂಧಮುಕ್ತಗೊಳಿಸಿ ಅವರುಗಳಿಗೆ ಸದ್ಗತಿಯನ್ನು ಕರುಣಿಸಿದ ಶುಭದಿನದ ಸ್ಮರಣೆಯಲ್ಲಿ ಆಚರಿಸುವ ಶುಭಪರ್ವ.

ನಮಗೆ ಎರಡು ಮುಖಗಳುಂಟು. ಜೀವನದಲ್ಲಿ ಹೊರಮುಖವಾಗಿ ಮುನ್ನಡೆಯುವ ಮುಖವೊಂದಾದರೆ ಒಳಮುಖವಾಗಿ, ಹಿಮ್ಮುಖವಾಗಿ ಸಾಗಿ ನಮ್ಮ ಜೀವದ ಮೂಲನೆಲೆಯಾದ ಪರಮಾತ್ಮ ಪರಂಜ್ಯೋತಿಯನ್ನು ಪಡೆಯುವ ಪ್ರಯತ್ನದ ಹಾದಿ. ಮುಮ್ಮುಖ ನಡೆಯನ್ನು “ಪ್ರತ್ಯಙ್ಮುಖ” ಎಂದು ಕರೆದರೆ ಹಿಮ್ಮುಖ ನಡೆಯನ್ನು “ಪ್ರಾಗ್ಙ್ಮುಖ” ಎನ್ನುತ್ತಾರೆ.

ನರಕನೆಂಬ ರಾಕ್ಷಸ ಇದ್ದಿದ್ದು ಪ್ರಾಗ್ಜೋತಿಷಪುರದಲ್ಲಿ. ಈ ನಮ್ಮ ದೇಹವೇ ಪ್ರಾಗ್ಜೋತಿಷಪುರ. ಈ ನಮ್ಮ ದೇಹದೊಳಗೆ ಚೈತನ್ಯಸ್ವರೂಪಿಯಾಗಿ ಆತ್ಮಜ್ಯೋತಿ ಬೆಳಗುತ್ತಿದೆ. ಆ ಜ್ಯೋತಿಯೇ ನಮ್ಮೆಲ್ಲ ಚಟುವಟಿಕೆಗಳಿಗೆ ಮೂಲಕಾರಣ. ನಮ್ಮಲ್ಲಿರುವ ರಜೋಗುಣ ತಮೋಗುಣಗಳೇ ರಾಕ್ಷಸರು. ಈ ರಾಕ್ಷಸೀ ಗುಣಗಳು ನಮ್ಮೊಳಗಿರುವ ಆತ್ಮದ ಸಂಪರ್ಕಕ್ಕೆ ಬಾರದಂತೆ ನಮ್ಮ ದೇಹೇಂದ್ರಿಯಗಳಲ್ಲಿ ತಡೆಯೊಡ್ಡಿ ಆ ಸೌಖ್ಯದಿಂದ ವಂಚಿತರನ್ನಾಗಿ ಮಾಡುತ್ತವೆ. ನಮ್ಮ ದೇಹೇಂದ್ರಿಯಗಳು ಆತ್ಮಸೌಖ್ಯವನ್ನು ಅನುಭವಿಸುವುದು ಪ್ರಮುಖವಾಗಿ 16000ನಾಡಿಗಳ ಮೂಲಕ. ಆ 16000ನಾಡಿಗಳನ್ನೇ ಕನ್ಯೆಯರೆಂದು ಕಥೆಯಲ್ಲಿ ಹೇಳಿರುವುದು. ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳೆಂಬ ರಾಕ್ಷಸೀ ಗುಣಗಳು ಈ 16000ನಾಡಿಗಳ ಮೇಲೆ ತಮ್ಮ ಪ್ರಭಾವ ಬೀರಿ ನಮ್ಮನ್ನು ಆತ್ಮಸುಖದಿಂದ ದೂರಮಾಡುತ್ತವೆ. ಆ ರಾಕ್ಷಸೀ ಗುಣಗಳನ್ನು ಶ್ರೀಕೃಷ್ಣ ಸಂಹರಿಸಿ 16000ನಾಡೀರೂಪರಾದ ನಾರಿಯರಿಗೆ ಸದ್ಗತಿಯನ್ನು ತೋರುತ್ತಾನೆ ಎಂಬುದೇ ನರಕಾಸುರವಧೆಯ ಹಿಂದಿರುವ ಮರ್ಮ.

ಗುರುವಾರ(19-10-2017) ಅಮಾವಾಸ್ಯೆಯಂದು ಹೊರಗೆ ಕತ್ತಲು ಇರುವುದಾದರೂ ಅಂದು ಪ್ರಕೃತಿಮಾತೆಯಾದ ಶ್ರೀಮಹಾಲಕ್ಷ್ಮೀಯು ತನ್ನ ಪೂರ್ಣಾನುಗ್ರಹವನ್ನು ಹರಿಸಿ ಹರಸುವ ಶುಭದಿನ. ಅಂದು ಈಕೆಯನ್ನು ಪೂಜಿಸಿ ಸಂತುಷ್ಟಗೊಳಿಸುವುದರಿಂದ ಶರೀರಸಂಪತ್ತು, ದೈವೀಕಸಂಪತ್ತು, ಆಧ್ಯಾತ್ಮಿಕ ಸಂಪತ್ತು, ಧನಧಾನ್ಯಸಂಪತ್ತು ಸುಖ ಶಾಂತಿ ನೆಮ್ಮದಿಯ ಸಂಪತ್ತನ್ನಿತ್ತು ಹರಸುವ ಸುದಿನ.

ಕೆಲವರು ಅಮಾವಾಸ್ಯೆಯ ಇಡೀ ರಾತ್ರಿ ಜಾಗರಣೆ ಮಾಡಿ ಲಕ್ಷ್ಮೀ ದೇವಿಯ ಮುಂದಿನ ದೀಪ ನಂದದಂತೆ ನೋಡಿ ಕೊಳ್ಳುವುದು ಸಾಮಾನ್ಯ. ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಪಗಡೆ ಆಟ ಸೇರಿದಂತೆ ವಿವಿಧ ಗ್ರಾಮೀಣ ಸೊಗಡಿನ ಆಟಗಳನ್ನು ಇಡೀ ರಾತ್ರಿ ಆಡುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ.

ಮಾರನೆಯ ದಿನ ಶುಕ್ರವಾರ (19-10-2017) “ಬಲಿಪಾಡ್ಯಮಿ”. ನಮ್ಮ ದೇಹ ಸುಸ್ಥಿತಿಯಲ್ಲಿ ಕೆಲಸ ಮಾಡಲು ಮೂರು ಶಕ್ತಿಗಳು ಅತ್ಯವಶ್ಯ. ಅದೇ ವಾತ ಪಿತ್ತ ಹಾಗೂ ಕಫ. ಈ ಮೂರೂ ಸುಸ್ಥಿತಿಯಲ್ಲಿದ್ದಾಗಲೇ ದೇಹ ಸುಸ್ಥಿತಿಯಲ್ಲಿರುವುದು. ಈ ವಾತ ಪಿತ್ತ ಕಫಗಳಿಗೆ ದೇಹದಲ್ಲಿ ಅವುಗಳದ್ದೇ ಆದ ಸ್ಥಾನಗಳುಂಟು. ಕೆಲವೊಮ್ಮೆ ಅವು ಸ್ಥಾನಪಲ್ಲಟಗೊಂಡು ದೇಹದಲ್ಲಿ ಅನಾರೋಗ್ಯವನ್ನುಂಟುಮಾಡಿ ತನ್ಮೂಲಕ ಮಾನಸಿಕ ಆಧ್ಯಾತ್ಮಿಕ ತಾಪಗಳಿಗೂ ಕಾರಣವಾಗುವುದುಂಟು. ಹಾಗೆ ವ್ಯತ್ಯಾಸಗೊಂಡ ಗುಣಗಳನ್ನು ಮತ್ತೆ ಮರಳಿ ಸುಸ್ಥಿತಿಗೆ ತರುವುದೇ ಬಲೀಂದ್ರನನ್ನು ಶ್ರೀವಿಷ್ಣುವು ವಾಮನಾವತಾರದಲ್ಲಿ ಪಾತಾಳಲೋಕಕ್ಕೆ ಮೆಟ್ಟಿದ ಕಥೆಯ ಹಿಂದೆ ಇರುವ ಮಾರ್ಮಿಕತೆ.

ಶುಕ್ರವಾರ (20-10-2017) ಬಿದಿಗೆಯಂದು ಧರ್ಮದೇವತೆಯಾದ ಸಾಕ್ಷಾತ್ ಯಮಧರ್ಮರಾಯ ತನ್ಮ ಸೋದರೀಯಾದ ಯಮುನಾದೇವಿಯ ಮನೆಗೆ ಬಂದು ಆಕೆಯನ್ನು ಸಂತೋಷಗೊಳಿಸಿ ಅನುಗ್ರಹಿಸಿ ಅವಳಿಂದ ಸತ್ಕೃತನಾದ ಶುಭದಿನ. ಇದನ್ನು “ಯಮದ್ವಿತೀಯಾ” ಅಥವಾ “ಸೋದರಬಿದಿಗೆ” ಎಂದು ಕರೆಯುತ್ತಾರೆ. ಇಂದು ಸೋದರರು ತಮ್ಮ ಸೋದರಿಯರ ಮನೆಗೆ ತೆರಳಿ ಅವರಿಗೆ ಶುಭವನ್ನು ಕೋರಿ ಅವರಿಂದ ಸತ್ಕೃತರಾಗಿ ಆನಂದಿಸಿ ಸಂಭ್ರಮಿಸುವ ಶುಭದಿನ.