ಐನ್‍ಸ್ಟೈನ್ ಮೆದುಳಿನ ಕಥೆಗೆ 50 ವರ್ಷ!!

0
1098

ನಿಮಗೆ ಆಲ್ಬರ್ಟ್ ಐನ್‍ಸ್ಟೈನರ ಮೆದುಳಿನ ಕಥೆ ಗೊತ್ತೆ? 20ನೇ ಶತಮಾನದ ಅತ್ಯದ್ಭುತ ಚಿಂತಕರ ಪೈಕಿ ಮೊದಲ ಸಾಲಿನ ಹೆಸರು ವಿಶ್ವವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೈನ್ ಅವರದು ಎನ್ನಬೇಕು. ಅವರು ಸತ್ತ ನಂತರ ಅವರ ಮೆದುಳನ್ನು ವಿವಾದಾತ್ಮಕ ರೀತಿಯಲ್ಲಿ ಸಂಶೋಧನೆಗೆ ಒಳಪಡಿಸಲಾಯಿತು ಎಂಬುದು ನಿಮಗೆ ಗೊತ್ತಿರಬಹುದು.

ಚಿಕ್ಕ ವಯಸ್ಸಿನಲ್ಲಿ `ಶತದಡ್ಡ’ ಎನಿಸಿಕೊಂಡಿದ್ದ ಐನ್‍ಸ್ಟೈನ್ ಮುಂದೆ `ಜೀನಿಯಸ್’ ಎನಿಸಿಕೊಂಡು ಜೀವಂತ ದಂತಕಥೆಯಾದರು. ಅವರು ಸತ್ತ ನಂತರ ಅವರ ಮೆದುಳು ಕುತೂಹಲದ ವಸ್ತುವಾಗಿ ಅಧ್ಯಯನದ ವಸ್ತುವಾಯಿತು. ಇದಕ್ಕೆ ಕಾರಣ ಅವರು ಮಂಡಿಸಿದ ಎರಡು `ಸಾಪೇಕ್ಷ ಸಿದ್ಧಾಂತ’ಗಳು (`ಥಿಯರಿ ಆಫ್ ರಿಲೇಟಿವಿಟಿ’). ಅವರ ಈ ಸಿದ್ಧಾಂತಗಳು ವೈಜ್ಞಾನಿಕ ರಂಗದಲ್ಲಿ ಭಾರಿ ಕ್ರಾಂತಿಯನ್ನೇ ಸೃಷ್ಟಿಸಿದವು. ಸಾಪೇಕ್ಷ ಸಿದ್ಧಾಂತ ಇಲ್ಲದೇ ಇದ್ದಿದ್ದರೆ ಇಂದು ಎಷ್ಟೋ ವೈಜ್ಞಾನಿಕ ತಿಳಿವಳಿಕೆ ಸಾಧ್ಯವೇ ಆಗುತ್ತಿರಲಿಲ್ಲ. ಅಂತಹ `ಅದ್ಭುತ ಕಲ್ಪನೆ’ ಐನ್‍ಸ್ಟೈನ್ ತಲೆಗೆ ಹೇಗೆ ಹೊಳೆಯಿತು? ಅಷ್ಟೊಂದು ಸಂಕೀರ್ಣವಾದ ಹಾಗೂ ಕ್ಲಿಷ್ಟಕರವಾದ ಚಿಂತನೆ ಹಾಗೂ ವಿಶ್ಲೇಷಣೆ ಮಾಡಬೇಕಾದರೆ ಅವರ ಬುದ್ಧಿಶಕ್ತಿ ಎಷ್ಟು ತೀಕ್ಷ್ಣವಾಗಿರಬೇಕು? ಅವರ ಮೆದುಳಿನ ಯಾವ ಯಾವ ಭಾಗಗಳು ಹೇಗಿರಬಹುದು? – ಈ ರೀತಿಯ ಪ್ರಶ್ನೆಗಳು ಎಲ್ಲ ವಿಜ್ಞಾನಿಗಳ, ಎಲ್ಲರ ಮನಸ್ಸನ್ನೂ (ಐನ್‍ಸ್ಟೈನ್ ಬದುಕಿರುವಾಗಲೇ) ಕೊರೆಯುತ್ತಿದ್ದವು.

1955ರ ಏಪ್ರಿಲ್ 18ರಂದು 76 ವರ್ಷದ ಐನ್‍ಸ್ಟೈನ್ ನಿಧನರಾದಾಗ ಅವರ ಮೆದುಳನ್ನು ತೆಗೆದು ಅದರ ವೈಶಿಷ್ಟ್ಯಗಳನ್ನು ಪರೀಕ್ಷಿಸುವ ಅಸಾಮಾನ್ಯ ಬೆಳವಣಿಗೆ ನಡೆಯಿತು! ಸೃಷ್ಟಿಯ (ಬ್ರಹ್ಮಾಂಡದ) ಅನೇಕ ರಹಸ್ಯಗಳನ್ನು ಹೊರಗೆಡವಿದ ಅದ್ಭುತ ಮೆದುಳು ಜನರ ತೀವ್ರ ಕುತೂಹಲ ಹಾಗೂ ಸಂಶೋಧನೆಯ ವಸ್ತುವಾಯಿತು!

ಅವರ ಮೆದುಳಿನ ನರಸಂಯೋಜನೆ, ಕೋಶಗಳ ಸ್ವರೂಪ, ಆಕಾರ, ಲಕ್ಷಣಗಳ ಬಗ್ಗೆ ಅಧ್ಯಯನ ನಡೆಸಲು ಅವರು ಸತ್ತ 7 ಗಂಟೆಗಳ ಒಳಗಾಗಿ ಅಮೆರಿಕದ ನ್ಯೂಜೆರ್ಸಿಯ ಪ್ರಿನ್ಸ್‍ಟನ್ ಆಸ್ಪತ್ರೆಯಲ್ಲಿ ಅವರ ಶರೀರದಿಂದ ಮೆದುಳನ್ನು ಬೇರ್ಪಡಿಸಿ ಹೊರತೆಗೆಯಲಾಯಿತು. ಅವರ ಶವಪರೀಕ್ಷೆ ನಡೆಸಿದ ಥಾಮಸ್ ಸ್ಟೋಲ್ಸ್ ಹಾರ್ವಿ ಎಂಬ ತಜ್ಞ ಅವರ ಮೆದುಳನ್ನು ತೆಗೆದು, ತೂಕಮಾಡಿ, ಸಂರಕ್ಷಿಸಿ ಇಟ್ಟರು. ವಿವಿಧ ಕೋನಗಳಿಂದ ಮೆದುಳಿನ ಫೋಟೋಗಳನ್ನು ತೆಗೆದ ನಂತರ ಅದನ್ನು 240 ಚಿಕ್ಕಚಿಕ್ಕ ಹೋಳುಗಳಾಗಿ ಹೆಚ್ಚಿ ಸೆಲ್ಯುಲಾಯ್ಡ್ ಎಂಬ ಪ್ಲಾಸ್ಟಿಕ್ ಮಾದರಿಯ ಪದಾರ್ಥದೊಳಗೆ ಸಂರಕ್ಷಿಸಿ ಇಟ್ಟರು.

ಇಷ್ಟೆಲ್ಲ ಆದ ನಂತರ ಅವರನ್ನು `ಪ್ರಿನ್ಸ್‍ಟನ್ ಆಸ್ಪತ್ರೆ’ಯ ಕೆಲಸದಿಂದ ತೆಗೆದುಹಾಕಲಾಯಿತು.
ಇಲ್ಲಿ ಗಮನಿಸಬೇಕಾದ ಎರಡು ವಿಷಯಗಳಿವೆ. ಒಂದು, ಅದ್ಭುತ ಅಧ್ಯಯನದ ವಿವರಗಳು ಎಲ್ಲರಿಗೂ ಸಿಗುತ್ತವೆ ಎಂಬುದು. ಇನ್ನೊಂದು, ಜಗತ್ತಿಗೆ ಮಾದರಿಯಾಗಿದ್ದ ಮಹಾನ್ ವಿಜ್ಞಾನಿಯ ಮೆದುಳು ವ್ಯಾಪಾರಿಗಳ ಮಾರಾಟದ ವಸ್ತುವಾಯಿತೇ ಎಂಬುದು. ಆದರೆ ಐನ್‍ಸ್ಟೈನರ ಮೆದುಳನ್ನು ಎಂದೋ ಕತ್ತರಿಸಿ ಆಗಿದೆ. ಅಧ್ಯಯನ ನಡೆಸಲು ವಿಜ್ಞಾನಿಗಳಿಗೆ ಅದೀಗ ಲಭ್ಯವಿಲ್ಲ. ಈಗ ವಿಜ್ಞಾನಿಗಳು, ಬೋಧಕರು ಸೇರಿದಂತೆ ಎಲ್ಲರಿಗೂ ಐ-ಪ್ಯಾಡ್ ಮೂಲಕ ಅದರ ಚಿತ್ರಗಳು ಸುಲಭವಾಗಿ ಸಿಗುತ್ತಿರುವುದು ಒಳ್ಳೆಯದು ಎಂಬ ಅಭಿಪ್ರಾಯವೂ ಇದೆ. ನೀವೇನಂತೀರಿ?