ಒಣದ್ರಾಕ್ಷಿ ನೆನೆಸಿದ ನೀರಿನಲ್ಲಿರುವ ಔಷಧಿ ಗುಣಗಳು.

0
13281

ಒಣದ್ರಾಕ್ಷಿ ಎಂದರೆ ನಾವೆಲ್ಲರೂ ಸಿಹಿತಿಂಡಿಯ ಸೊಗಡು ಹೆಚ್ಚಿಸುವ ಪದಾರ್ಥವೆಂದೇ ಪರಿಗಣಿಸಿದ್ದೇವೆ. ಆದರೆ ಒಣದ್ರಾಕ್ಷಿಯನ್ನು ನೆನೆಸಿಟ್ಟ ನೀರು ಮಾತ್ರ ಆರೋಗ್ಯಕ್ಕೆ ತುಂಬಾ ಉತ್ತಮ.

ಅದರಲ್ಲೂ ವಿಶೇಷವಾಗಿ ಯಕೃತ್ತಿನ ಅಥವಾ ಲಿವರ್‌ನ ಆರೋಗ್ಯ ಈ ನೀರಿನ ನಿಯಮಿತ ಸೇವನೆಯಿಂದ ಉತ್ತಮಗೊಳ್ಳುತ್ತದೆ. ಯಕೃತ್‌ನ ಸ್ವಚ್ಛತೆಗೆ ಕೆಲವಾರು ವಿಧಾನಗಳಿವೆ. ಆದರೆ ಒಣದ್ರಾಕ್ಷಿ ನೆನೆಸಿದ ನೀರು ನೀಡುವಂತಹ ಪರಿಣಾಮವನ್ನು ಉಳಿದವು ನೀಡಲಾರವು.

ಈ ನೀರಿಗೆ ಒದಗಿರುವ ಔಷಧೀಯ ಪರಿಣಾಮಕ್ಕೆ ಒಣದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಕಾರಣ. ಈ ನೀರನ್ನು ಸೇವಿಸತೊಡಗಿದ ನಾಲ್ಕೇ ದಿನದಲ್ಲಿ ನಿಮ್ಮ ಜೀರ್ಣಕ್ರಿಯೆ ಉತ್ತಮಗೊಂಡಿರುವುದನ್ನು ಗಮನಿಸಬಹುದು. ಅಲ್ಲದೇ ದಿನದ ಚಟುವಟಿಕೆಗಳು ಹೆಚ್ಚು ಉಲ್ಲಾಸದಾಯಕವಾಗಿಯೂ ಇರುತ್ತದೆ. ಬನ್ನಿ, ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ….

ಒಣದ್ರಾಕ್ಷಿ ಹೀಗಿರಬೇಕು? ಇವು ತುಂಬಾ ಹೊಳಪುಳ್ಳದ್ದಾಗಿರಬಾರದು. ಅತಿ ಪ್ರಖರ ಬಣ್ಣದ್ದೂ ಆಗಿರಬಾರದು. ಏಕೆಂದರೆ ಈ ಹೊಳಪು ಬರಲಿಕ್ಕೆ ಕೆಲವರು ಕೃತಕ ರಾಸಾಯನಿಕಗಳನ್ನು ಬಳಸಿರಬಹುದು. ಆದರೆ ಗಾಢ ಕಂಡು ಬಣ್ಣಕ್ಕಿದ್ದು ಹೊಳಪು ಇಲ್ಲದೇ ಸಾಕಷ್ಟು ಸಂಕುಚಿತವಾಗಿರುವ ಒಣದ್ರಾಕ್ಷಿ ಉತ್ತಮ. ಇವು ಅತಿ ಗಟ್ಟಿಯಾಗಿಯೂ ಇರಬಾರದು, ತೀರಾ ಮೃದುವಾಗಿಯೂ ಇರಬಾರದು. ಅಷ್ಟೇ ಅಲ್ಲ, ಇದರಲ್ಲಿ ಮಣ್ಣು, ಮರಳು, ಧೂಳು ಮೊದಲಾದವು ಇಲ್ಲವೆಂದೂ ಖಚಿತಪಡಿಸಿಕೊಳ್ಳಿ.

ಅಗತ್ಯವಿರುವ ಸಾಮಾಗ್ರಿಗಳು

*ನೀರು ಎರಡು ಕಪ್
*ಒಣದ್ರಾಕ್ಷಿ ಒಂದಿಷ್ಟು (ಸುಮಾರು 8 ರಿಂದ 10ರಷ್ಟು ಸಾಕು)

ತಯಾರಿಸುವ ವಿಧಾನ

ಮೊದಲಿಗೆ ಒಣದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು ಬದಿಯಲ್ಲಿಡಿ

ಒಂದು ಚಿಕ್ಕ ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿಮಾಡಿ. ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆಯೇ ಒಣದ್ರಾಕ್ಷಿಯನ್ನು ಹಾಕಿ ಉರಿ ಚಿಕ್ಕದಾಗಿಸಿ. ಇಪ್ಪತ್ತು ನಿಮಿಷ ಕುದಿಸಿ. ಬಳಿಕ ಉರಿ ಆರಿಸಿ ಇಡಿಯ ರಾತ್ರಿ ಹಾಗೇ ಬಿಡಿ.

ಮರುದಿನ ಬೆಳಿಗ್ಗೆ ಈ ನೀರನ್ನು ಮತ್ತೊಮ್ಮೆ ಉಗುರುಬೆಚ್ಚಗಾಗುವವರೆಗೆ ಬಿಸಿಮಾಡಿ ಬೆಳಗ್ಗಿನ ಪ್ರಥಮ ಆಹಾರವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ನಂತರ ಬಳಿಕ ಸುಮಾರು ಮೂವತ್ತರಿಂದ ಮೂವತ್ತೈದು ನಿಮಿಷಗಳ ಕಾಲ ಏನನ್ನೂ ಸೇವಿಸಬೇಡಿ. ಬಳಿಕ ನಿಮ್ಮ ನಿತ್ಯದ ಉಪಾಹಾರ ಸೇವಿಸಿ.

ಎರಡು ತಿಂಗಳ ಬಳಿಕ….

ಈ ವಿಧಾನವನ್ನು ಕೆಲವಾರು ದಿನಗಳಾದರೂ ಸತತವಾಗಿ ಮಾಡಬೇಕು. ಕನಿಷ್ಠ ನಾಲ್ಕು ದಿನಗಳಾದರೂ ಸರಿ. ಸುಮಾರು ಎರಡು ತಿಂಗಳ ಬಳಿಕ ನಿಮ್ಮ ಆರೋಗ್ಯದಲ್ಲಿ, ವಿಶೇಷವಾಗಿ ಯಕೃತ್‌ಗಳಲ್ಲಿ ಉತ್ತಮ ಪ್ರಗತಿಯಾಗಿರುವುದನ್ನು ಕಾಣಬಹುದು.