ಮದುವೆ ಮಂಟಪದಲ್ಲಿ ವರದಕ್ಷಿಣೆ ಕೇಳಿದಕ್ಕೆ ಮದುವೆಯನ್ನೇ ಬೇಡ ಎಂದ ವಧು..

0
792

ವರದಕ್ಷಿಣೆ, ವರೋಪಚಾರಕ್ಕೆ ಬೇಡಿಕೆ ಇಟ್ಟ ವರನಿಗೆ ‘ಗೆಟ್ ಔಟ್’ ಎಂದ ವಧು ಮಂಟಪದಿಂದ ಹೊರ ಕಳಿಸಿದ ಘಟನೆ ಮುರಾದಾಬಾದ್ ನಲ್ಲಿ ನಡೆದಿದೆ.

ಬೆಂಗಳೂರು ಮೂಲದ ಇಂಟೀರಿಯರ್ ಡಿಸೈನರ್ ಆಶೀಶ್ ಮತ್ತು ಚಂಡೀಗಢದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಎಂ.ಟೆಕ್ ನಲ್ಲಿ ಚಿನ್ನದ ಪದಕ ಪಡೆದಿರುವ ಜ್ಯೋತಿ ಅವರ ಮದುವೆ ಮುರಾದಾಬಾದ್ ನ ಪಾರ್ಕ್ ಸ್ಕ್ವೇರ್ ಹೋಟೆಲ್ ನಲ್ಲಿ ಡಿಸೆಂಬರ್ 14 ರಂದು ನಡೆಯಬೇಕಿತ್ತು.

ಮದುವೆ ಮಂಟಪದಲ್ಲಿ ಆಶೀಶ್ ಕುಟುಂಬದವರು 15 ಲಕ್ಷ ರೂ. ನಗದು, ಕಾರು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆಶೀಶ್ ತಂದೆ ಈ ಬೇಡಿಕೆ ಇಟ್ಟಿದ್ದು, ಅಷ್ಟೊಂದು ವರದಕ್ಷಿಣೆ ಕೊಡುವ ಸಾಮರ್ಥ್ಯ ತಮಗಿಲ್ಲ ಎಂದು ಜ್ಯೋತಿಯ ತಂದೆ ಕಮಲ್ ಸಿಂಗ್ ತಿಳಿಸಿದ್ದಾರೆ. ತನ್ನ ತಂದೆ ಅವರೊಂದಿಗೆ ಅಂಗಲಾಚುವುದನ್ನು ಗಮನಿಸಿದ ಜ್ಯೋತಿ, ಆಶೀಶ್ ನನ್ನು ಕರೆದು ಮಾತನಾಡಿದ್ದಾರೆ.

ನಾವಿಬ್ಬರೂ ವಿದ್ಯಾವಂತರಾಗಿರುವುದರಿಂದ ದುಡಿದು ಹಣ ಸಂಪಾದಿಸಬಹುದೆಂದು ಸಲಹೆ ನೀಡಿದ್ದಾರೆ. ಇದಕ್ಕೆ ಒಪ್ಪದಿದ್ದಾಗ, ಮದುವೆಯನ್ನು ನಿಲ್ಲಿಸಿ ವರ ಹಾಗೂ ಆತನ ಕಡೆಯವರನ್ನು ಮಂಟಪದಿಂದಲೇ ಹೊರಗೆ ಕಳಿಸಿದ್ದಾರೆ.

ಆಶೀಶ್ ಹಾಗೂ ಆತನ ತಂದೆಯ ವಿರುದ್ಧ ವಝೋಲಾ ಠಾಣೆಗೆ ದೂರು ನೀಡಲಾಗಿದೆ. ವರದಕ್ಷಿಣೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಒಟ್ನಲ್ಲಿ ಹೆಣ್ಣೊಬ್ಬಳು ಮನಸ್ಸು ಮಾಡಿದರೆ ಏನ್ಬೇಕಾದೂ ಮಾಡಬಹುದು ಅನ್ನೋದಕ್ಕೆ ಜ್ಯೋತಿ ಉತ್ತಮ ನಿದರ್ಶನವಾಗಿದ್ದಾಳೆ. ಇವರ ಈ ಒಳ್ಳೆಯ ನಿರ್ಧಾರಕ್ಕೆ ನಮ್ಮದೊಂದು ಸಲಾಂ.