ಯುವಪೀಳಿಗೆಗೆ ಸ್ಪೂರ್ತಿಯಾಗಿರುವ ಗ್ರಾಮೀಣ ಪ್ರತಿಭೆ ಡಾ. ಸ್ನೇಹ ರಾಕೇಶ್-ಗೆ ಜಾಗತಿಕ ಫೋರ್ಬ್ಸ್ ಪತ್ರಿಕೆಯ ಗೌರವ!!

0
565

ಇತ್ತೀಚಿನ ದಿನಗಳಲ್ಲಿ ಉದ್ಯಮಶೀಲತೆಯತ್ತ ಮುಖ ಮಾಡುತ್ತಿರುವ ಮಹಿಳೆಯರ ಪ್ರಮಾಣ ಹೆಚ್ಚುತ್ತಿದೆ. ದೇಶದ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಮಹಿಳಾ ಉದ್ಯಮಿಗಳ ಪಾಲು ಹೆಚ್ಚುತ್ತಿದೆ. ಮನೆಯ ಮಾತಗಿರದೆ, ದೇಶದ ಆರ್ಥಿಕತೆಯಲ್ಲೂ ಸಿಂಹಪಾಲು ಪಡೆಯುತ್ತಿದ್ದಾರೆ ಈ ಸಾಹಸಿ ಮಹಿಳೆಯರು. ತೊಟ್ಟಿಲು ತೂಗುವ ಕೈ ಈಗ ಉದ್ಯಮ ವಲಯದಲ್ಲೂ ಮೇಲಾಗುತ್ತಿದೆ. ಇವತ್ತಿಗೆ ವಿಶ್ವದಾದ್ಯಂತ, ಅನೇಕ ರಾಷ್ಟ್ರಗಳಲ್ಲಿ, ರಾಜ್ಯಗಳಲ್ಲಿ, ನಗರ-ಪಟ್ಟಣಗಳಲ್ಲಿ ಮಹಿಳಾ ಉದ್ಯಮಿಗಳ ಗುಣಗಾನ, ಯಶಸ್ಸಿನ ಅವಲೋಕನಗಳು ಸಾಗಲಿವೆ. ಹೀಗೆ ಮಹಿಳೆಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತಿದ್ದಾರೆ ಇದು ಹೆಮ್ಮೆಯ ವಿಚಾರವಾಗಿದ್ದು, ಇದಕ್ಕೆ ಪ್ರತ್ಯಕ್ಷೆ ಸಾಕ್ಷಿ ಎಂದರೆ. ಸ್ನೇಹಾ ರಾಕೇಶ್.

ಮೂಲತಹ ಹಾಸನದ ಅಪ್ಪಟ ಗ್ರಾಮೀಣ ಪ್ರತಿಭೆ ಈ ಡಾ. ಸ್ನೇಹ ರಾಕೇಶ್. ಇವರ ಸಾಕಷ್ಟು ಸವಾಲುಗಳನ್ನು ಎದುರಿಸಿಯೇ ತಂತ್ರಜ್ಞಾನ ಕ್ಷೇತ್ರದಲ್ಲಿ 2018ರ ಸಾಲಿನ ದೇಶದ ಪ್ರಬಲ ಮಹಿಳೆಯರಲ್ಲಿ 6ನೇ ಸ್ಥಾನ ಪಡೆದುಕೊಂಡು 22ನೇ ವಯಸ್ಸಿನಲ್ಲೇ ಅಕರ್ವಾಕ್ಸ್ ಟೆಕ್ನಾಲಜಿ ಪ್ರವೇಟ್ ಲಿಮಿಟೆಡ್ ಎನ್ನುವ ಐಟಿ ಕಂಪನಿಯನ್ನು ಸ್ಥಾಪಿಸಿದ ಇವರು ಅಪ್ಪಟ ಕನ್ನಡತಿ ಎನ್ನುವುದು ಹೆಮ್ಮೆಯಾಗಿದೆ. ಇವರ ಸಾಧನೆಯನ್ನು ಜಾಗತಿಕ ಪೋಬ್ಸ್ ಪತ್ರಿಕೆ ಗುರುತಿಸಿದ್ದು, ಕರುನಾಡಿನ ಮಹಿಳಾ ಉದ್ಯಮಿಯ ಸಾಧನೆಯನ್ನು ಜಗತ್ತಿಗೆ ಪಸರಿಸಿದೆ.

ಡಾ. ಸ್ನೇಹ ರಾಕೇಶ್ ಅವರ ಬಾಲ್ಯದ ದಿನಗಳು

ಹುಟ್ಟೂರು ಹಾಸನದ ಚೆನ್ನರಾಯಪಟ್ಟಣ ತಾಲೂಕಿನ ಹುಲ್ಲೇನಹಳ್ಳಿ. ಸರ್ಕಾರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ಸ್ವಂತ ಉದ್ಯಮ ಪ್ರಾರಂಭಿಸಬೇಕೆಂಬ ಕನಸು ಕಂಡು ಬಾಲ್ಯದಲ್ಲಿ ವಿವಿಧ ಕಷ್ಟಗಳನ್ನು ಅನುಭವಿಸಿರುವ ಸ್ನೇಹಾ ಅವರ ಮನೋಸ್ಥೈರ್ಯ ಮಾತ್ರ ಯಾವತ್ತೂ ಕುಗ್ಗಿಲ್ಲ, ತಾತನ ಮಾರ್ಗದರ್ಶನದಲ್ಲೇ ಬೆಳೆದವರು. ಹೀಗೆ ಸರ್ಕಾರಿ ಹಾಸ್ಟಲ್ನಲ್ಲಿದ್ದುಕೊಂಡು ಡಿಪ್ಲೊಮಾ ಓದಿ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡಾಗ ಎಲ್ಲೂ ದೀರ್ಘಕಾಲ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹಳ್ಳಿಯಿಂದ ಬಂದಿದ್ದರಿಂದ ಸಂವಹನ ಕೌಶಲವೂ ಅಷ್ಟೇನೂ ಉತ್ತಮವಾಗಿರಲಿಲ್ಲ. ಹಾಗೆಂದು ಸುಮ್ಮನೆ ಕೂರದೆ ಉದ್ಯೋಗದ ಜತೆಜತೆಗೆ ಎಜುಕೇಶನ್ ಲೋನ್ ಪಡೆದು ಶ್ರಮವಹಿಸಿ ಇಂಜಿನಿಯರಿಂಗ್ ಪದವಿ ಹಾಗೂ ರಾಮಯ್ಯ ಕಾಲೇಜಿನಲ್ಲಿ ಎಂಎಸ್ಸಿ ಪೂರ್ಣಗೊಳಿಸಿದರು. ವಿದ್ಯಾಭ್ಯಾಸದ ಜತೆಗೇ ಆನ್ಲೈನ್ನಲ್ಲಿ ಫ್ರೀಲಾನ್ಸರ್ಆಗಿ ಪ್ರಾಜೆಕ್ಟ್ ಪ್ರಾರಂಭದಲ್ಲಿ ಆರ್ಥಿಕ ಸಮಸ್ಯೆ ಕಾಡಿತು.

ಡಾ. ಸ್ನೇಹ ರಾಕೇಶ್ ಅವರ ಸಾಧನೆಯ ಹಾದಿ

ಹಾಸನದ ಶ್ರೀಮತಿ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲಮೋ, ಎಂ.ಎಸ್.ರಾಮಯ್ಯ ಸ್ಕೂಲ್ ಆಪ್ ಅಡ್ವಾನ್ಸ್ ಸ್ಟಡೀಸ್ ನಲ್ಲಿ ಎಂ.ಎಸ್.ಸಿ. ಇಂಜಿನಿಯರಿಂಗ್ ಶಿಕ್ಷಣ ಪೂರೈಸಿದರು. ತಮ್ಮ 19ನೇಯ ವಯಸ್ಸಿನಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿ ನೇಮಕಗೊಂಡರು. ಪ್ರಮುಖ ಐದು ಕಂಪೆನಿಗಳಲ್ಲಿ ಕೆಲಸ ಮಾಡಿ ನಂತರ ಉದ್ಯಮಿಯಾಗಿ ಹೊರ ಹೊಮ್ಮಿದರು. ಮಾರಾಟ ವಿಭಾಗ, ವ್ಯಾಪಾರ ಕಾರ್ಯತಂತ್ರ, ವ್ಯಾಪಾರ ಅಭಿವೃದ್ಧಿ, ವ್ಯಾಪಾರ ವಹಿವಾಟು ವಿಸ್ತರಣೆಯಂತಹ ಉದ್ಯಮಿಯಾಗಲು ಬೇಕಿರುವ ಕೌಶಲ್ಯಗಳನ್ನು ಮೈಗೂಡಿಸಿಕೊಂಡರು. ಕೆಲಸದ ಜತೆಗೆ ಕಂಪ್ಯೂಟರ್ ಸೈನ್ಸ್ ಮತ್ತು ನೆಟ್ ವರ್ಕಿಂಗ್ ನಲ್ಲಿ ಮಾಸ್ಟರ್ ಡಿಗ್ರಿ ಗಳಿಸಿ ಇನ್ನಷ್ಟು ನೈಪುಣ್ಯತೆ ಪಡೆದರು.

ಈಗ ಇವರೇ ಯುವ ಸಮೂಹಕ್ಕೆ ಕೌಶಲ್ಯ ತರಬೇತಿ ನೀಡುವ, ನಿರುದ್ಯೋಗ ನಿವಾರಿಸುವ, ಉಜ್ವಲ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ಸ್ನೇಹಾರ ಅಕರ್ವಾಕ್ಸ್ ಕಂಪನಿ ವೆಬ್ ರಿಸರ್ಚ್, ಆಪ್ ಡೆವಲಪ್ವೆುಂಟ್, ಸಾಫ್ಟ್ವೇರ್ ಡೆವಲಪ್ವೆುಂಟ್, ವೆಬ್ ಬೇಸ್ಡ್ ಸಾಫ್ಟ್ವೇರ್ ಡೆವಲಪ್ವೆುಂಟ್, ಪ್ರಾಜೆಕ್ಟ್ ಔಟ್ಸೋರ್ಸ್, ಇನ್ಫಾಮೇಷನ್ ಟೆಕ್ನಾಲಜಿ, ಡಿಜಿಟಲ್ ಮಾರ್ಕೆಟಿಂಗ್ ಸರ್ವೀಸಸ್ ಇತ್ಯಾದಿ ಸೇವೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಯುವ ಜನಾಂಗದ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಲು ತರಬೇತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುತ್ತಿದ್ದಾರೆ. 2019ರ ಜೂನ್ ನಲ್ಲಿ ಅಂತಾರಾಷ್ಟ್ರೀಯ ಮ್ಯಾಗಜಿನ್ ಬ್ಯುಸಿನೆಸ್ ಕನೆಕ್ಟ್ ನ ಉತ್ತಮ ಮಹಿಳಾ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಡಾ. ಸ್ನೇಹ ರಾಕೇಶ್ ಅವರ ಪ್ರಶಸ್ಥಿ

ಸ್ನೇಹಾರವರ ಸಾಧನೆಗೆ ಗ್ಲೋಬಲ್ ಅಚೀವರ್ ಮಹಾತ್ಮ ಗಾಂಧಿ ಲೀಡರ್ಷಿಪ್ ಅವಾರ್ಡ್(ಹೌಸ್ ಆಫ್ ಕಾಮನ್ಸ್, ಬ್ರಿಟಿಷ್ ಪಾರ್ಲಿಮೆಂಟ್, ಯುಕೆ), ಇಂಟರ್ನ್ಯಾಷನಲ್ ಅಚೀವರ್ ಅವಾರ್ಡ್ (ಬ್ಯಾಂಕಾಕ್), ಹಿಂದು ರತ್ನ ಅವಾರ್ಡ್ (ದೆಹಲಿ), ನ್ಯಾಚುರಲ್ ರಿಸೋರ್ಸ್ ಆಫ್ ಇಂಡಿಯಾ ಅವಾರ್ಡ್(ಚಂಡೀಗಢ), ಕಾಯಕ ರತ್ನ ಪ್ರಶಸ್ತಿ, ಕೆಂಪೇಗೌಡ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಯುವ ಪುರಸ್ಕಾರ, ವರ್ಷದ ಮಹಿಳಾ ಸಾಧಕಿ(2018) ಅಲ್ಲದೆ ಸಾಕಷ್ಟು ಪುರಸ್ಕಾರಗಳು ಸ್ನೇಹಾ ಅವರಿಗೆ ಸಂದಿವೆ.